ಪುಷ್ಪಾ ಸರ್ಕಾರ ಎಂಬ ಉದಯನಿಧಿ ಸ್ಟಾಲಿನ್ ವ್ಯಂಗ್ಯಕ್ಕೆ ಸಿಎಂ ವಿಜಯ್ ಮೊದಲ ತಿರುಗೇಟು

Published : May 14, 2026, 09:24 AM IST

ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ವಿಜಯ್, ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್‌ಗೆ ಅಂಕಿ-ಅಂಶಗಳ ಮೂಲಕ ತಿರುಗೇಟು ನೀಡಿದ್ದಾರೆ. ತಮ್ಮ ಟಿವಿಕೆ ಪಕ್ಷವು ಡಿಎಂಕೆಗಿಂತ ಹೆಚ್ಚು ಮತಗಳನ್ನು ಪಡೆದಿದೆ ಎಂದು ಸಾಬೀತುಪಡಿಸಿ, ತಮ್ಮ ಸರ್ಕಾರವು ಜನಪರ ಕೆಲಸಗಳ ಮೂಲಕವೇ ಉತ್ತರ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

PREV
18
ತಮಿಳುನಾಡು ರಾಜಕೀಯ

ತಮಿಳುನಾಡಿನ ಬಹುಪಾಲು ಜನರಿಂದ ತಿರಸ್ಕೃತಗೊಂಡ ಪಕ್ಷವೊಂದು, ಶೇ.35ರಷ್ಟು ಜನರ ಬೆಂಬಲದೊಂದಿಗೆ ಗೆದ್ದ ಪಕ್ಷವನ್ನು ನೋಡಿ ಯಾಕೆ ಹೀಗೆಲ್ಲಾ ವ್ಯಂಗ್ಯವಾಡುತ್ತಿದೆ ಅನ್ನೋದು ಜನರಿಗೆ ಗೊತ್ತಿಲ್ಲವೇ? ಎಂದು ಮುಖ್ಯಮಂತ್ರಿ ವಿಜಯ್ ಅವರು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್‌ಗೆ ನೇರ ಪ್ರಶ್ನೆ ಎಸೆದಿದ್ದಾರೆ. ಈ ಕುರಿತು 'ಎಕ್ಸ್' ನಲ್ಲಿ ಟಿವಿಕೆ ನಾಯಕ ಹಾಗೂ ಸಿಎಂ ವಿಜಯ್ ಸುದೀರ್ಘ ಪೋಸ್ಟ್ ಹಾಕಿದ್ದಾರೆ.

28
ವಿಶ್ವಾಸಮತ ಯಾಚನೆ ನಿರ್ಣಯ

ವಿಧಾನಸಭೆಯಲ್ಲಿ ಇಂದು ನಮ್ಮ ಸರ್ಕಾರದ ಮೇಲಿನ ವಿಶ್ವಾಸಮತ ಯಾಚನೆ ನಿರ್ಣಯವನ್ನು ಮಂಡಿಸಲಾಯಿತು. ಈ ಚರ್ಚೆಯಲ್ಲಿ ಹಲವು ಪಕ್ಷಗಳ ನಾಯಕರು ನಮ್ಮನ್ನು ಬೆಂಬಲಿಸಿ, ವಿರೋಧಿಸಿ ಮಾತನಾಡಿದರು. ಕೆಲವರು ತಟಸ್ಥ ನಿಲುವು ತಳೆದರೆ, ಇನ್ನು ಕೆಲವರು ಸಭಾತ್ಯಾಗ ಮಾಡಿದರು. ಕೊನೆಗೆ ನಡೆದ ಮತ ಎಣಿಕೆಯಲ್ಲಿ ನಮ್ಮ ಸರ್ಕಾರದ ಪರವಾಗಿ 144 ಶಾಸಕರು ಮತ ಚಲಾಯಿಸಿದರು. 22 ಮಂದಿ ವಿರೋಧಿಸಿದರೆ, 5 ಮಂದಿ ತಟಸ್ಥರಾಗಿದ್ದರು. 60 ಶಾಸಕರು ಗೈರಾಗಿದ್ದರು. ಈ ಮೂಲಕ, ತಮಿಳುನಾಡು ವೆಟ್ರಿ ಕಳಗಂ (ಟಿವಿಕೆ) ಸರ್ಕಾರವು ವಿಶ್ವಾಸಮತ ಗೆದ್ದಿದೆ ಎಂದು ಸ್ಪೀಕರ್ ಘೋಷಿಸಿದರು. ನಮ್ಮನ್ನು ಬೆಂಬಲಿಸಿದ ಎಲ್ಲಾ ಶಾಸಕರಿಗೂ, ಪಕ್ಷಗಳ ಮುಖಂಡರಿಗೂ ನಾವು ಧನ್ಯವಾದ ತಿಳಿಸುತ್ತೇವೆ.

38
'ಹಳೇ ಕಥೆ' ಹೇಳಿದ ಉದಯನಿಧಿಗೆ ಅಂಕಿ-ಅಂಶಗಳ ಉತ್ತರ!

ವಿಧಾನಸಭೆಯ ಕಲಾಪವನ್ನು ನಾವು ನೇರ ಪ್ರಸಾರ ಮಾಡಿದ್ದೇವೆ. ಆಡಳಿತ ಪಕ್ಷದ ಪರವಾದ ಮಾತುಗಳನ್ನು ಮಾತ್ರ ತೋರಿಸಿ, ವಿರೋಧ ಪಕ್ಷದ ಮಾತುಗಳಿಗೆ ಕತ್ತರಿ ಹಾಕುವ ಕೆಲಸವನ್ನು ನಾವು ಮಾಡಿಲ್ಲ. ಇಡೀ ಜಗತ್ತು ಎಲ್ಲವನ್ನೂ ಲೈವ್‌ನಲ್ಲಿ ನೋಡಿದೆ. ಅದೇ ನಮ್ಮ ಪಾರದರ್ಶಕತೆಗೆ ಸಾಕ್ಷಿ.

ವಿಧಾನಸಭೆಯಲ್ಲಿ ವಿಪಕ್ಷ ನಾಯಕರು, ನಮಗೆ ಬಹುಪಾಲು ಜನರ ಬೆಂಬಲವಿಲ್ಲ ಎಂಬ ಹಳೆಯ, ಹುಳಿ ಹಿಡಿದ ವಾದವನ್ನು ಮತ್ತೆ ಮಂಡಿಸಿದರು. ಇದನ್ನು ಕೇಳಿ ಜನ 2006ರಲ್ಲಿ ಡಿಎಂಕೆ ಸರ್ಕಾರ ಕೇವಲ ಶೇ. 24.19ರಷ್ಟು ಮತ ಪಡೆದು ಅಧಿಕಾರಕ್ಕೆ ಬಂದಿದ್ದನ್ನು ನೆನೆದು ನಕ್ಕಿರಬಹುದು. ಅಂಕಿ-ಅಂಶಗಳ ಪ್ರಕಾರ, ನಮ್ಮ ಟಿವಿಕೆ ಪಕ್ಷಕ್ಕೆ ಶೇ. 34.92ರಷ್ಟು, ಅಂದರೆ ಸುಮಾರು ಶೇ. 35ರಷ್ಟು ಮತ ಸಿಕ್ಕಿದೆ. ಆದರೆ, ಮೈತ್ರಿಕೂಟದ ಸಹಾಯದಿಂದ ಗೆದ್ದಿರುವ ಡಿಎಂಕೆ ಪಕ್ಷದ ಸ್ವಂತ ಮತ ಗಳಿಕೆ ಕೇವಲ ಶೇ. 24.19 ಮಾತ್ರ. ಇದು ನಮ್ಮ ಪಕ್ಷಕ್ಕಿಂತ ಶೇ. 10ರಷ್ಟು ಕಡಿಮೆ.

48
ಪಡೆದ ಮತಗಳು

ಸಂಖ್ಯೆಯಲ್ಲಿ ಹೇಳುವುದಾದರೆ, ಟಿವಿಕೆ ಪಕ್ಷವು 1 ಕೋಟಿ 72 ಲಕ್ಷದ 26 ಸಾವಿರದ 209 ಮತಗಳನ್ನು ಪಡೆದಿದೆ. ಆದರೆ ಡಿಎಂಕೆ ಪಕ್ಷ ಕೇವಲ 1 ಕೋಟಿ 19 ಲಕ್ಷದ 29 ಸಾವಿರದ 144 ಮತಗಳನ್ನು ಗಳಿಸಿದೆ. ಅಂದರೆ, ಡಿಎಂಕೆಗಿಂತ ನಾವು ಸುಮಾರು 53 ಲಕ್ಷ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಇದೆಲ್ಲಾ ನಾವು ಹೇಳುತ್ತಿರುವ ಲೆಕ್ಕವಲ್ಲ, ಚುನಾವಣಾ ಆಯೋಗವೇ ಕೊಟ್ಟಿರುವ ಡೇಟಾ.

58
ಡಿಎಂಕೆ ಬೇಡವಾಗಿದೆ

ಇಷ್ಟಾದರೂ, ನಮ್ಮನ್ನು 3.21 ಕೋಟಿ ಜನ ತಿರಸ್ಕರಿಸಿದ್ದಾರೆ ಎಂದು ಡಿಎಂಕೆ ಹೇಳುತ್ತಿದೆ. ಅದೇ ಲೆಕ್ಕದಲ್ಲಿ ನೋಡಿದರೆ, ಡಿಎಂಕೆಯನ್ನು 3.68 ಕೋಟಿ ಜನ ತಿರಸ್ಕರಿಸಿದ್ದಾರೆ. ಶೇಕಡಾವಾರು ಲೆಕ್ಕದಲ್ಲೂ, ತಮಿಳುನಾಡಿನ ಶೇ. 76ರಷ್ಟು ಜನರಿಗೆ ಡಿಎಂಕೆ ಬೇಡವಾಗಿದೆ. ಹೀಗಿರುವಾಗ, ಮುಕ್ಕಾಲು ಪಾಲು ಜನರಿಂದ ತಿರಸ್ಕೃತಗೊಂಡ ಪಕ್ಷ, ನಮ್ಮನ್ನು ನೋಡಿ ವ್ಯಂಗ್ಯವಾಡುವುದು ಎಷ್ಟು ಸರಿ? ಎಂದು ವಿಜಯ್ ಪ್ರಶ್ನಿಸಿದ್ದಾರೆ.

68
'ಪುಷ್ಪ' ಸರ್ಕಾರ ಎಂಬ ವ್ಯಂಗ್ಯಕ್ಕೆ ತಿರುಗೇಟು

ನಮ್ಮ ಜಾತ್ಯತೀತ ನಿಲುವಿನಿಂದಾಗಿಯೇ ಕಾಂಗ್ರೆಸ್, ವಿಸಿಕೆ, ಸಿಪಿಐ, ಸಿಪಿಐ(ಎಂ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷಗಳು ನಮ್ಮನ್ನು ಬೆಂಬಲಿಸಿದವು. ಆದರೆ ಇದನ್ನೂ ಡಿಎಂಕೆ ಲೇವಡಿ ಮಾಡಿದೆ. ನಮ್ಮ ಸರ್ಕಾರವನ್ನು 'ಪುಷ್ಪ' ಸರ್ಕಾರ ಎಂದು ಕರೆದಿದೆ. ಸೋಲಿನ ಹತಾಶೆಯಿಂದ ಡಿಎಂಕೆ ಈ ರೀತಿ ಹೊಗೆ ಕಾರುತ್ತಿದೆ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ.

78
ನಮ್ಮದು 'ಡೀಸೆಂಟ್' ರಾಜಕೀಯ

1999ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ನಂತರ ಮಂತ್ರಿ ಸ್ಥಾನಕ್ಕಾಗಿ ಚೌಕಾಶಿ ಮಾಡಿದ್ದನ್ನು ಜನ ಇನ್ನೂ ಮರೆತಿಲ್ಲ. ನಾವು ಯಾರೊಂದಿಗೂ 'ಎಕ್ಸ್‌ಚೇಂಜ್' ಮಾಡಿಕೊಳ್ಳುವವರಲ್ಲ. ಬದಲಾವಣೆ (ಚೇಂಜ್) ಮತ್ತು ಸವಾಲುಗಳನ್ನು (ಚಾಲೆಂಜ್) ನಂಬಿ ರಾಜಕೀಯಕ್ಕೆ ಬಂದವರು. ನಮ್ಮದು 'ಡೀಸೆಂಟ್' ರಾಜಕೀಯ, ಅದನ್ನು ಇಡೀ ತಮಿಳುನಾಡು ನೋಡುತ್ತಿದೆ.

88
ನಮ್ಮ ಸರ್ಕಾರ 'ಮ್ಯಾಜಿಕ್' ಮತ್ತು 'ಮಿರಾಕಲ್'

ನಮಗೆ 'ಮ್ಯಾಜಿಕಲ್ ನಂಬರ್' ಇಲ್ಲ ಎಂದು ಡಿಎಂಕೆ ಹೇಳುತ್ತಿದೆ. ಆದರೆ, ಅವರು ಮಾಡಲು ವಿಫಲವಾದ ಜನಪರ ಕೆಲಸಗಳನ್ನು ನಮ್ಮ ಸರ್ಕಾರ 'ಮ್ಯಾಜಿಕ್' ಮತ್ತು 'ಮಿರಾಕಲ್' ಎಂಬಂತೆ ಮಾಡಿ ತೋರಿಸಲಿದೆ. ನಾವು ರೀಲ್ಸ್ ಜಗತ್ತಿನಲ್ಲಿಲ್ಲ, ಜನರ ಭಾವನೆಗಳನ್ನು ನಂಬಿ 'ರಿಯಲ್' ಆಗಿ ಕೆಲಸ ಮಾಡುತ್ತೇವೆ. ಡಿಎಂಕೆ ನಮ್ಮ ಮೇಲೆ ಎಷ್ಟು ಕೆಸರು ಎರಚಿದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಗಮನ ಕೇವಲ ಜನರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಕಡೆಗೆ ಮಾತ್ರ ಇರುತ್ತದೆ ಎಂದು ವಿಜಯ್ ತಮ್ಮ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories