ರಂಜಾನ್ ಮಾಸದಲ್ಲಿ ಭಿಕ್ಷೆಗೆ ಬಂದ ಮಹಿಳೆಯನ್ನು ಮಕ್ಕಳ ಕಳ್ಳಿಯೆಂದು ಭಾವಿಸಿ ಧರ್ಮದೇಟು ಕೊಟ್ಟ ಜನ!

Published : Feb 28, 2026, 05:30 PM IST

ಬೆಳಗಾವಿಯಲ್ಲಿ 'ಮಕ್ಕಳ ಕಳ್ಳರು' ಬಂದಿದ್ದಾರೆ ಎಂಬ ಸುಳ್ಳು ವದಂತಿಯಿಂದಾಗಿ, ಜನರು ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರನ್ನು ಥಳಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆ ರಕ್ಷಿಸಿದ್ದು, ಇಂತಹ ವದಂತಿಗಳನ್ನು ನಂಬದಂತೆ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳದಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

PREV
16
ಮಕ್ಕಳ ಕಳ್ಳಿ ಎಂದು ಭಾವಿಸಿ ಮಹಿಳೆಗೆ ಹಲ್ಲೆ

ಬೆಳಗಾವಿ (ಫೆ.28): ಕುಂದಾನಗರಿ ಬೆಳಗಾವಿಯಲ್ಲಿ ಕಳೆದ ಎರಡು ದಿನಗಳಿಂದ 'ಮಕ್ಕಳ ಕಳ್ಳರು' ಬಂದಿದ್ದಾರೆ ಎಂಬ ಸುಳ್ಳು ವದಂತಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಈ ವದಂತಿಯ ಪರಿಣಾಮವಾಗಿ ಇಂದು ನಗರದ ನ್ಯೂ ಗಾಂಧಿ ನಗರದಲ್ಲಿ ಭಿಕ್ಷೆ ಬೇಡಲು ಬಂದಿದ್ದ ಮಹಿಳೆಯೊಬ್ಬರನ್ನು 'ಮಕ್ಕಳ ಕಳ್ಳಿ' ಎಂದು ತಪ್ಪಾಗಿ ಭಾವಿಸಿದ ಸಾರ್ವಜನಿಕರು ಆಕೆಗೆ ಮನಬಂದಂತೆ ಥಳಿಸಿರುವ ಆಘಾತಕಾರಿ ಘಟನೆ ನಡೆದಿದೆ.

26
ಘಟನೆಯ ವಿವರ

ರಮಜಾನ್ ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಅನ್ಯ ಊರುಗಳಿಂದ ಭಿಕ್ಷುಕರು ಬೆಳಗಾವಿ ನಗರಕ್ಕೆ ಆಗಮಿಸುತ್ತಾರೆ. ಇಂದು ನ್ಯೂ ಗಾಂಧಿ ನಗರಕ್ಕೆ ಭಿಕ್ಷೆ ಬೇಡಲು ಬಂದಿದ್ದ ಮಹಿಳೆಯೊಬ್ಬರ ಮೇಲೆ ಸ್ಥಳೀಯ ಮಹಿಳೆಯರು ಹಾಗೂ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸಂದೇಶಗಳಿಂದ ಪ್ರೇರಿತರಾದ ಜನರು, ಆಕೆಯನ್ನು ಮಕ್ಕಳ ಕಳ್ಳಿ ಎಂದು ಕೂಗಾಡಿ ರಂಪಾಟ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಜನರು ಜಮಾಯಿಸಿದ್ದು, ಮಹಿಳೆಗೆ ಧರ್ಮದೇಟು ನೀಡಿದ್ದಾರೆ.

36
ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಜಟಾಪಟಿ

ವಿಷಯ ತಿಳಿಯುತ್ತಿದ್ದಂತೆಯೇ ಮಾಳಮಾರುತಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸಂತ್ರಸ್ತ ಮಹಿಳೆಯನ್ನು ಜನರ ಕೈಯಿಂದ ರಕ್ಷಿಸಿ ವಶಕ್ಕೆ ಪಡೆಯಲು ಯತ್ನಿಸಿದಾಗ, ಸಾರ್ವಜನಿಕರು ಪೊಲೀಸರೊಂದಿಗೂ ವಾಗ್ವಾದಕ್ಕಿಳಿದರು. ಆಕೆಯನ್ನು ನಮಗೆ ಒಪ್ಪಿಸಿ ಎಂದು ಪಟ್ಟು ಹಿಡಿದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನೆಗೆ ಜನರನ್ನು ಗದರಿಸಿ ಅಲ್ಲಿಂದ ಕಳುಹಿಸಿದ ಪೊಲೀಸರು, ಮಹಿಳೆಯನ್ನು ಸುರಕ್ಷಿತವಾಗಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

46
ಸರಣಿ ಘಟನೆಗಳಿಂದ ಹೆಚ್ಚಿದ ಆತಂಕ

ಕೇವಲ ನ್ಯೂ ಗಾಂಧಿ ನಗರ ಮಾತ್ರವಲ್ಲದೆ, ನಿನ್ನೆಯಷ್ಟೇ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಅಲ್ಲಿಯೂ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅನಾಮಧೇಯ ಆಡಿಯೋ ಕ್ಲಿಪ್‌ಗಳು ಈ ಎಲ್ಲಾ ಅವಾಂತರಗಳಿಗೆ ಮೂಲ ಕಾರಣವಾಗಿವೆ. ‘ಬೆಳಗಾವಿಗೆ ಹೊರ ರಾಜ್ಯದ ಮಕ್ಕಳ ಕಳ್ಳರ ಗ್ಯಾಂಗ್ ಬಂದಿದೆ, ಎಚ್ಚರವಾಗಿರಿ’ ಎಂಬ ಆಧಾರರಹಿತ ಸಂದೇಶಗಳು ಜನರನ್ನು ಹಾದಿ ತಪ್ಪಿಸುತ್ತಿವೆ.

56
ಪೊಲೀಸ್ ಕಮಿಷನರ್ ಮನವಿ

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಜಿ. ಬೊರಸೆ ಅವರು ಸಾರ್ವಜನಿಕರಿಗೆ ವಿಶೇಷ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ. 'ಬೆಳಗಾವಿಯಲ್ಲಿ ಯಾವುದೇ ಮಕ್ಕಳ ಕಳ್ಳರ ಗ್ಯಾಂಗ್ ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ವದಂತಿಗಳನ್ನು ಮತ್ತು ಆಡಿಯೋಗಳನ್ನು ಯಾರೂ ನಂಬಬಾರದು. ಯಾರಾದರೂ ಅನುಮಾನಾಸ್ಪದವಾಗಿ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

66
ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆ

ಆದರೆ, ಜನರಿಂದ ಧರ್ಮದೇಟು ತಿಂದ ಮಹಿಳೆ ಗಾಯಗೊಂಡು ಪೊಲೀಸರ ರಕ್ಷಣೆಯ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಬೆಳಗಾವಿ ನಗರದಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದು, ವದಂತಿ ಹರಡುವ ಸೈಬರ್ ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ. ಇನ್ನು ಪೊಲೀಸರು ಕೂಡ ಯಾವುದೇ ಮಗು ಕಿಡ್ನಾಪ್ ಆಗಿರುವ ದೂರುಗಳಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read more Photos on
click me!

Recommended Stories