ಇಡಿ ದಾಳಿ ಬೆನ್ನಲ್ಲೇ 9ನೇ ಮಹಡಿಯಿಂದ ಸುರಿದ ಹಣದ ಮಳೆ: ಕಂತೆ ಕಂತೆ ನೋಟು ರಸ್ತೆಗೆಸೆದ ಬಿಲ್ಡರ್!

Published : May 07, 2026, 09:01 PM IST

ಪಂಜಾಬ್‌ನ ಮೊಹಾಲಿಯಲ್ಲಿ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದಾಗ, ತನಿಖೆಯಿಂದ ತಪ್ಪಿಸಿಕೊಳ್ಳಲು ಬಿಲ್ಡರ್‌ 9ನೇ ಮಹಡಿಯಿಂದ ಹಣದ ಬ್ಯಾಗ್‌ಗಳನ್ನು ಕೆಳಗೆ ಎಸೆದಿದ್ದಾರೆ. ಈ ವೇಳೆ ಬ್ಯಾಗ್‌ನಲ್ಲಿದ್ದ ಹಣ ಹೊರಚೆಲ್ಲಿದ್ದು ಹಣದ ಮಳೆಯೇ ಸುರಿದಿದೆ.

PREV
16
Mohali cash rain

ಪಂಜಾಬ್‌ನ ಮೊಹಾಲಿಯಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸುತ್ತಿದ್ದ ವೇಳೆ ಸಿನಿಮೀಯ ಮಾದರಿಯ ಹೈಡ್ರಾಮಾವೊಂದು ನಡೆದಿದೆ. ತನಿಖಾ ಸಂಸ್ಥೆಯ ಕೈಗೆ ಸಿಕ್ಕಿಬೀಳುವ ಭೀತಿಯಿಂದ ಬಿಲ್ಡರ್‌ವೊಬ್ಬರು ತಮ್ಮ ಫ್ಲಾಟ್‌ನ 9ನೇ ಮಹಡಿಯಿಂದ ಹಣದ ಬ್ಯಾಗ್‌ಗಳನ್ನು ಕೆಳಕ್ಕೆ ಎಸೆದಿದ್ದಾರೆ. ಈ ವೇಳೆ ರಸ್ತೆಯುದ್ದಕ್ಕೂ 500 ರೂಪಾಯಿ ಮುಖಬೆಲೆಯ ನೋಟುಗಳು ಹರಡಿಕೊಂಡಿದ್ದು, ‘ನೋಟುಗಳ ಮಳೆ’ಯಾದಂತಹ ದೃಶ್ಯ ಕಂಡುಬಂದಿದೆ.

26
ಏನಿದು ಘಟನೆ?

ಗುರುವಾರ ಬೆಳಿಗ್ಗೆ ಚಂಡೀಗಢ ಮತ್ತು ಮೊಹಾಲಿಯ ಸುಮಾರು 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿತು. ಮೊಹಾಲಿಯ ಬಹುಮಹಡಿ ಕಟ್ಟಡವೊಂದರಲ್ಲಿ ಬಿಲ್ಡರ್ ಒಬ್ಬರ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆದಾಗ, ಅಧಿಕಾರಿಗಳು ಒಳಬರುತ್ತಿದ್ದಂತೆಯೇ ಗಾಬರಿಗೊಂಡ ಆರೋಪಿಗಳು ಹಣ ತುಂಬಿದ್ದ ಬ್ಯಾಗ್‌ಗಳನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದಿದ್ದಾರೆ. 9ನೇ ಮಹಡಿಯಿಂದ ಬ್ಯಾಗ್‌ಗಳು ಕೆಳಕ್ಕೆ ಬೀಳುತ್ತಿದ್ದಂತೆ ಅವುಗಳಲ್ಲಿದ್ದ 500 ರೂಪಾಯಿ ನೋಟಿನ ಕಂತೆಗಳು ರಸ್ತೆಯ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

36
ರಸ್ತೆ ಮೇಲೆ ಬಿದ್ದ ನೋಟು ಆರಿಸಿಕೊಂಡ ಇಡಿ

ರಸ್ತೆಯ ಮೇಲೆ ಬಿದ್ದಿದ್ದ ನೋಟುಗಳನ್ನು ಕಂಡು ದಾರಿಹೋಕರು ಮತ್ತು ಸ್ಥಳೀಯರು ಆಶ್ಚರ್ಯಚಕಿತರಾದರು. ತಕ್ಷಣ ಕಾರ್ಯಪ್ರವೃತ್ತರಾದ ಇಡಿ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ರಸ್ತೆಯ ಮೇಲೆ ಹರಡಿದ್ದ ನೋಟುಗಳನ್ನು ಸಂಗ್ರಹಿಸಿದ್ದಾರೆ.

46
25 ಲಕ್ಷ ರೂ. ನಗದು ವಶ:

ಪ್ರಾಥಮಿಕ ಮಾಹಿತಿಯ ಪ್ರಕಾರ, ಎರಡು ಬ್ಯಾಗ್‌ಗಳಿಂದ ಸುಮಾರು 25 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

56
ದಾಳಿಗೆ ಕಾರಣವೇನು?

ಗ್ರೇಟರ್ ಮೊಹಾಲಿ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ (GMADA) ಯಿಂದ ಭೂ ಬಳಕೆ ಬದಲಾವಣೆ (CLU - Change of Land Use) ಪರವಾನಗಿಗಳನ್ನು ಪಡೆಯುವಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅವ್ಯವಹಾರ ಮತ್ತು ಹಣಕಾಸಿನ ವಂಚನೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಪ್ರಮುಖ ಬಿಲ್ಡರ್‌ಗಳು ಸಾರ್ವಜನಿಕರಿಗೆ ನೂರಾರು ಕೋಟಿ ರೂಪಾಯಿ ವಂಚಿಸಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಖಲೆಗಳು, ಬ್ಯಾಂಕ್ ವಹಿವಾಟು ಮತ್ತು ಹೂಡಿಕೆಯ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

66
ರಿಯಲ್ ಎಸ್ಟೇಟ್ ವಲಯದಲ್ಲಿ ನಡುಕ:

ಏಕಕಾಲಕ್ಕೆ ಹತ್ತಾರು ಕಡೆಗಳಲ್ಲಿ ನಡೆದಿರುವ ಈ ಮಿಂಚಿನ ದಾಳಿಯಿಂದಾಗಿ ಪಂಜಾಬ್ ಮತ್ತು ಚಂಡೀಗಢದ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಆತಂಕ ಶುರುವಾಗಿದೆ. ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಈ ವಂಚನೆ ಜಾಲದ ಮತ್ತಷ್ಟು ಕರಾಳ ಮುಖಗಳು ಅನಾವರಣಗೊಳ್ಳುವ ಸಾಧ್ಯತೆಯಿದೆ. ಸದ್ಯ ವಶಪಡಿಸಿಕೊಂಡಿರುವ ಹಣದ ಮೂಲ ಯಾವುದು ಮತ್ತು ಅದನ್ನು ಯಾರ ಸೂಚನೆಯ ಮೇರೆಗೆ ಕೆಳಕ್ಕೆ ಎಸೆಯಲಾಯಿತು ಎಂಬ ಬಗ್ಗೆ ಇಡಿ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories