ಕಳೆದ 40 ವರ್ಷಗಳ ಹಿಂದೆ ಕೊರೆದ 1 ಕಿ.ಮೀ ಆಳದ ಬೋರ್‌ವೆಲ್‌ನಿಂದ ಯಾವುದೇ ಪಂಪ್ ಇಲ್ಲದೆ ಬಿಸಿ ನೀರು ಚಿಮ್ಮುತ್ತಿದೆ. ರೈತರು ಈ ನೀರನ್ನು ತಣ್ಣಗಾಗಿಸಿ ಕೃಷಿಗೆ ಬಳಸುತ್ತಿದ್ದು, ವಿಜ್ಞಾನಿಗಳು ಇದರಿಂದ ವಿದ್ಯುತ್ ಉತ್ಪಾದಿಸಲು ಮುಂದಾಗಿದ್ದಾರೆ. ಎಲ್ಲಿದೆ ಈ ಸ್ಥಳ? ಮತ್ತಷ್ಟು ಮಾಹಿತಿ ತಿಳಿಯರಿ.
ಸಾಮಾನ್ಯವಾಗಿ ನೀರಿಗಾಗಿ ನೆಲವನ್ನು ಕೊರೆದರೆ ತಂಪಾದ ಸಿಹಿನೀರು ಅಥವಾ ಕೊಂಚ ಉಪ್ಪು ನೀರು ಬರುವುದು ನಮಗೆಲ್ಲಾ ತಿಳಿದಿರುವ ವಿಚಾರ. ಆದರೆ, ಬರೋಬ್ಬರಿ 1 ಕಿಲೋಮೀಟರ್‌ಗೂ ಹೆಚ್ಚು ಆಳಕ್ಕೆ ಬೋರ್‌ವೆಲ್ ಕೊರೆದರೆ ಏನಾಗಬಹುದು ಎಂಬ ಕಲ್ಪನೆ ನಿಮಗಿದೆಯೇ? ಅಲ್ಲಿಂದ ಹೊರಬಂದಿದ್ದು ಕೈ ಸುಡುವಷ್ಟು ಕುದಿಯುವ ಬಿಸಿ ನೀರು!
ಅತ್ಯಂತ ರೋಚಕ ಸಂಗತಿಯೆಂದರೆ, ಯಾವುದೇ ಮೋಟರ್, ಪಂಪ್ ಅಥವಾ ಕರೆಂಟ್‌ನ ಹಂಗಿಲ್ಲದೆ ನೈಸರ್ಗಿಕ ಭೂಗರ್ಭ ಒತ್ತಡದಿಂದಲೇ ಕಳೆದ 40 ವರ್ಷಗಳಿಂದ ನಿರಂತರವಾಗಿ 365 ದಿನವೂ ಇಲ್ಲಿ ಕುದಿಯುವ ಜಲಧಾರೆ ಚಿಮ್ಮುತ್ತಲೇ ಇದೆ!
25
60 ಡಿಗ್ರಿ ಸೆಲ್ಸಿಯಸ್ ಬಿಸಿ ನೀರು ಉಕ್ಕುತ್ತಿರುವುದೇಕೆ?
ಭೂಮಿಯ ಆಳಕ್ಕೆ ಹೋದಂತೆಲ್ಲಾ ತಾಪಮಾನ ಹೆಚ್ಚಾಗುತ್ತದೆ. ಬರೋಬ್ಬರಿ ಒಂದು ಕಿಲೋಮೀಟರ್ ಆಳದ ಭೂಗರ್ಭದ ಪದರಗಳಲ್ಲಿರುವ ಅತಿಯಾದ ಉಷ್ಣತೆ ಹಾಗೂ ಅಲ್ಲಿನ ನೈಸರ್ಗಿಕ ಗಂಧಕದ (Sulfur) ಖನಿಜಗಳ ಪ್ರಭಾವದಿಂದಾಗಿ ಈ ನೀರು ಸುಮಾರು 60 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸದಾ ಕುದಿಯುತ್ತಿರುತ್ತದೆ. ಕೊಳವೆಬಾವಿಯ ಮುಖಭಾಗದಿಂದ ಸದಾ ಹೊಗೆ ಉಗುಳುತ್ತಾ ನೀರು ಚಿಮ್ಮುವ ದೃಶ್ಯ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.
35
ಕುದಿಯುವ ನೀರನ್ನೇ ಕೃಷಿಗೆ ವರವಾಗಿಸಿಕೊಂಡ ರೈತರು!
ಸಾಮಾನ್ಯವಾಗಿ ಅಷ್ಟು ಬಿಸಿ ನೀರನ್ನು ನೇರವಾಗಿ ಗದ್ದೆಗಳಿಗೆ ಹರಿಸಿದರೆ ಬೆಳೆಗಳು ಸುಟ್ಟು ಕರಕಲಾಗುತ್ತವೆ. ಆದರೆ, ಸ್ಥಳೀಯ ರೈತರು ತಮ್ಮ ಜಾಣ್ಮೆಯಿಂದ ಈ ಕುದಿಯುವ ನೀರನ್ನೇ ಕೃಷಿ ವರವಾಗಿಸಿಕೊಂಡಿದ್ದಾರೆ.
ಬೋರ್‌ವೆಲ್‌ನಿಂದ ಚಿಮ್ಮುವ ಬಿಸಿ ನೀರನ್ನು ನೇರವಾಗಿ ಬೆಳೆಗೆ ಹರಿಸದೆ, ಮೊದಲು ದೊಡ್ಡ ಹೊಂಡಗಳಿಗೆ (Ponds) ಹಾಯಿಸುತ್ತಾರೆ. ಒಂದು ದಿನ ಪೂರ್ತಿ ಆ ನೀರನ್ನು ನೈಸರ್ಗಿಕವಾಗಿ ತಣ್ಣಗಾಗಲು ಬಿಡುತ್ತಾರೆ. ನೀರು ಸಂಪೂರ್ಣ ತಣ್ಣಗಾದ ಬಳಿಕ ಕಾಲುವೆಗಳ ಮೂಲಕ ಭತ್ತದ ಗದ್ದೆಗಳಿಗೆ ಹರಿಸುತ್ತಾರೆ. ಈ ಅದ್ಭುತ ಉಪಾಯದಿಂದಾಗಿ ಸುಮಾರು 200 ಎಕರೆ ಜಮೀನಿನಲ್ಲಿ ವರ್ಷಕ್ಕೆ ಎರಡು ಬೆಳೆಗಳನ್ನು ರೈತರು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ.
ಈ ನೈಸರ್ಗಿಕ ಭೂಗರ್ಭ ಉಷ್ಣಶಕ್ತಿಯನ್ನು (Geothermal Energy) ವ್ಯರ್ಥ ಮಾಡದೆ ವಿದ್ಯುತ್ ತಯಾರಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ. ದೆಹಲಿಯ ಪ್ರಸಿದ್ಧ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿ 20 ಕಿಲೋವ್ಯಾಟ್ ಪರಿಸರಸ್ನೇಹಿ ವಿದ್ಯುತ್ ಉತ್ಪಾದಿಸುವ ಪ್ರಾಯೋಗಿಕ ಪೈಲಟ್ ಪ್ರಾಜೆಕ್ಟ್ ಸಿದ್ಧಗೊಳ್ಳುತ್ತಿದ್ದು, ಇದು ಯಶಸ್ವಿಯಾದರೆ ಗ್ರಾಮದ ಬೀದಿ ದೀಪಗಳಿಗೆ ಈ ನೈಸರ್ಗಿಕ ವಿದ್ಯುತ್ ಬೆಳಕು ನೀಡಲಿದೆ.
55
ಈ ವಿಸ್ಮಯಕಾರಿ ಬೋರ್‌ವೆಲ್ ಇರುವುದು ಎಲ್ಲಿ?
ಪ್ರಕೃತಿಯ ಈ ಅದ್ಭುತ ವಿದ್ಯಮಾನ ನಡೆಯುತ್ತಿರುವುದು ನೆರೆಯ ತೆಲಂಗಾಣ ರಾಜ್ಯದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ಮಣುಗೂರು ಮಂಡಲ ವ್ಯಾಪ್ತಿಯ ‘ಪಗಿಡೇರು’ (Pagideru) ಎಂಬ ಪುಟ್ಟ ಹಳ್ಳಿಯಲ್ಲಿ. ಸುಮಾರು 40 ವರ್ಷಗಳ ಹಿಂದೆ (ನಾಲ್ಕು ದಶಕಗಳ ಹಿಂದೆ) ಕಲ್ಲಿದ್ದಲು ಗಣಿ ನಿಕ್ಷೇಪಗಳ ಶೋಧನೆಗಾಗಿ ಗಣಿ ಸಂಸ್ಥೆ ‘ಸಿಂಗರೇಣಿ’ ಹಾಗೂ ಭೂಗರ್ಭ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಇಲ್ಲಿ 1 ಕಿ.ಮೀಗೂ ಹೆಚ್ಚು ಆಳಕ್ಕೆ ಬೋರ್‌ವೆಲ್ ಕೊರೆದಿದ್ದರು. ಅಂದು ಆರಂಭವಾದ ಈ ಬಿಸಿ ನೀರಿನ ಬುಗ್ಗೆ ಇಂದಿಗೂ ನಿಂತಿಲ್ಲ.
ಪ್ರಕೃತಿಯ ಈ ಕೌತುಕವನ್ನು ಕಣ್ಣಾರೆ ಕಣ್ತುಂಬಿಕೊಳ್ಳಲು ನಿತ್ಯ ನೂರಾರು ಪ್ರವಾಸಿಗರು ಪಗಿಡೇರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ