ಬೆಂಗಳೂರಿನ ಎಲ್ಲಾ ಕಡೆಯೂ ಸಿಗುವ ಟಾಪ್ 5 ಫೇಮಸ್ ರುಚಿಕರ ತಿಂಡಿಗಳು

First Published | Sep 14, 2024, 3:28 PM IST

ಬೆಂಗಳೂರು ಅನ್ನೋದು ದೊಡ್ಡ ಸಮುದ್ರ. ಈ ಸಿಲಿಕಾನ್ ಸಿಟಿಯಲ್ಲಿ ದೇಶದ ಎಲ್ಲಾ ಭಾಗದ ಜನರು ವಾಸಿಸುತ್ತಿದ್ದಾರೆ. ವಿದೇಶಿ ಪ್ರಜೆಗಳು ಸಹ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ಗಾರ್ಡನ್ ಸಿಟಿಯಲ್ಲಿ ಎಲ್ಲಾ ಬಗೆಯ ಆಹಾರ ಸಿಗುತ್ತದೆ.

ಬೆಂಗಳೂರು ತಿಂಡಿಗಳು

ರಾಜಧಾನಿ ಬೆಂಗಳೂರಿನಲ್ಲಿ ನೀವು ಎಲ್ಲೇ ಹೋದರೂ ಕೆಲವೊಂದು ತಿಂಡಿಗಳು ಸಿಗುತ್ತವೆ. ಫುಟ್‌ಪಾತ್ ನಿಂದ ಫೈಸ್‌ ಸ್ಟಾರ್ ಹೋಟೆಲ್‌ಗಳಲ್ಲಿ ಈ ತಿಂಡಿಗಳು ಇರುತ್ತವೆ. ಹಾಗಾದ್ರೆ ಆ ತಿಂಡಿಗಳು ಯಾವವು ಅಂತ ನೋಡೋಣ ಬನ್ನಿ.

1.ಇಡ್ಲಿ-ವಡೆ

ಇಡ್ಲಿ ಮತ್ತು ವಡೆ ಬೆಂಗಳೂರಿನ ಐಕಾನಿಕ್ ತಿಂಡಿಯಾಗಿದೆ. ತಳ್ಳೋ ಗಾಡಿಯಲ್ಲಿಯೂ ನಿಮಗೆ ರುಚಿಕರ ಇಡ್ಲಿ ಸಿಗುತ್ತದೆ. ಇಡ್ಲಿಗಳಲ್ಲಿ ನಿಮಗೆ ರವೆ ಇಡ್ಲಿ, ತಟ್ಟೆ ಇಡ್ಲಿ, ಮಿನಿ ಇಡ್ಲಿ, ಚಿಬ್ಲು ಇಡ್ಲಿ ಹೀಗೆ ಬಗೆ ಬಗೆಯ ಇಡ್ಲಿಗಳು ಸಿಗುತ್ತವೆ. ಇಡ್ಲಿ ಜೊತೆ ಕೆಲವರಿಗೆ ಉದ್ದಿನ ವಡೆ ಅಥವಾ ಮಸಾಲೆ ವಡೆ ಇಷ್ಟವಾಗುತ್ತದೆ. ಚಟ್ನಿ ಮತ್ತು ಸಾಂಬಾರ್ ಜೊತೆ ಇಡ್ಲಿ-ವಡೆಯನ್ನು ಸವಿಯಲಾಗುತ್ತದೆ.

Latest Videos


2.ದೋಸೆ

ಬೆಂಗಳೂರಿನಲ್ಲಿ ಸಿಗುವ ಮತ್ತೊಂದು ತಿಂಡಿ ಅಂದ್ರೆ ದೋಸೆ. ಇದರಲ್ಲಿಯೂ ನಿಮಗೆ ವರೈಟಿ ದೋಸೆಗಳು ಸಿಗುತ್ತವೆ. ಮಸಾಲೆ ದೋಸೆ, ರವೆ ದೋಸೆ, ಪ್ಲೇನ್ ದೋಸೆ  ಮತ್ತು ಖಾಲಿ ದೋಸೆ ಎಲ್ಲಡೆ ಸಿಗುತ್ತವೆ. ಬೆಂಗಳೂರಿನ ಕೆಲವು ಭಾಗದಲ್ಲಿ ನಿಮಗೆ ನೀರ್ ದೋಸೆಯೂ ಸಿಗುತ್ತದೆ. ತೆಂಗಿನಕಾಯಿ ಚಟ್ನಿ, ಆಲೂ ಪಲ್ಯ ದೋಸೆಗೆ ಒಳ್ಳೆಯ ಕಾಂಬಿನೇಷನ್.

3.ಪೂರಿ-ಸಾಗು

ಪೂರಿ ಮತ್ತು ಸಾಗು ಸಹ ನಿಮಗೆ ಬೆಂಗಳೂರಿನ ಎಲ್ಲಾ ಹೋಟೆಲ್‌ಗಳಲ್ಲಿ ಸಿಗುತ್ತದೆ. ತರಕಾರಿಗಳಿಂದ ಸಿದ್ಧವಾಗುವ ಸಾಗುಗೆ ಪೂರಿಯನ್ನು ಡಿಪ್ ಮಾಡಿಕೊಂಡು ತಿನ್ನುವ ರುಚಿಯೇ ಬೇರೆಯಾಗಿರುತ್ತದೆ. ಪೂರಿ ಜೊತೆ ಕಾಯಿ ಚಟ್ನಿಯೂ ಪರ್ಫೆಕ್ಟ್ ಕಾಂಬಿನೇಷನ್ ಆಗುತ್ತದೆ. ಕರಿದ ಪದಾರ್ಥ ತಿನ್ನೋರಿಗೆ ಬೆಂಗಳೂರಿನ ಪುರಿ-ಸಾಗು ಖಂಡಿತ ಇಷ್ಟವಾಗುತ್ತದೆ.

4.ಚಿತ್ರನ್ನ

ಕೆಲವರು ಮಾತ್ರ ರೈಸ್ ಐಟಂ ಬೇಕು ಅಂತಾನೇ ಹೇಳುತ್ತಾರೆ. ಚಿತ್ರಾನ್ನವನ್ನು ಲೆಮೆನ್ ರೈಸ್ ಅಂತಾನೂ ಕರೆಯಲಾಗುತ್ತದೆ. ರಸ್ತೆಬದಿಯ ಅಂಗಡಿಗಳಲ್ಲಿ ಸಿಗುವ  ಚಿತ್ರಾನ್ನದ ಟೇಸ್ಟ್ ನಿಮಗೆ ಎಲ್ಲಿಯೂ ಸಿಗಲ್ಲ. ಒಮ್ಮೆ ತಿಂದ್ರೆ ಹೊಟ್ಟೆ ತುಂಬಬೇಕು ಅನ್ನೋರು ಚಿತ್ರಾನ್ನ ಇಷ್ಟಪಡುತ್ತಾರೆ. ಚಿತ್ರಾನ್ನಾ ಡ್ರೈ ಅನ್ನಿಸಿದರೆ ನಿಮಗೆ ಕಾಯಿ ಚಟ್ನಿ ನೀಡಲಾಗುತ್ತದೆ.

5.ಬಿಸಿಬೇಳೆ ಬಾತ್, ಪುಳಿಯೊಗೆರೆ, ವಾಂಗಿಬಾತ್, ಪೊಂಗಲ್, ಪುಲಾವ್

ಬೆಳಗ್ಗೆ ಸಿಗುವ ತಿಂಡಿಗಳಲ್ಲಿ ಬಿಸಿಬೇಳೆ ಬಾತ್, ಪುಳಿಯೊಗೆರೆ, ವಾಂಗಿಬಾತ್, ಪೊಂಗಲ್ ಸಹ ಸೇರಿವೆ. ಬಿಸಿಬೇಳೆ ಬಾತ್ ಹೆಚ್ಚು ತರಕಾರಿಗಳನ್ನೊಳಗೊಂಡ ತಿಂಡಿಯಾಗಿದ್ದು, ಇದರ ಮೇಲೆ ಖಾರಾ ಬೂಂದಿ ಹಾಕಿ ತಿನ್ನಲಾಗುತ್ತದೆ. ಪುಳಿಯೊಗೆರೆ ಹುಳಿ-ಬೆಲ್ಲ-ಕಾಯಿ ಮಿಶ್ರಿತ ತಿಂಡಿಯಾದ್ರೆ, ವಾಂಗಿಬಾತ್‌ ನಲ್ಲಿ ಬದನೆಕಾಯಿಗೆ ಅಗ್ರ ಸ್ಥಾನ. ಇನ್ನು ಪೊಂಗಲ್‌ನಲ್ಲಿ ನಿಮಗೆ ಸಿಹಿ ಮತ್ತು ಖಾರ ಎಂಬ ಎರಡು ವಿಧಗಳು ಲಭ್ಯವಾಗುತ್ತದೆ. ಪುಲಾವ್‌ನ್ನುತರಕಾರಿಗಳಿಂದ ತಯಾರಾಗುವ ರೈಸ್‌ ಬಾತ್ ಆಗಿದೆ.

ಇತ್ತೀಚೆಗೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಪರಾಟ, ಆಲೂ ಪರಾಟ, ಸಮೋಸಾ, ವಡಾಪಾವ್, ಕಚೋರಿಯೂ ಸಿಗುತ್ತಿದೆ. ಇದೆಲ್ಲದರ ಜೊತೆ  ಚೌಚೌ (ಉಪ್ಪಿಟ್ಟು-ಕೇಸರಿ ಬಾತ್) ಸಹ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ. ಬೆಳಗಿನ ತಿಂಡಿ ಜೊತೆ ಜನರು ಒಂದು ಕಪ್ ಟೀ ಅಥವಾ ಕಾಫಿ ಕುಡಿಯೋದನ್ನು ಮರೆಯಲ್ಲ.

click me!