ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾದ ನಂತರ ಇದೇ ಮೊದಲ ಬಾರಿ ಅಯೋಧ್ಯೆಯ ಭವ್ಯ ಮಂದಿರದಲ್ಲಿ ರಾಮನವಮಿಯ ಆಚರಣೆ ನಡೆಯಲಿದ್ದು, ಇದಕ್ಕಾಗಿ ಭವ್ಯ ಮಂದಿರ ಸಕಲ ರೀತಿಯಿಂದಲೂ ಸಜ್ಜಾಗಿದೆ.
ರಾಮನವಮಿಗೆ ಅಲಂಕೃತವಾ ಅಯೋಧ್ಯೆ ರಾಮ ಮಂದಿರದ ಸುಂದರ ಫೋಟೋಗಳನ್ನು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿವೆ.
ಫೋಟೋಗಳಲ್ಲಿ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರ ದೀಪ ಹಾಗೂ ವಿದ್ಯುತ್ ಅಲಂಕಾರಗಳಿಂದ ಶೃಂಗಾರಗೊಂಡಿದೆ. ಈ ವರ್ಷದ ಜನವರಿ 22 ರಂದು ಭಾರತದ ಭವ್ಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದಂತಹ ಭವ್ಯ ರಾಮ ಮಂದಿರದ ಉದ್ಘಾಟನೆ ನಡೆಯಿತು.
ಸುಮಾರು 500 ವರ್ಷಗಳಿಂದ ಸಣ್ಣ ಟೆಂಟ್‌ನಲ್ಲಿದ್ದ ಶ್ರೀರಾಮನಿಗೆ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರವನ್ನು ನಿರ್ಮಿಸುವ ಮೂಲಕ ಕೋಟ್ಯಾಂತರ ಭಾರತೀಯರ ಬಹುವರ್ಷಗಳ ಕನಸನ್ನು ನನಸು ಮಾಡಲಾಗಿತ್ತು. ಈ ಐತಿಹಾಸಿಕ ಕ್ಷಣಕ್ಕೆ ಲಕ್ಷಾಂತರ ಜನ ಸಾಕ್ಷಿಯಾಗಿದ್ದರು.
ಹೀಗಾಗಿ ಈ ಬಾರಿಯ ರಾಮನವಮಿ ಬಲು ವಿಶೇಷವೆನಿಸಿದೆ. ಈ ವಿಶೇಷ ಕ್ಷಣದಲ್ಲಿ ಭಕ್ತರಿಗೆ ಹಂಚುವುದಕ್ಕಾಗಿ ದೇವ್ರಹ ಹನ್ಸ್‌ಬಾಬಾ ಟ್ರಸ್ಟ್‌ನಿಂದ 1,11,111 ಕೇಜಿ ಲಡ್ಡುಗಳನ್ನು ಅಯೋಧ್ಯೆಯ ರಾಮ ಮಂದಿರಕ್ಕೆ ಕಳುಹಿಸಿ ಕೊಡಲಾಗುತ್ತಿದೆ.
ಏ17ರ ಬುಧವಾರ ನಾಳೆ ರಾಮ ನವಮಿ ಇದ್ದು, ಸುಮಾರು 25 ಲಕ್ಷಕ್ಕೂ ಹೆಚ್ಚು ಭಕ್ತರು ಅಯೋಧ್ಯೆಯ ರಾಮ ಮಂದಿರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಏಪ್ರಿಲ್ 15 ರಿಂದ 18ರವರೆಗೆ ದೇಗುಲದಲ್ಲಿ ವಿಐಪಿ ದರ್ಶನ ರದ್ದು ಮಾಡಲಾಗಿದೆ. ಹೀಗಾಗಿ ಭಕ್ತರು ಈಗಾಗಲೇ ಕಾಯ್ದಿರಿಸಿದ ವಿಐಪಿ ಟಿಕೆಟ್‌ಗಳನ್ನು ರದ್ದು ಮಾಡಲಾಗಿದೆ.
ನಿನ್ನೆಯಷ್ಟೇ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯ ಒಳಗೆ ಸೂರ್ಯರಶ್ಮಿ ಪ್ರಯೋಗ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲಾಗಿದ್ದು, ರಾಮನವಮಿಯಂದು ಅಯೋಧ್ಯೆ ಶ್ರೀರಾಮನ ಮೂರ್ತಿಯನ್ನು ಸೂರ್ಯರಶ್ಮಿ ಪ್ರವೇಶಿಸಲಿದೆ.