ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಸಾವಿಗೆ ಭಾರತ ಸರ್ಕಾರ ಸಂತಾಪ ಸೂಚಿಸದಿರುವುದಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಟೀಕಿಸಿದ್ದು, ಭಾರತದ ಈ ನಿಲುವು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ರಾಜತಾಂತ್ರಿಕ ಕಾರಣಕ್ಕೆ ಭಾರತ ಸರ್ಕಾರವೂ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿಗೆ ಯಾವುದೇ ಅಧಿಕೃತವಾದ ಸಂತಾಪ ವ್ಯಕ್ತಪಡಿಸಿಲ್ಲ, ಭಾರತದ ಹಿಂದಿನ ಹಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಭಾರತ ಇಸ್ರೇಲ್ ಅಮೆರಿಕಾ ಜಂಟಿ ದಾಳಿಯಲ್ಲಿ ಹತ್ಯೆಯಾದ ಅಲಿ ಖಮೇನಿ ಅವರ ಸಾವಿಗೆ ಸಂತಾಪ ಸೂಚಿಸಿಲ್ಲ. ಆದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಭಾರತ ಸರ್ಕಾರದ ಈ ನಿಲುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿಯೂ ಮೌನವಾಗಿರುವುದು ತಟಸ್ಥ ನೀತಿಯಲ್ಲ ಇದೊಂದು ಪದತ್ಯಾಗ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಬರೆದ ಅಂಕಣದಲ್ಲಿ, ಕಾಂಗ್ರೆಸ್ ನಾಯಕಿ ಟೆಹ್ರಾನ್‌ನೊಂದಿಗಿನ ದೆಹಲಿಯ ಸಂಬಂಧಗಳು ನಾಗರಿಕ ಮತ್ತು ಕಾರ್ಯತಂತ್ರ ಪರವಾಗಿತ್ತು ಎಂದಿದ್ದಲ್ಲದೇ ಇರಾನ್ ಭಾರತದ ಸಹಾಯಕ್ಕೆ ಬಂದ ಹಲವಾರು ಸಂದರ್ಭಗಳನ್ನು ನರೇಂದ್ರ ಮೋದಿ ಸರ್ಕಾರಕ್ಕೆ ಸೋನಿಯಾ ಗಾಂಧಿ ನೆನಪಿಸಿದ್ದಾರೆ.
25
ಭಾರತ ಸರ್ಕಾರದ ನಡೆಗೆ ಸೋನಿಯಾ ಗಾಂಧಿ ಅಸಮಾಧಾನ
ಖಮೇನಿಯವರ ಸಾವಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ, ಆದರೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಂಯಮ ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮೋದಿ ಸರ್ಕಾರ ಕರೆ ನೀಡಿದೆ. ಕೇಂದ್ರ ಸರ್ಕಾರದ ನಿರ್ಧಾರವೂ ಪ್ರಸ್ತುತ ಜಾಗತಿಕ ರಾಜಕೀಯದಲ್ಲಿ ಅಸ್ಥಿರತೆ, ರಾಷ್ಟ್ರದ ಹಿತಾಸಕ್ತಿ, ರಾಜತಾಂತ್ರಿಕ ಪ್ರತಿಕ್ರಿಯೆ, ಜಾಗತಿಕ ನಿಲುವುಗಳನ್ನು ಆಧರಿಸಿದೆ ಎಂದು ಮೂಲಗಳು ಹೇಳಿವೆ. ಇರಾನ್ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಹೊಸೇನಿ ಖಮೇನಿ ಅವರನ್ನು ಮಾರ್ಚ್ 1 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ದೃಢಪಡಿಸಿತು. ಎರಡು ರಾಷ್ಟ್ರಗಳ ಮಧ್ಯೆ ಮಾತುಕತೆಗಳ ನಡೆಯುತ್ತಿರುವಾಗಲೇ ಹಾಲಿ ರಾಷ್ಟ್ರದ ಮುಖ್ಯಸ್ಥರ ಹತ್ಯೆಯು ಸಮಕಾಲೀನ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಗಂಭೀರ ಬಿರುಕು ಮೂಡಿಸುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಈ ವಿಚಾರದ ಬಗ್ಗೆ ದೆಹಲಿಯ ಮೌನವು ಅಷ್ಟೇ ಸ್ಪಷ್ಟವಾಗಿ ಎದ್ದು ಕಾಣುತ್ತದೆ ಎಂದು ಹೇಳಿದರು.
35
ಮೋದಿ ನಿಲುವಿಗೆ ಆಕ್ರೋಶ
ಆರಂಭದಲ್ಲಿ ಅಮೆರಿಕ ಇಸ್ರೇಲ್‌ನ ಇರಾನ್ ಮೇಲೆ ನಡೆಸಿದ ಬೃಹತ್ ದಾಳಿಯನ್ನು ನಿರ್ಲಕ್ಷಿಸಿ, ಪ್ರಧಾನಿ ನರೇಂದ್ರ ಮೋದಿ ಯುಎಇ ಮೇಲೆ ಇರಾನ್ ನಡೆಸಿದ ಪ್ರತೀಕಾರದ ದಾಳಿಯನ್ನು ಖಂಡಿಸುವುದಕ್ಕೆ ಮಾತ್ರ ಸೀಮಿತರಾದರು, ಆದರೆ ಅದಕ್ಕಿಂತ ಹಿಂದೆ ನಡೆದ ಘಟನೆಗಳ ಬಗ್ಗೆ ಅವರು ಪ್ರತಿಕ್ರಿಯಿಸಲಿಲ್ಲ,ಅವರು ತಮ್ಮ ಆಳವಾದ ಕಳವಳದ ಬಗ್ಗೆ ಸ್ಪಷ್ಟ ಮಾತುಗಳನ್ನಾಡಿದರು ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಯ ಬಗ್ಗೆ ಮಾತನಾಡಿದರು ಎಂದು ಸೋನಿಯಾ ಗಾಂಧಿ ಹೇಳಿದರು.
ವಿದೇಶಿ ನಾಯಕನ ಹತ್ಯೆಯ ಬಗ್ಗೆ ನಮ್ಮ ದೇಶದಿಂದ ಸಾರ್ವಭೌಮತ್ವ ಅಥವಾ ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ರಕ್ಷಣೆಯ ವಿಚಾರವಾಗಿ ಯಾವುದೇ ಹೇಳಿಕೆ ಬಾರದೇ ಹೋದಾಗ ಅದು ನಮ್ಮ ವಿದೇಶಾಂಗ ನೀತಿಯ ನಿರ್ದೇಶನ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಅನುಮಾನಗಳು ಹುಟ್ಟು ಹಾಕುತ್ತದೆ. ಔಪಚಾರಿಕ ಯುದ್ಧದ ಘೋಷಣೆಯಿಲ್ಲದೆ ಮತ್ತು ರಾಜತಾಂತ್ರಿಕ ಪ್ರಕ್ರಿಯೆಯ ಸಮಯದಲ್ಲಿ ಈ ಹತ್ಯೆಯನ್ನು ನಡೆಸಲಾಗಿದೆ ಅಂತಹ ಕೃತ್ಯಗಳು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಿಂದ ಆಕ್ಷೇಪಣೆಯಿಲ್ಲದೆ ಹೋದಾಗ ಅಂತರರಾಷ್ಟ್ರೀಯ ಮಾನದಂಡಗಳ ಪಾಲಿಸದೇ ಇರುವುದು ಸಾಮಾನ್ಯ ಎಂದಾಗಿ ಬಿಡುತ್ತದೆ.
ಹತ್ಯೆಗೆ ಕೇವಲ 48 ಗಂಟೆಗಳ ಮೊದಲು, ಪ್ರಧಾನಿ ಮೋದಿ ಇಸ್ರೇಲ್‌ಗೆ ಭೇಟಿ ನೀಡಿ ವಾಪಸ್ ಬಂದರು.ಅಲ್ಲಿ ಅವರು ಬೆಂಜಮಿನ್ ನೆತನ್ಯಾಹು ಸರ್ಕಾರಕ್ಕೆ ನಿಸ್ಸಂದಿಗ್ಧ ಬೆಂಬಲವನ್ನು ಪುನರುಚ್ಚರಿಸಿದರು, ಗಾಜಾದಲ್ಲಿನ ಸಂಘರ್ಷವು ನಾಗರಿಕ ಸಾವುನೋವುಗಳ ಪ್ರಮಾಣದ ಬಗ್ಗೆ ಜಾಗತಿಕ ಆಕ್ರೋಶವನ್ನು ಎದುರಿಸುತ್ತಿದ್ದರೂ ಸಹ, ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಂಧಿ ಹೇಳಿದರು.
1994 ರಲ್ಲಿ, ಇಸ್ಲಾಮಿಕ್ ಸಹಕಾರ ಸಂಘಟನೆಯೊಳಗಿನ ವಿಭಾಗಗಳು ಕಾಶ್ಮೀರದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಭಾರತದ ವಿರುದ್ಧ ನಿರ್ಣಯವನ್ನು ಮಂಡಿಸಲು ಪ್ರಯತ್ನಿಸಿದಾಗ, ಟೆಹ್ರಾನ್ ಆ ಪ್ರಯತ್ನವನ್ನು ತಡೆಯುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಿತು. ಆ ಹಸ್ತಕ್ಷೇಪವು ಭಾರತದ ಆರ್ಥಿಕ ಪಥದಲ್ಲಿ ಸೂಕ್ಷ್ಮ ಕ್ಷಣದಲ್ಲಿ ಕಾಶ್ಮೀರ ಸಮಸ್ಯೆಯ ಅಂತರರಾಷ್ಟ್ರೀಕರಣವನ್ನು ತಡೆಯಲು ಸಹಾಯ ಮಾಡಿತು ಎಂದು ಸೋನಿಯಾ ಹೇಳಿದ್ದಾರೆ.
ಪಾಕಿಸ್ತಾನ ಗಡಿಯ ಸಮೀಪವಿರುವ ಜಹೇದಾನ್‌ನಲ್ಲಿ ಭಾರತದ ರಾಜತಾಂತ್ರಿಕ ಉಪಸ್ಥಿತಿಯನ್ನು ಇರಾನ್ ಸಕ್ರಿಯಗೊಳಿಸಿದೆ. ಇದು ಗ್ವಾದರ್ ಬಂದರು ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅಭಿವೃದ್ಧಿಗೆ ಪ್ರತಿಯಾದ ಕಾರ್ಯತಂತ್ರವಾಗಿದೆ ಎಂದು ಅವರು ಬರೆದಿದ್ದಾರೆ. ಏಪ್ರಿಲ್ 2001 ರಲ್ಲಿ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಟೆಹ್ರಾನ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ, ಇರಾನ್‌ನೊಂದಿಗಿನ ಭಾರತದ ನಾಗರಿಕ ಮತ್ತು ಸಮಕಾಲೀನ ಆಳವಾದ ಸಂಬಂಧಗಳನ್ನು ಆತ್ಮೀಯವಾಗಿ ಪುನರುಚ್ಚರಿಸಿದರು ಎಂಬುದನ್ನು ಪ್ರಸ್ತುತ ಸರ್ಕಾರ ನೆನಪಿಟ್ಟುಕೊಳ್ಳುವುದು ಒಳ್ಳೆಯದು ಎಂದು ಸೋನಿಯಾ ಹೇಳಿದ್ದಾರೆ.
ಭಾರತದ ವಿಚಾರದಲ್ಲಿ ಹಲವು ಬಾರಿ ಇರಾನ್ ಹಸ್ತಕ್ಷೇಪ ಮಾಡಿದೆ ಎಂದ ಕೇಂದ್ರ
ನಾಲ್ಕು ಬಾರಿ ಖಮೇನಿ ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ.
ಸರ್ಕಾರಿ ಮೂಲಗಳ ಪ್ರಕಾರ, ಭಾರತದೊಂದಿಗಿನ ಖಮೇನಿ ಅವರ ಬಾಂಧವ್ಯ ಅಂತಹ ಚೆನ್ನಾಗಿಯೇನು ಇರಲಿಲ್ಲ, 2017ರಿಂದ 2024 ರವರೆಗೆ, ಅವರು ನಾಲ್ಕು ಬಾರಿ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದರು, ಇದರಿಂದಾಗಿ ಪ್ರತಿ ಬಾರಿಯೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇರಾನಿನ ರಾಯಭಾರಿಗಳಿಗೆ ಸಮನ್ಸ್ ಜಾರಿ ಮಾಡಿತು. 2017 ರಲ್ಲಿ ಅವರು ಪಾಕಿಸ್ತಾನವನ್ನು ಪ್ರತಿಧ್ವನಿಸುತ್ತಾ ದಮನಿತ ಕಾಶ್ಮೀರಿಗಳಿಗಾಗಿ ಮುಸ್ಲಿಮರನ್ನು ಒಟ್ಟುಗೂಡಿಸಿದರು. 2019 ರಲ್ಲಿ 370 ನೇ ವಿಧಿ ರದ್ದತಿಯ ನಂತರ, ಅವರು "ನ್ಯಾಯಯುತ ನೀತಿ ಜಾರಿಗೆ ಒತ್ತಾಯಿಸಿದರು. 2020 ರ ದೆಹಲಿ ಗಲಭೆಯ ಸಮಯದಲ್ಲಿ, ಅವರು ಉಗ್ರಗಾಮಿ ಹಿಂದೂಗಳಿಂದ ಮುಸ್ಲಿಮರ ಹತ್ಯಾಕಾಂಡ ಎಂದು ಟ್ವಿಟ್ ಮಾಡಿದ್ದರು, #IndianMuslimsInDanger ಎಂದ ಹ್ಯಾಷ್‌ಟ್ಯಾಗ ಬಳಸಿದ್ದರು. ಆದರೆ ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿ ಸಂಕಷ್ಟಕ್ಕಿಡಾಗಿರುವ ಹಿಂದೂಗಳ ಬಗ್ಗೆ ಅವರು ಧ್ವನಿ ಎತ್ತಲೇ ಇಲ್ಲ. ಇರಾನ್‌ನ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಂ ವಿರೋಧಿ ಎಂದು ಟೀಕಿಸಿತು. ಸೆಪ್ಟೆಂಬರ್ 2024 ರಲ್ಲಿ, ಅವರು ಟ್ವೀಟ್‌ನಲ್ಲಿ ಭಾರತವನ್ನು ಗಾಜಾ ಮತ್ತು ಮ್ಯಾನ್ಮಾರ್‌ನೊಂದಿಗೆ ಹೋಲಿಸಿದರು.
ಈಗ ಇರಾನ್ ನಾಯಕನ ಸಾವಿನ ಬಗ್ಗೆ ಭಾರತದ ಸರ್ಕಾರ ಸಂತಾಪ ಸೂಚಿಸುತ್ತಿಲ್ಲ ಎಂದು ಬೇಸರಿಸುತ್ತಿರುವ ವಿರೋಧ ಪಕ್ಷವು(ಯುಪಿಎ)ಯೂ 2005, 2006, 2009 ಹೀಗೆ ಮೂರು ಬಾರಿ ಇರಾನ್ ವಿರುದ್ಧ ಮತ ಚಲಾಯಿಸಿದೆ ಎಂಬುದನ್ನು ಸರ್ಕಾರಿ ದಾಖಲೆಗಳು ತಿಳಿಸುತ್ತವೆ. 1 ಲಕ್ಷ ಕೋಟಿ ರೂ. ಎಲ್‌ಎನ್‌ಜಿ ಒಪ್ಪಂದ ರದ್ದು ಮಾಡುವುದಾಗಿ ಇರಾನ್ ಬೆದರಿಕೆಯ ನಡುವೆಯೂ ಯುಎಸ್ ಪರಮಾಣು ಒಪ್ಪಂದದ ಮಾತುಕತೆಯ ಸಮಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಇರಾನ್ ವಿರುದ್ಧ ಮೂರು ಬಾರಿ ಮತ ಚಲಾಯಿಸಿದೆ ಎಂದು ಸರ್ಕಾರಿ ದಾಖಲೆಗಳು ಸೂಚಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ