ಆರ್ಎಸ್ಎಸ್ ನಿಷೇಧ ಮತ್ತು 'ರಾ'ಗೆ ನಿರ್ಬಂಧ ಹೇರಬೇಕೆಂಬ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (USCIRF) ವರದಿಯನ್ನು ಭಾರತ ತಿರಸ್ಕರಿಸಿದ್ದು ಈ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವರದಿಯು ಪ್ರೇರಿತ ಹಾಗೂ ಪಕ್ಷಪಾತದಿಂದ ಕೂಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ನವದೆಹಲಿ: ಆರ್‌ಎಸ್ಎಸ್ ಸಂಘಟನೆಯನ್ನು ನಿಷೇಧಿಸಬೇಕು, ಅದರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅದರ ಜೊತೆಗೆ ಭಾರತದ ಭಾರತದ ಗುಪ್ತಚರ ಸಂಸ್ಥೆ (Research and Analysis Wing) 'ರಾ'ಗೆ ನಿರ್ಬಂಧ ಹೇರಬೇಕು ಎಂಬ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (USCIRF) ವಾರ್ಷಿಕ ವರದಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವರದಿಯನ್ನು ತಿರಸ್ಕರಿಸಿದೆ. ಈ ಬಗ್ಗೆ ಮಾತನಾಡಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ವಸ್ತುನಿಷ್ಠ ಸಂಗತಿಗಳಿಗಿಂತ ಪ್ರಶ್ನಾರ್ಹ ಮೂಲಗಳು ಮತ್ತು ಸೈದ್ಧಾಂತಿಕ ನಿರೂಪಣೆಗಳನ್ನು ಅವಲಂಬಿಸಿ ಭಾರತದ ಬಗ್ಗೆ ವಿಕೃತ, ಆಯ್ದ ಚಿತ್ರಣವನ್ನು ಪ್ರಸ್ತುತಪಡಿಸುವಲ್ಲಿ ಅಮೆರಿಕಾದ ಈ ಆಯೋಗವು ನಿರಂತರವಾಗಿ ತೊಡಗಿಸಿಕೊಂಡಿದೆ. ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅಮೆರಿಕದ ಆಯೋಗದ (USCIRF) ಇತ್ತೀಚಿನ ವರದಿಯನ್ನು ನಾವು ಗಮನಿಸಿದ್ದೇವೆ. ಭಾರತದ ಬಗ್ಗೆ ಅದರ ಪ್ರೇರಿತ ಮತ್ತು ಪಕ್ಷಪಾತದ ಗುಣಲಕ್ಷಣಗಳನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಹಲವಾರು ವರ್ಷಗಳಿಂದ ಅಮೆರಿಕಾದ USCIRF ಭಾರತದ ವಿರುದ್ಧ ವಿಕೃತ ಮತ್ತು ತಾನೇ ಆಯ್ಕೆ ಮಾಡಿದ ಚಿತ್ರಣವನ್ನು ಪ್ರಸ್ತುತಪಡಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಇದರ ವರದಿ ವಾಸ್ತವ ಸಂಗತಿಗಳ ಬದಲು ಪ್ರಶ್ನಾರ್ಹ ಮೂಲಗಳು ಮತ್ತು ಸೈದ್ಧಾಂತಿಕ ನಿರೂಪಣೆಗಳನ್ನು ಅವಲಂಬಿಸಿದೆ. ಇಂತಹ ಪುನರಾವರ್ತಿತ ತಪ್ಪು ನಿರೂಪಣೆಗಳು ಆಯೋಗದ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತವೆ ಎಂದು ಜೈಸ್ವಾಲ್ ಹೇಳಿದರು. ಯುಎಸ್‌ಸಿಐಆರ್‌ಎಫ್ ಭಾರತದ ಬಗ್ಗೆ ಟೀಕೆಗಳನ್ನು ಮುಂದುವರೆಸುವ ಬದಲು, ಅಮೆರಿಕದಲ್ಲಿ ನಡೆದ ಹಿಂದೂ ದೇವಾಲಯಗಳ ಮೇಲಿನ ವಿಧ್ವಂಸಕ ಕೃತ್ಯಗಳು ಮತ್ತು ದಾಳಿಗಳು, ಭಾರತವನ್ನು ಗುರಿಯಾಗಿಸಿ ನಡೆದ ದಾಳಿಗಳು ಹಾಗೂ ಅಮೆರಿಕದಲ್ಲಿ ಭಾರತೀಯ ವಲಸಿಗರ ಸದಸ್ಯರ ಮೇಲೆ ಹೆಚ್ಚುತ್ತಿರುವ ಹಿಂದೆ ಮತ್ತು ಬೆದರಿಕೆಗಳ ಬಗ್ಗೆ ಚಿಂತಿಸುವುದು ಒಳ್ಳೆಯದು. ಇವುಗಳು ಗಂಭೀರವಾಗಿ ಚಿಂತಿಸುವುದಕ್ಕೆ ಅರ್ಹವಾದ ವಿಚಾರಗಳಾಗಿವೆ ಎಂದು ಜೈಸ್ವಾಲ್ ಹೇಳಿದರು.
USCIRF ಭಾರತವನ್ನು ನಿರ್ದಿಷ್ಟ ಕಳವಳಕಾರಿ ದೇಶ ಎಂದು ಗೊತ್ತುಪಡಿಸಿ ಭಾರತಕ್ಕೆ ಶಸ್ತ್ರಾಸ್ತ್ರಗಳ ಮಾರಾಟ ತಡೆಹಿಡಿಯಬೇಕು. ಶಸ್ತ್ರಾಸ್ತ್ರ ಮಾರಾಟ ಮತ್ತು ವ್ಯಾಪಾರ ನೀತಿಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕೆ ಜೋಡಿಸುವಂತೆ ಅಮೆರಿಕವನ್ನು ಕೇಳಿದ ನಂತರ ಭಾರತದ ವಿದೇಶಾಂಗ ಸಚಿವಾಲಯದ ಈ ಹೇಳಿಕೆ ಹೊರ ಬಂದಿದೆ. ತನ್ನ ಈ ಸಿಸ್ಟಮ್ಯಾಟಿಕ್ ರಿಲಿಜಿಯಸ್ ಪರ್ಸಿಕ್ಯೂಷನ್ ಇನ್ ಇಂಡಿಯಾ ಹೆಸರಿನ ವರದಿಯೂ ಭಾರತದ ಸಾಮಾಜಿಕ, ರಾಜಕೀಯ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಗಳು ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ಎಂದು SCIRF ಹೇಳಿಕೊಂಡಿದೆ.
ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಳವಳಕಾರಿಯಾಗಿ ಹದಗೆಟ್ಟಿದೆ. ಹಿಂದೂ ರಾಷ್ಟ್ರೀಯವಾದಿ ಗುಂಪುಗಳಿಂದ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚುತ್ತಿವೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತಷ್ಟು ಹದಗೆಟ್ಟಿದೆ. ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪ್ರಾರ್ಥನಾ ಸ್ಥಳಗಳನ್ನು ಗುರಿ ಮಾಡುತ್ತಿದೆ. ಕಠಿಣ ಜೈಲುವಾಸಕ್ಕೆ ಅವಕಾಶವಿರುವ ಮತಾಂತರ ವಿರೋಧಿ ಕಾನೂನುಗಳನ್ನು ಅನೇಕ ರಾಜ್ಯಗಳು ಜಾರಿ ಮಾಡಲು ಪ್ರಯತ್ನಿಸುತ್ತಿವೆ. ಧಾರ್ಮಿಕ ನಿರಾಶ್ರಿತರು ಹಾಗೂ ಪ್ರಜೆಗಳನ್ನು ಅಕ್ರಮವಾಗಿ ಗಡೀಪಾರು ಮಾಡುವ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿಯ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಪಸಂಖ್ಯಾತರ ಮೇಲಿನ ದಾಳಿ ವಿರುದ್ಧ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ವಕ್ಸ್ ತಿದ್ದುಪಡಿ ಕಾಯ್ದೆ, ಉತ್ತರಾಖಂಡದ ರಾಜ್ಯ ಅಲ್ಪಸಂಖ್ಯಾತರ ಶಿಕ್ಷಣ ಕಾಯ್ದೆಯ ವಿಚಾರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇಸ್ಲಾಮಿಕ್ ಧಾರ್ಮಿಕ ದತ್ತಿಯ ನಿರ್ವಹಣೆಯಲ್ಲಿ ಭಾರೀ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಈ ಮೂಲಕ ಅಲಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದೆ. ಮಹಾರಾಷ್ಟ್ರ, ಒಡಿಶಾ ಮತ್ತು ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ಕೋಮುಗಲಭೆ ಹಾಗೂ ಹಿಂಸಾಚಾರಗಳನ್ನು ಆರೆಸ್ಸೆಸ್‌ನ ಸಹಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ತಲೆಗೆ ಕಟ್ಟಲಾಗಿದೆ.
ಶಿಫಾರಸು ಏನು?: ಆರೆಸ್ಸೆಸ್, ಮತ್ತಿತರ ಸಂಘಟನೆಗಳು, ಕೆಲ ವ್ಯಕ್ತಿಗಳಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಬೇಕು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಮೆರಿಕ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯದಲ್ಲಿ ಸುಧಾರಣೆ ತರುವಂತೆ ಭಾರತದ ಮೇಲೆ ಒತ್ತಡ ಹೇರಬೇಕು. ಅಮೆರಿಕದ ನಾಗರಿಕರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಬೆದರಿಕೆ ಮತ್ತು ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ಶಸ್ತ್ರಾಸ್ತ್ರ ಪೂರೈಕೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 6 ಅನ್ನು ಜಾರಿ ಮಾಡಿ ಶಸ್ತ್ರಾಸ್ತ್ರ ಮಾರಾಟ ತಡೆಹಿಡಿಯಬೇಕು ಎಂದು ಅಮೆರಿಕ ಸರ್ಕಾರಕ್ಕೆ ಯುಎಸ್‌ಸಿಐಆರ್‌ಎಫ್ ಶಿಫಾರಸು ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ