ಅವಲಕ್ಕಿ ನೆನೆಸಿ ಅದಕ್ಕೆ ಈರುಳ್ಳಿ, ಟೊಮೆಟೋದ ಒಗ್ಗರಣೆ ಸೇರಿಸಿದ್ರೆ ಬೆಳಗಿನ ತಿಂಡಿ ರೆಡಿಯಾಗುತ್ತದೆ. ಆದ್ರೆ ಅವಲಕ್ಕಿಯಿಂದ ಮಾಡುವ ತಿಂಡಿ ಕೆಲವೇ ಸಮಯದಲ್ಲಿಯೇ ತಣ್ಣಗಾಗಿ ಅದರ ರುಚಿಯನ್ನು ಕಳೆದುಕೊಳ್ಳುತ್ತದೆ.
27
ಇಂದು ನಾವು ನಿಮಗೆ ಅವಲಕ್ಕಿ ಬದಲು ಮಂಡಕ್ಕಿ (ಕಡ್ಲೇಪುರಿ) ಬಳಸಿ ಹೇಗೆ ರುಚಿಯಾದ ತಿಂಡಿ ಮಾಡಬಹುದು ಎಂಬುದರ ರೆಸಿಪಿಯನ್ನು ಹೇಳುತ್ತಿದ್ದೇವೆ. ಈ ರೀತಿಯಾಗಿ ತಯಾರಿಸಿದ ತಿಂಡಿ ತಣ್ಣಗಾದ್ರೂ ತಿನ್ನಬಹುದು. ತಣ್ಣಗಾದ ನಂತರವೂ ಇದರ ರುಚಿ ಮತ್ತಷ್ಟು ಹೆಚ್ಚಳವಾಗುತ್ತದೆ. ಉತ್ತರ ಕರ್ನಾಟಕದ ಭಾಗದಲ್ಲಿ ಈ ತಿಂಡಿಯನ್ನು ಮಾಡುತ್ತಾರೆ. ಇದನ್ನು ಸುಸೂಲಾ ಅಂತಾನೂ ಕರೆಯಲಾಗುತ್ತದೆ.
37
ಬೇಕಾಗುವ ಸಾಮಾಗ್ರಿಗಳು
ಮಂಡಕ್ಕಿ: 200 ಗ್ರಾಂ, ಚಿಕ್ಕ ಗಾತ್ರದ 1 ಈರುಳ್ಳಿ, ಚಿಕ್ಕದಾದ ಟೊಮೆಟೋ 1, ಕಡಲೆ ಬೀಜ: 2 ಟೀ ಸ್ಪೂನ್, ಸಾಸಿವೆ-ಜೀರಿಗೆ: 1/2 ಟೀ ಸ್ಪೂನ್, ಕರೀಬೇವು: 5 ರಿಂದ 7 ಎಲೆ, ಅರಿಶಿನ: 1/4 ಟೀ ಸ್ಪೂನ್, ಕೋತಂಬರಿ ಸೊಪ್ಪು, ಎಣ್ಣೆ: 2 ಟೀ ಸ್ಪೂನ್, ನಿಂಬೆ ರಸ: 1 ಟೀ ಸ್ಪೂನ್, ಉಪ್ಪು: ರುಚಿಗೆ ತಕ್ಕಷ್ಟು, ಹಸಿಮೆಣಸಿನಕಾಯಿ: 2
47
ಮಾಡುವ ವಿಧಾನ
ಮೊದಲಿಗೆ ಈರುಳ್ಳಿ, ಟೊಮೆಟೋ, ಹಸಿಮೆಣಸಿನಕಾಯಿ ಮತ್ತು ಕೋತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. ನಂತರ ಮಂಡಕ್ಕಿಯನ್ನು ನೀರಿನಲ್ಲಿ ಹಾಕಬೇಕು. ನಂತರ ನೀರಿನಿಂದ ಹೊರಗೆ ತೆಗೆದು ನೀರಿನಂಶ ಹೋಗುವಂತೆ ಹಿಂಡಿ ಪಾತ್ರೆಗೆ ಹಾಕಿಕೊಳ್ಳಿ.
57
ಈಗ ಒಲೆ ಆನ್ ಮಾಡ್ಕೊಂಡು ಅಗಲವಾದ ಪಾತ್ರೆಯನ್ನಿಟ್ಟುಕೊಳ್ಳಿ. ಈಗ ಇದಕ್ಕೆ 2 ಟೀ ಸ್ಪೂನ್ ಅಡುಗೆಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಸಾಸಿವೆ, ಜೀರಿಗೆ, ಕರೀಬೇವು ಮತ್ತು ಕಡಲೆಬೀಜ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
67
ತದನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಬೇಕು. ಈಗ ಟೊಮೆಟೋ ಸೇರಿಸಿ ಸಾಫ್ಟ್ ಆಗೋವರೆಗೂ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ಚಿಟಿಕೆಯಷ್ಟು ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು.
77
ತೊಳೆಸಿಟ್ಟುಕೊಂಡಿರುವ ಮಂಡಕ್ಕಿಯನ್ನು ಈ ಒಗ್ಗರಣೆಗೆ ಸೇರಿಸಿ ಮಿಕ್ಸ್ ಮಾಡಬೇಕು. ನಂತರ ನಿಂಬೆರಸ ಮತ್ತು ಕೋತಂಬರಿ ಸೊಪ್ಪು ಸೇರಿಸಿದ್ರೆ ರುಚಿಯಾದ ಮಂಡಕ್ಕಿ ಒಗ್ಗರಣೆ/ಸುಸೂಲಾ ಸವಿಯಲು ಸಿದ್ಧವಾಗುತ್ತದೆ. ಬೇಕಿದ್ರೆ ಮೇಲೆ ಹುರಿಗಡಲೆ ಪುಡಿಯನ್ನು ಮಿಕ್ಸ್ ಮಾಡಿಕೊಳ್ಳಬಹುದು. ಬಿಸಿ ಬಿಸಿಯಾದ ಬಜ್ಜಿ ಇದಕ್ಕೆ ಒಳ್ಳೆಯ ಕಾಂಬಿನೇಷನ್ ಆಗುತ್ತದೆ.