ಗರಿಕೆ ಹುಲ್ಲನ್ನು ಭಾರತದಲ್ಲಿ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ಗರಿಕೆ ಹುಲ್ಲಿನಿಂದ ಗಣೇಶನನ್ನು ಪೂಜಿಸುವುದರಿಂದ ಹಿಂದೂಗಳಿಗೆ ಇದು ತುಂಬಾನೆ ಮುಖ್ಯವಾದ ಸಸ್ಯವಾಗಿದೆ. ಈ ಸಸ್ಯವನ್ನು ಸೈನೋಡಾನ್ ಡಾಕ್ಟಿಲಾನ್ ಎಂದೂ ಕರೆಯಲಾಗುತ್ತದೆ. ಈ ಹುಲ್ಲುಗಳು ಗಿಡ್ಡ ಹಸಿರು ಮತ್ತು ಸಾಮಾನ್ಯವಾಗಿ 2-15 ಸೆಂಟಿಮೀಟರ್ ಉದ್ದವಿದ್ದು ಒರಟಾದ ಅಂಚುಗಳನ್ನು ಹೊಂದಿರುತ್ತವೆ. ಕಾಂಡಗಳು ಸ್ವಲ್ಪ ಚಪ್ಪಟೆಯಾಗಿರುತ್ತವೆ.
ಆಯುರ್ವೇದ ಔಷಧದಲ್ಲಿ (ayurveda medicine) ಇದನ್ನು ಸಾಂಪ್ರದಾಯಿಕ ಮೂಲಿಕೆಯಾಗಿ ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ, ಅದರ ಔಷಧೀಯ ಮತ್ತು ವೈದ್ಯಕೀಯ ಗುಣಗಳಿಂದಾಗಿ ಆಯುರ್ವೇದದಲ್ಲಿ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ.
ಗರಿಕೆ ಹುಲ್ಲು ಒಂದಲ್ಲ, ಎರಡಲ್ಲ ಹಲವಾರು ಆರೋಗ್ಯ ಪ್ರಯೋಜನಗಳಿಗಾಗಿ ಜನಪ್ರಿಯತೆ ಪಡೆದಿದೆ. ಇದು ಗ್ಯಾಸ್ಟ್ರಿಕ್ ಗೆ ಚಿಕಿತ್ಸೆ ನೀಡುತ್ತದೆ, ರೋಗನಿರೋಧಕ ಶಕ್ತಿಯನ್ನು (immunity power) ಉತ್ತೇಜಿಸುತ್ತದೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ, ಪಾಲಿಸಿಸ್ಟಿಕ್ ಅಂಡಾಶಯ ಸಿಂಡ್ರೋಮ್ ಗುಣಪಡಿಸುತ್ತದೆ ಮತ್ತು ಋತುಚಕ್ರದ ಸಮಸ್ಯೆಗಳು ಮತ್ತು ಮಲಬದ್ಧತೆಯನ್ನು ಗುಣಪಡಿಸುತ್ತದೆ, ಸ್ಥೂಲಕಾಯಕ್ಕೆ ಚಿಕಿತ್ಸೆ ನೀಡುತ್ತದೆ, ಒಸಡಿನ ರಕ್ತಸ್ರಾವವನ್ನು ಗುಣಪಡಿಸುತ್ತದೆ ಮತ್ತು ಕಣ್ಣಿನ ಸೋಂಕುಗಳನ್ನು ತಡೆಯುತ್ತದೆ.
ಪೋಷಕಾಂಶಗಳ ಆಗರ ಗರಿಕೆ ಹುಲ್ಲು
ಗರಿಕೆ ಹುಲ್ಲು ಅಸಿಟಿಕ್ ಆಮ್ಲ, ಆಲ್ಕಲಾಯ್ಡ್ ಗಳು, ಕಾರ್ಬೋಹೈಡ್ರೇಟ್ ಗಳು, ಕೊಬ್ಬು, ಕೂಮಾರಿಕ್ ಆಮ್ಲ, ಫೈಬರ್, ಫ್ಲೇವೊನ್, ಗ್ಲುಕೋಸೈಡ್, ಹೈಡ್ರೋಕಾರ್ಬನ್, ಲಿಗ್ನಿನ್, ಮೆಗ್ನೀಸಿಯಮ್, ಪಾಲ್ಮಿಟಿಕ್ ಆಮ್ಲ, ಪೊಟ್ಯಾಸಿಯಮ್, ಪ್ರೋಟೀನ್, ಸೆಲೆನಿಯಂ, ಸೋಡಿಯಂ, ಟ್ರೈಟರ್ ಪೆನಾಯ್ಡ್ ಗಳು, ವ್ಯಾನಿಲಿಕ್ ಆಮ್ಲ, ವಿಟಮಿನ್ ಎ ಮತ್ತು ವಿಟಮಿನ್ ಸಿ ಯಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ.
ಆಯುರ್ವೇದ ಪಠ್ಯಗಳಲ್ಲಿ, ಗರಿಕೆ ಹುಲ್ಲನ್ನು 'ಸಹಸ್ರ ವೀರ್ಯ' ಎಂದು ಕರೆಯಲಾಗುತ್ತದೆ, ಇದು ಅದರ ಅನೇಕ ಪ್ರಯೋಜನಗಳು ಮತ್ತು ಬಳಕೆಯನ್ನು ತೋರಿಸುತ್ತದೆ. ಇಷ್ಟೇಲ್ಲಾ ತಿಳಿದ ಮೇಲೆ ಗರಿಕೆ ಹುಲ್ಲಿನ ಹುಟ್ಟು ಹೇಗಾಯಿತು ಅನ್ನೋದನ್ನು ಸಹ ತಿಳಿಯಲೇಬೇಕು ಅಲ್ವಾ? ಇಲ್ಲಿದೆ ನೋಡಿ ಗರಿಕೆ ಹುಲ್ಲಿನ ಹುಟ್ಟಿನ ಬಗ್ಗೆ ಸಂಪೂರ್ಣ ಮಾಹಿತಿ.
ಪುರಾಣದಲ್ಲಿ ಗರಿಕೆಯ ಹುಟ್ಟಿನ ಬಗ್ಗೆ ಸ್ವಾರಸ್ಯಕರ ಕತೆ ಇದೆ. "ಯುದ್ಧ ಭೂಮಿಯಲ್ಲಿ, ಅನಲಾಸುರ ಗಣೇಶನ ಮೇಲೆ ಬೆಂಕಿಯ ಚೆಂಡನ್ನು ಉಗುಳುತ್ತಾ ದಾಳಿ ಮಾಡಿದನು ಎನ್ನಲಾಗುತ್ತದೆ. ಈ ಸಮಯದಲ್ಲಿ ಭಗವಾನ್ ಗಣೇಶನು ತನ್ನ ವಿಶ್ವರೂಪವನ್ನು ತಾಳಿ ಬೆಂಕಿಯ ಉಂಡೆಯನ್ನು ನುಂಗಿದನು ಎಂದು ಪುರಾಣದಲ್ಲಿ ಹೇಳಲಾಗುತ್ತದೆ.
ಅನಲಾಸುರ ಬಿಟ್ಟ ಬೆಂಕಿಯ ಚೆಂಡನ್ನು ತಿಂದ ನಂತರ, ಗಣೇಶನ ದೇಹವು ಬಿಸಿಯಾಗಲು ಪ್ರಾರಂಭಿಸಿತು (body burning). ಅದನ್ನು ಶಾಂತಗೊಳಿಸಲು, ಚಂದ್ರನು ಅವರ ಮೇಲೆ ನಿಂತಿದ್ದನು, ಭಗವಾನ್ ವಿಷ್ಣುವು ಗಣೇಶನಿಗೆ ತನ್ನ ಕಮಲವನ್ನು ನೀಡಿದನು ಮತ್ತು ಶಿವನು ತನ್ನ ಹಾವನ್ನು ತನ್ನ ಸೊಂಟಕ್ಕೆ ಕಟ್ಟಿ ಹೆಚ್ಚುವರಿ ಶಾಖವನ್ನು ಬಿಡುಗಡೆ ಮಾಡಿದನು ಆದರೆ ಏನೂ ಕೆಲಸ ಮಾಡಲಿಲ್ಲ. ಇವೆಲ್ಲವೂ ವಿಫಲವಾದಾಗ, ಋಷಿಮುನಿಗಳ ಗುಂಪೊಂದು ಗರಿಕೆ ಹುಲ್ಲಿನ 21 ಎಲೆಗಳನ್ನು ಗಣೇಶನಿಗೆ ಅರ್ಪಿಸಿದರು.
ಚಂದ್ರ, ವಿಷ್ಣುವಿನ ಪವಿತ್ರ ಕಮಲ ಮತ್ತು ಶಿವನ ಪವಿತ್ರ ನಾಗರಹಾವು ಒಟ್ಟಿಗೆ ಸಾಧಿಸಲು ಸಾಧ್ಯವಾಗದಿದ್ದನ್ನು ಗರಿಕೆ ಹುಲ್ಲು (durva grass) ಮಾಡಲು ಸಾಧ್ಯವಾಯಿತು. ಇದು ಗಣೇಶನ ದೇಹದಲ್ಲಿ ಅನಲಾಸುರ ಎಂಬ ರಾಕ್ಷಸನು ಉತ್ಪಾದಿಸಿದ ಹೆಚ್ಚುವರಿ ಶಾಖವನ್ನು ಕಡಿಮೆ ಮಾಡಿತು. ಅಂದಿನಿಂದ ಇದರ ಮಹತ್ವವೂ ಹೆಚ್ಚಿತು ಎಂದು ಹೇಳಲಾಗುತ್ತದೆ.
ಗರಿಕೆ ಹುಲ್ಲು ಪ್ರಕೃತಿಯಲ್ಲಿ ತಂಪಾಗಿದೆ, ರುಚಿಯಲ್ಲಿ ಸಿಹಿ ರುಚಿ ಮತ್ತು ಸಣ್ಣದಾಗಿರುವುದರಿಂದ ಜೀರ್ಣಿಸಿಕೊಳ್ಳಲು ತುಂಬಾನೆ ಸುಲಭವಾದ ಸಸ್ಯವಾಗಿದೆ. ಅಲ್ಲದೇ ಇದು ಅದ್ಭುತವಾದ ಕಫ-ಪಿತ್ತ ಶಮನಕಾರಿ ಮೂಲಿಕೆಯಾಗಿದೆ. ಆದುದರಿಂದ ಇದನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.
ಮಹಿಳೆಯರಿಗೆ ಗರಿಕೆ ಹುಲ್ಲಿನ ಪ್ರಯೋಜನಗಳು
ಅತ್ಯುತ್ತಮವಾದುದು ಡಿಟಾಕ್ಸಿಫೈಯರ್ (detoxifier) .
ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದು ಚರ್ಮಕ್ಕೆ ಅದ್ಭುತವಾಗಿದೆ.
ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.
ಯುಟಿಐಗಳಿಗೆ ಒಳ್ಳೆಯದು.
ಋತುಚಕ್ರದಲ್ಲಿ ಭಾರೀ ರಕ್ತಸ್ರಾವ ಮತ್ತು ಸೆಳೆತವನ್ನು ಕಡಿಮೆ ಮಾಡುತ್ತದೆ.
ಇದು ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು.
ಹುಣ್ಣುಗಳು, ಕೊಲೈಟಿಸ್, ಅಸಿಡಿಟಿ, ಹೊಟ್ಟೆ ನೋವು ಇತ್ಯಾದಿಗಳಲ್ಲಿ ಪ್ರಯೋಜನಕಾರಿ.
ಗರಿಕೆ ಜ್ಯೂಸ್
ಒಂದು ಹಿಡಿ ಗರಿಕೆ ಹುಲ್ಲನ್ನು ತೊಳೆದು ಸ್ವಚ್ಛಗೊಳಿಸಿ ಮತ್ತು ಅದರಲ್ಲಿ ಕೆಲವು ಹನಿ ನೀರನ್ನು ಬೆರೆಸಿ ನುಣ್ಣಗೆ ಪೇಸ್ಟ್ ತಯಾರಿಸಿ. ಪ್ರತಿದಿನ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಪೇಸ್ಟ್ ಹಾಕಿ ಸೇವಿಸುವುದರಿಂದ ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹದ ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ದೂರ್ವಾ ರಸವನ್ನು ಸೇವಿಸಿದ ನಂತರ ಕನಿಷ್ಠ 3 ಗಂಟೆಗಳ ಕಾಲ ಏನನ್ನೂ ತಿನ್ನಬೇಡಿ ಅಥವಾ ಕುಡಿಯಬೇಡಿ.
ಗರಿಕೆ ಪುಡಿ
ಹುಲ್ಲನ್ನು ಒಣಗಿಸಿ ಪುಡಿ ಮಾಡಬಹುದು. ಒಣಗಿದ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಅಥವಾ ನೀರಿನೊಂದಿಗೆ ಸರಳವಾಗಿ ತೆಗೆದುಕೊಳ್ಳಬಹುದು. ಹೀಗೆ ಮಾಡುವುದರಿಂದಲೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೇ ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ಗರಿಕೆ ನೀರು
ಒಂದು ಕಪ್ ನೀರಿನಲ್ಲಿ ಒಂದು ಹಿಡಿ ಹುಲ್ಲನ್ನು ರಾತ್ರಿಯಿಡೀ ನೆನೆಸಿ, ಮರುದಿನ ಬೆಳಿಗ್ಗೆ 3-5 ನಿಮಿಷಗಳ ಕಾಲ ಕುದಿಸಿ, ನೀರನ್ನು ಸೋಸಿ ಮತ್ತು ಸಿಪ್ ಮಾಡಿ.ಕೂಲಿಂಗ್ ಎಫೆಕ್ಟ್ ಗಾಗಿ ಇದನ್ನು ಪ್ರಯತ್ನಿಸಿ. ಇದು ದೇಹವನ್ನು ತಂಪಾಗಿರಿಸುತ್ತದೆ. ಹೆಚ್ಚುವರಿ ಶಾಖವನ್ನು ಬಿಡುಗಡೆ ಮಾಡುತ್ತದೆ.