ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತೀಯರ ದೀಪಾವಳಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಅಪಾಯಕಾರಿ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಇವರಿಗೆ ದೀಪಾವಳಿಗೆ ಸಾರ್ವತ್ರಿಕ ರಜೆ ಬೇಕಂತೆ ಇದೇನು ಭಾರತವೇ ಎಂದೂ ಪ್ರಶ್ನಿಸಿದ್ದಾರೆ. ಜೊತೆಗೆ, ದೀಪಾವಳಿಗೆ ಹಾಕುವ ಲೈಟಿಂಗ್ಸ್ ಕ್ರಿಸ್‌ಮಸ್‌ಗೆ ಏಕೆ ಹಾಕೊಲ್ಲ ಎಂದಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಭಾರತೀಯ ಸಮುದಾಯದ ಮನೆಗಳು ದೀಪಾವಳಿಯ ಅದ್ದೂರಿ ಅಲಂಕಾರಗಳಿಂದ ಕಂಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಸ್ಥಳೀಯ ಮಹಿಳೆಯೊಬ್ಬರು ಈ ವಿದ್ಯಮಾನವು ಪಾಶ್ಚಿಮಾತ್ಯ ಸಂಸ್ಕೃತಿಗೆ ಅಪಾಯಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಸಮ್ಮಿಲನ (Cultural Assimilation) ಮತ್ತು ವೈವಿಧ್ಯತೆಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
28
ವೈರಲ್ ಆದ ಪೋಸ್ಟ್ ಮತ್ತು ವಿವಾದ
ಸಿಡ್ನಿಯ ನಿರಿಂಬಾ ಫೀಲ್ಡ್ಸ್ (Nirimba Fields) ಪ್ರದೇಶದಲ್ಲಿ ಭಾರತೀಯ ಮೂಲದವರೇ ಅಧಿಕವಾಗಿರುವ ನೆರೆಹೊರೆಯಲ್ಲಿ, ಕ್ರಿಸ್‌ಮಸ್‌ಗೆ ಅಲಂಕರಿಸದ ಮನೆಗಳು ದೀಪಾವಳಿಯ ಸಂದರ್ಭದಲ್ಲಿ ವರ್ಣರಂಜಿತ ದೀಪಗಳಿಂದ ಅದ್ಭುತವಾಗಿ ಅಲಂಕರಿಸಲ್ಪಟ್ಟಿದ್ದ ವಿಡಿಯೋವನ್ನು ಕೋಬಿ ಥ್ಯಾಚರ್ ಎಂಬ ಆಸ್ಟ್ರೇಲಿಯಾ ಮಹಿಳೆ ತನ್ನ 'ಎಕ್ಸ್' (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
38
ಕ್ರಿಸ್‌ಮಸ್‌ಗೆ ದೀಪಗಳಿಂದ ಅಲಂಕರಿಸುವುದಿಲ್ಲ
ಈ ವಿಡಿಯೋದ ಕೆಳಗೆ, 'ಈ ಮನೆಗಳನ್ನು ಕ್ರಿಸ್‌ಮಸ್‌ಗೆ ದೀಪಗಳಿಂದ ಅಲಂಕರಿಸುವುದಿಲ್ಲ. ಆದರೆ ದೀಪಾವಳಿಗೆ ಅಲಂಕರಿಸುತ್ತಾರೆ. ಈ ನೆರೆಹೊರೆಯ ಬಹುತೇಕರು ಭಾರತೀಯರೇ. ನಾವು ನಮ್ಮದೇ ಆದ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು' ಎಂದು ಬರೆದುಕೊಂಡಿದ್ದಾರೆ.
ಕೋಬಿ ಥ್ಯಾಚರ್ ಅವರು ಇದೇ ವಿಷಯಕ್ಕೆ ಸಂಬಂಧಿಸಿ ಪೋಸ್ಟ್ ಹಂಚಿಕೊಂಡಿದ್ದು, ಆಸ್ಟ್ರೇಲಿಯಾದಲ್ಲಿರುವ ಕೆಲವು ಹಿಂದೂಗಳು ದೀಪಾವಳಿ ಹಬ್ಬವನ್ನು ಅಧಿಕೃತ ಸಾರ್ವಜನಿಕ ರಜಾದಿನವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
58
ಇದು ಆಸ್ಟ್ರೇಲಿಯಾ, ಭಾರತವಲ್ಲ
ಇದಕ್ಕೆ ತಿರುಗೇಟು ನೀಡಿದ ಅವರು, 'ಇದು ಆಸ್ಟ್ರೇಲಿಯಾ, ಭಾರತವಲ್ಲ. ನೀವು ಆರಿಸಿಕೊಂಡ ದೇಶವನ್ನು ಪ್ರತಿಬಿಂಬಿಸಲು ನಾವು ನಮ್ಮ ದೇಶವನ್ನು ಬದಲಾಯಿಸಿಕೊಳ್ಳುವುದಿಲ್ಲ' ಎಂದು ಖಡಕ್ ಸಂದೇಶ ನೀಡಿದ್ದಾರೆ.
68
ಸಾರ್ವಜನಿಕ ವಲಯದಿಂದ ತೀವ್ರ ವಿರೋಧ:
ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಅನೇಕ ನೆಟ್ಟಿಗರು ಕೋಬಿ ಥ್ಯಾಚರ್ ಅವರ ಅಭಿಪ್ರಾಯವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಒಬ್ಬ ಬಳಕೆದಾರರು, 'ಕಷ್ಟಪಟ್ಟು ದುಡಿಯುವ ಜನರು ಆಸ್ಟ್ರೇಲಿಯಾವನ್ನು ತಮ್ಮ ಮನೆಯಾಗಿ ಸ್ವೀಕರಿಸುತ್ತಾರೆ ಮತ್ತು ಇಲ್ಲಿನ ಜೀವನ ವಿಧಾನವನ್ನು ಒಪ್ಪಿಕೊಳ್ಳುವಾಗಲೇ ತಮ್ಮ ಸಂಸ್ಕೃತಿಯನ್ನೂ ಕಾಪಾಡಿಕೊಳ್ಳುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ' ಎಂದು ಪ್ರತಿಕ್ರಿಯಿಸಿದ್ದಾರೆ.
78
ಆಸ್ಟ್ರೇಲಿಯಾದ ಬಹುಸಂಸ್ಕೃತಿ
ಅನೇಕರು ಭಾರತೀಯರು ವಿದೇಶದಲ್ಲಿದ್ದರೂ ತಮ್ಮ ಸಂಸ್ಕೃತಿಯನ್ನು ಗೌರವಯುತವಾಗಿ ಆಚರಿಸುತ್ತಾರೆ, ಮತ್ತು ಇದು ಆಸ್ಟ್ರೇಲಿಯಾದ ಬಹುಸಂಸ್ಕೃತಿಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
88
ಗಂಭೀರವಾದ ಸಾಂಸ್ಕೃತಿಕ ಸಂವಾದಕ್ಕೆ ನಾಂದಿ
ಈ ಬೆಳವಣಿಗೆಯು, ವಲಸೆ ಹೋಗಿ ನೆಲೆಸಿದವರು ತಮ್ಮ ನೆಲದ ಸಂಸ್ಕೃತಿಯನ್ನು ಗೌರವಿಸಬೇಕು ಮತ್ತು ನೆಲೆಯೂರಿದ ನಾಡಿನ ಸಂಸ್ಕೃತಿಯೊಂದಿಗೆ ಹೊಂದಾಣಿಕೆ ಸಾಧಿಸಬೇಕೇ ಎಂಬ ಗಂಭೀರವಾದ ಸಾಂಸ್ಕೃತಿಕ ಸಂವಾದಕ್ಕೆ ನಾಂದಿ ಹಾಡಿದೆ.