ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಸಮ್ಮಿಶ್ರ ಸರ್ಕಾರ ರಚಿಸಲು ಸಜ್ಜಾಗಿದೆ. ವಿಸಿಕೆ, ಕಾಂಗ್ರೆಸ್, ಮತ್ತು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಸಚಿವ ಸಂಪುಟ ಹಂಚಿಕೆಯ ಸೂತ್ರದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸಲಿದ್ದಾರೆ.
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 'ಸಮ್ಮಿಶ್ರ ಸರ್ಕಾರ' ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ. ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರು ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಗಳಿಸಿದ್ದು, ಮೈತ್ರಿ ಧರ್ಮದಂತೆ ಮಿತ್ರಪಕ್ಷಗಳಿಗೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
25
ಸಚಿವ ಸಂಪುಟ ಹಂಚಿಕೆ ಸೂತ್ರ
ಮೂಲಗಳ ಪ್ರಕಾರ, ವಿಜಯ್ ಅವರ ಸಚಿವ ಸಂಪುಟದಲ್ಲಿ ಮಿತ್ರಪಕ್ಷಗಳಿಗೆ ಈ ಕೆಳಗಿನಂತೆ ಸ್ಥಾನಗಳನ್ನು ಹಂಚಿಕೆ ಮಾಡಲು ಪ್ರಾಥಮಿಕವಾಗಿ ನಿರ್ಧರಿಸಲಾಗಿದೆ ತೋಳ್ ತಿರುಮಾವಳವನ್ ನೇತೃತ್ವದ ವಿಡುತಲೈ ಚಿರುತ್ತೈಗಳ್ ಕಚ್ಚಿ (ವಿಸಿಕೆ) ಪಕ್ಷಕ್ಕೆ ಒಂದು ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಸ್ವತಃ ತಿರುಮಾವಳವನ್ ಅವರೇ ಸಂಪುಟ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.
35
ಎಡಪಕ್ಷಗಳಿಗೆ ಎರಡು ಸಚಿವ ಸ್ಥಾನ
ಮೈತ್ರಿಯಲ್ಲಿ ಭಾಗಿಯಾಗಿರುವ ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಮತ್ತು ಸಿಪಿಐ (ಮಾರ್ಕ್ಸ್‌ವಾದಿ) ಪಕ್ಷಗಳಿಗೆ ಒಟ್ಟು ಎರಡು ಸಚಿವ ಸ್ಥಾನಗಳನ್ನು ನೀಡಲು ತೀರ್ಮಾನಿಸಲಾಗಿದೆ. ಇನ್ನು ಈ ಮೊದಲೇ ಬೆಂಬಲ ನೀಡಿದ್ದ ಕಾಂಗ್ರೆಸ್ ಪಕ್ಷ 2 ಸಚಿವ ಸ್ಥಾನವನ್ನು ಪಡೆಯಲಿದೆ.
ದಶಕಗಳಿಂದ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯ ಏಕಪಕ್ಷೀಯ ಆಡಳಿತಕ್ಕೆ ಒಗ್ಗಿಕೊಂಡಿದ್ದ ತಮಿಳುನಾಡಿಗೆ ಇದು ಹೊಸ ಅನುಭವ. ಮುಖ್ಯಮಂತ್ರಿ ಗದ್ದುಗೆಯನ್ನು ವಿಜಯ್ ಅಲಂಕರಿಸಲಿದ್ದು, ಸಣ್ಣ ಪಕ್ಷಗಳ ಶಾಸಕರು ಸಚಿವರಾಗಿ ಆಡಳಿತದಲ್ಲಿ ಭಾಗಿಯಾಗಲಿದ್ದಾರೆ. ಇದು ರಾಜ್ಯದ ರಾಜಕೀಯ ಸಮೀಕರಣದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಲಿದೆ.
55
ಇಂದು ಸಂಜೆ ರಾಜ್ಯಪಾಲರ ಭೇಟಿ
ಕಳೆದ ಮೂರು ದಿನಗಳಲ್ಲಿ ವಿಜಯ್ ಮೂರನೇ ಬಾರಿಗೆ ರಾಜ್ಯಪಾಲ ಆರ್ಲೇಕರ್ ಅವರನ್ನು ಭೇಟಿಯಾಗಲಿದ್ದಾರೆ. ವಿಸಿಕೆ ಮುಖ್ಯಸ್ಥರ ಜೊತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ ಬೆನ್ನಲ್ಲಿಯೇ ವಿಸಿಕೆ ಅಧಿಕೃತವಾಗಿ ತನ್ನ ಬೆಂಬಲವನ್ನು ಟಿವಿಕೆಗೆ ಸೂಚಿಸಿದೆ. ವಿಜಯ್ ಅವರು ಈಗಾಗಲೇ ಬಹುಮತದ ಸಂಖ್ಯಾಬಲವನ್ನು ಕ್ರೋಢೀಕರಿಸಿದ್ದು, ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಮೈತ್ರಿ ಸರ್ಕಾರದ ಹಕ್ಕು ಮಂಡಿಸಲಿದ್ದಾರೆ. ಮೈತ್ರಿ ಪಕ್ಷಗಳ ನಡುವಿನ ಅಧಿಕಾರ ಹಂಚಿಕೆಯ ಈ ಸೂತ್ರವು ಸರ್ಕಾರದ ಸ್ಥಿರತೆಗೆ ನಾಂದಿ ಹಾಡಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ