
ಮೇ 7 ಮತ್ತು 8 ರ ಮಧ್ಯರಾತ್ರಿ, ಭಾರತವು S-400 ಸುದರ್ಶನ ಚಕ್ರ ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ಬಳಸಿಕೊಂಡು 15 ಭಾರತೀಯ ನಗರಗಳ ಕಡೆಗೆ ಹಾರಿಸಲಾದ ಪಾಕಿಸ್ತಾನಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿತು. ಪಾಕಿಸ್ತಾನ ಭಾರತದ ಮೇಲೆ ಹಾರಿಸಿದ ಒಂದೇ ಒಂದು ಡ್ರೋನ್ ಕೂಡ ತನ್ನ ಗುರಿಯನ್ನು ತಲುಪಲಿಲ್ಲ. ಪ್ರತಿಯೊಂದನ್ನು ವಿಫಲಗೊಳಿಸಿತು. ಭಾರತೀಯ ರಕ್ಷಣಾ ಪಡೆ ಮತ್ತು ರಷ್ಯಾದ ಶಕ್ತಿಶಾಲಿ S-400 ವ್ಯವಸ್ಥೆ ಇದಕ್ಕೆ ಪ್ರಮುಖ ಕಾರಣ. ಜೊತೆಗೆ ಭಾರತ-ರಷ್ಯಾ ಸ್ನೇಹ ಎಷ್ಟು ಗಟ್ಟಿಯಾಗಿದೆ ಎಂಬುದು ಕೂಡ ನಾವಿಂದು ನೆನಪು ಮಾಡಿಕೊಳ್ಳಬೇಕು. ಇಷ್ಟು ಮಾತ್ರವಲ್ಲ ಬಲಿಷ್ಠ S-400 ಅನ್ನು ಭಾರತಕ್ಕೆ ತರಲು ಶ್ರಮಿಸಿದ ಅಂದಿನ ದಿವಂಗತ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಈಗ ನೆನಪಿಸಿಕೊಳ್ಳಲೇಬೇಕು. ಏಕೆಂದರೆ S-400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ತರುವುದು ಅಂದಿನ ರಕ್ಷಣಾ ಸಚಿವ ಪರಿಕ್ಕರ್ ಅವರ ಬಲವಾದ ಕನಸಾಗಿತ್ತು.
S-400 ರಷ್ಯಾದ ಅತ್ಯಂತ ಮುಂದುವರಿದ ದೀರ್ಘ ಶ್ರೇಣಿಯ ಮೇಲ್ಮೈ ಆಕಾಶ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. ಈ ಮಾರಕ ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ತರಲು ಶ್ರಮಿಸಿದ ಅಂದಿನ ರಕ್ಷಣಾ ಸಚಿವ ಪರಿಕ್ಕರ್ ಅವರನ್ನು ಇಂದು ಜನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನೆನೆದುಕೊಳ್ಳುತ್ತಿದ್ದಾರೆ. ಅವರೊಬ್ಬರ ಭಾರತ ಕಂಡ ಅತ್ಯಂತ ಶ್ರೇಷ್ಠ ರಕ್ಷಣಾ ಸಚಿವರು. ರಕ್ಷಣಾ ಕ್ಷೇತ್ರಕ್ಕೆ ಪರಿಕ್ಕರ್ ನೀಡಿದ ಕೊಡುಗೆಯನ್ನು ಭಾರತ-ಪಾಕಿಸ್ತಾನ ಯುದ್ಧ ಕಾರ್ಮೋಡದ ಈ ಸಮಯದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ. ಮನೋಹರ್ ಪರಿಕ್ಕರ್ ಅಕ್ಟೋಬರ್ 2014 ರಿಂದ ಮಾರ್ಚ್ 2017 ರವರೆಗೆ ಕೇಂದ್ರ ರಕ್ಷಣಾ ಸಚಿವರಾಗಿದ್ದಾಗ ಈ ಮಹತ್ವದ ಒಪ್ಪಂದವಾಯ್ತು.
2018 ರ ಮಾರ್ಚ್ ನಿಂದ ಜೂನ್ ವರೆಗೆ ಪರಿಕ್ಕರ್ ಅವರು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನಲ್ಲಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಭಾರತಕ್ಕೆ ಮರಳಿ ಸೆಪ್ಟೆಂಬರ್‌ನಲ್ಲಿ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‌ನಲ್ಲಿ ದಾಖಲಾಗಿದ್ದರು . ಅಕ್ಟೋಬರ್ 27, 2018 ರಂದು, ಗೋವಾ ಸರ್ಕಾರವು ಪರಿಕ್ಕರ್ ಅವರಿಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಇದೆ ಎಂದು ಘೋಷಿಸಿತು. ಮಾರ್ಚ್ 17, 2019 ರಂದು ತಮ್ಮ 63 ನೇ ವಯಸ್ಸಿನಲ್ಲಿ ಪಣಜಿಯಲ್ಲಿರುವ ತಮ್ಮ ನಿವಾಸದಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ನಿಧನರಾದರು. ದುರಾದೃಷ್ಟವಶಾತ್ ಎಸ್400 ಭಾರತಕ್ಕೆ ಬರುವ ಮುಂಚೆಯೇ ಪರಿಕ್ಕರ್ ಅಸ್ತಂಗತರಾದರು.
S-400 ಕ್ಷಿಪಣಿಗಳು 400 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಸ್ಟೆಲ್ತ್ ಫೈಟರ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು 600 ಕಿ.ಮೀ. ದೂರ ಇರುವ ಬೆದರಿಕೆಗಳನ್ನು ಪತ್ತೆ ಮಾಡುತ್ತದೆ. ಭಾರತಕ್ಕೆ ಬಂದ ನಂತರ ಎಸ್ -400 ಟ್ರಯಂಪ್ ಸುದರ್ಶನ ಚಕ್ರ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗೆ ನೀಡಲಾದ ಭಾರತೀಯ ಹೆಸರಾಗಿದೆ. ಸುದರ್ಶನ ಚಕ್ರ ಎಂಬ ಹೆಸರನ್ನು ಮಹಾಭಾರತದಿಂದ ತೆಗೆದುಕೊಳ್ಳಲಾಗಿದೆ ಇದು ನಿಖರತೆ, ವೇಗ ಮತ್ತು ಮಾರಕ ದಾಳಿಯಿಂದ ರಕ್ಷಣೆ ನೀಡುತ್ತದೆ.
ಅಲ್ಮಾಜ್-ಆಂಟೆ ಎಂಬ ಕಂಪೆನಿ ತಯಾರಿಸಿದ ಈ ಕ್ಷಿಪಣಿ ವ್ಯವಸ್ಥೆಯು 2007ರಿಂದ ರಷ್ಯಾ ಸೇನೆಯಲ್ಲಿದೆ. S-400 ಎಂಬುದು S-300 ವ್ಯವಸ್ಥೆಗಳ ನವೀಕರಿಸಿದ ಆವೃತ್ತಿಯಾಗಿದ್ದು, ಮೊದಲು S-400 ಅನ್ನು ಚೀನಾ 2014ರಲ್ಲಿ ಒಪ್ಪಂದ ಮಾಡಿಕೊಂಡು ಖರೀದಿಸಿತು. ನಂತರ ಭಾರತ ಒಟ್ಟು 5 ಎಸ್-400 ಟ್ರಯಂಪ್ ಅನ್ನು ಖರೀದಿಸಲು 2015 ಡಿಸೆಂಬರ್ ರಲ್ಲಿ ಭಾರತದ ರಕ್ಷಣಾ ಇಲಾಖೆ ಒಪ್ಪಿಗೆ ನೀಡಿತು. 2016ರಲ್ಲಿ ರಷ್ಯಾದೊಂದಿಗೆ ಸುಮಾರು 6 ಬಿಲಿಯನ್ ಡಾಲರ್ ಅಂದರೆ ಸುಮಾರು 40 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ ಹಾಕಿತು. ಇದರ ಜೊತೆಗೆ ಸುಮಾರು 6000 ಕ್ಷಿಪಣಿಗಳ ಖರೀದಿಗೆ ಕೂಡ ಒಪ್ಪಂದ ಮಾಡಲಾಯ್ತು. ಪಾಕಿಸ್ತಾನ ಮತ್ತು ಚೀನಾದ ಬೆದರಿಕೆಗಳ ವಿರುದ್ಧ ರಕ್ಷಣೆಯನ್ನು ಬಲಪಡಿಸಲು 2021 ರಲ್ಲಿ ಪಂಜಾಬ್ ಗಡಿಯಲ್ಲಿ ನಿಯೋಜಿಲಾಯ್ತು. ಇದು ಮೋದಿ ಸರ್ಕಾರದ ಅಂದಿನ ಅತಿದೊಡ್ಡ ರಕ್ಷಣಾ ಒಪ್ಪಂದವಾಗಿದೆ.
ಮನೋಹರ್ ಪರಿಕ್ಕರ್ ಅವರ ಎಸ್-400 ಟ್ರಯಂಪ್ ಖರೀದಿ ಯೋಜನೆಯಿಂದ 2027ರವೆಗೆ ಭಾರತೀಯರಿಗೆ 49,300 ಕೋಟಿ ತೆರಿಗೆ ಉಳಿದಿದೆ. ಹೇಗೆಂದರೆ ಇಷ್ಟು ಬಲಿಷ್ಠವಾದ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದ ಕಾರಣ 15 ವರ್ಷಗಳ ಕಾಲ ಭಾರತೀಯ ರಕ್ಷಣಾ ಪಡೆಗೆ ಯಾವುದೇ ಆಯುಧ ಖರೀದಿಸುವ ಅಗತ್ಯ ಇಲ್ಲ. ಭಾರತ ಒಟ್ಟು 5 ಎಸ್-400 ಗೆ ಒಪ್ಪಂದ ಮಾಡಿತ್ತು, 2023ಕ್ಕೆ ಮೂರು ಭಾರತಕ್ಕೆ ಬಂದವು . ಮಿಕ್ಕ ಎರಡು ಆಗಸ್ಟ್ 2026 ರ ವೇಳೆಗೆ ಭಾರತೀಯ ರಕ್ಷಣಾ ಸೇನೆಯನ್ನು ಸೇರಲಿದೆ.