ಚಿನ್ನಾರಿಮುತ್ತನ ಚಿನ್ನದಂಥ ಕುಟುಂಬಕ್ಕೆ ಬರಸಿಡಿಲು, ಸ್ಪಂದನಾ-ವಿಜಯ್‌ ಜೋಡಿಯ ಸುಂದರ ಚಿತ್ರಗಳು!

First Published | Aug 7, 2023, 11:02 AM IST

ಚಿನ್ನಾರಿ ಮುತ್ತ ವಿಜಯ್‌ ರಾಘವೇಂದ್ರ ಅವರ ಚಿನ್ನದಂತ ಕುಟುಂಬಕ್ಕೆ ಬರಸಿಡಿಲು ಎರಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪತ್ನಿಯ ಜೊತೆಗಿನ ಸುಂದರ ಚಿತ್ರಗಳನ್ನು ವಿಜಯ್‌ ರಾಘವೇಂದ್ರ ಹಂಚಿಕೊಳ್ಳುತ್ತಿದ್ದರು. ಆದರೆ, ತೀರಾ ಚಿಕ್ಕ ವಯಸ್ಸಿಗೆ ಅವರು ಅಸುನೀಗಿದ್ದಾರೆ.

ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ, ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು.

Breaking: ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾದಿಂದ ನಿಧನ

ಮೂರು ದಿನಗಳ ಹಿಂದೆ ಕುಟುಂಬ ಸಮೇತ ಅವರು ಬ್ಯಾಂಕಾಕ್‌ ಪ್ರವಾಸಕ್ಕೆ ತೆರಳಿದ್ದರು. ಅವರ ಮೃತದೇಹ ಮಂಗಳವಾರ ಬೆಂಗಳೂರಿಗೆ ಬರಲಿದೆ.

Tap to resize

ಸ್ಪಂದನಾ ವಿಜಯ್‌ ರಾಘವೇಂದ್ರ ಮೂಲತಃ ದಕ್ಷಿಣ ಕನ್ನಡದ ಬೆಳ್ತಂಗಡಿಯವರು. ಅವರ ತಂದೆ ಬೆಂಗಳೂರಿನ ಮಾಜಿ ಎಸಿಪಿ ಬಿಕೆ ಶಿವರಾಮ್‌. ಕಾಂಗ್ರೆಸ್‌ ಎಂಎಲ್‌ಸಿ ಬಿಕೆ ಹರಿಪ್ರಸಾದ್‌ ಇವರ ದೊಡ್ಡಪ್ಪ. ಸ್ಪಂದನಾ ಅಣ್ಣ ರಕ್ಷಿತ್‌ ಶಿವರಾಂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ವಿಜಯ್‌ ರಾಘವೇಂದ್ರ ಮದುವೆ ಆಗೋದಿದ್ದರೆ, ಮಂಗಳೂರು ಮೂಲದ ಹುಡುಗಿಯನ್ನೇ ಮದುವೆಯಾಗಬೇಕು ಎಂದು ಅಂದುಕೊಂಡಿದ್ದರು. ಅದರಂತೆ ಸ್ಪಂದನಾ ಅವರ ಬಾಳಿಗೆ ಜೊತೆಯಾಗಿದ್ದರು.

2004ರಲ್ಲಿ ಮಲ್ಲೇಶ್ವರದ ಕಾಫಿ ಡೇ ಒಂದರಲ್ಲಿ ಸ್ಪಂದನಾರನ್ನು ನೋಡಿದ್ದ ವಿಜಯ್‌ ರಾಘವೇಂದ್ರ ಅವರಿಗೆ ಮನಸೋತಿದ್ದರು. ಇದನ್ನು ವಿಜಯ್‌ ರಾಘವೇಂದ್ರ ಹಲವು ವೇದಿಕೆಯಲ್ಲಿ ಹೇಳಿಕೊಂಡಿದ್ದರು.

ವಿಶೇಷವೆಂದರೆ, ಮೊದಲ ಭೇಟಿಯಲ್ಲಿಯೇ ಇವರ ನಡುವೆ ಸಂಗೀತದ ವಿಚಾರವಾಗಿ ಗಲಾಟೆ ನಡೆದಿತ್ತಂತೆ ಇದನ್ನು ವಿಜಯ್‌ ರಾಘವೇಂದ್ರ ಟಿವಿ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು.

2007ರಲ್ಲಿ 2ನೇ ಬಾರಿಗೆ ಅವರು ಶೇಷಾದ್ರಿಪುರದ ಕಾಫಿ ಡೇಯಲ್ಲಿ ಸ್ಪಂದನಾರನ್ನು ವಿಜಯ್‌ ರಾಘವೇಂದ್ರ ಭೇಟಿಯಾಗಿದ್ದರು. ಆ ವೇಳೆಗಾಗಲೇ ಸ್ಪಂದನಾಗೆ ವಿಜಯ್‌ ಮನಸೋತಿದ್ದರು.

2ನೇ ಭೇಟಿಯಲ್ಲಿ ಸ್ಪಂದನಾರನ್ನು ಚೆನ್ನಾಗಿ ಮಾತನಾಡಿಸಿದ್ದೆ. ಆಕೆಯನ್ನು ಮದುವೆಯಾಗುವ ಮನಸ್ಸಾಗಿತ್ತು ಎಂದು ವಿಜಯ್‌ ರಾಘವೆಂದ್ರ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಇನ್ನು ಸ್ಪಂದನಾ ಹಾಗೂ ವಿಜಯ್‌ ಭೇಟಿಯಾಗುತ್ತಿರುವುದು ಸ್ಪಂದನಾ ಮನೆಯವರಿಗೂ ತಿಳಿದಿತ್ತು. ಸ್ವತಃ ಬಿಕೆ ಶಿವರಾಮ್‌ ಸ್ಪಂದನಾ ಬಳಿ ವಿಜಯ್‌ರನ್ನು ಮದುವೆಯಾಗ್ತೀಯಾ ಅಂತಾ ಕೇಳಿದ್ದರಂತೆ.

ಇನ್ನೊಂದೆಡೆ ವಿಜಯ್‌ ರಾಘವೇಂದ್ರ ಕೂಡ ತಮ್ಮ ತಂದೆ ಚಿನ್ನೇಗೌಡರ ಬಳಿ ಸ್ಪಂದನಾರನ್ನು ಪ್ರೀತಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಮನೆಯವರಿಗೆ ತಿಳಿದ ಒಂದೇ ತಿಂಗಳಲ್ಲಿ ಇವರಿಬ್ಬರ ಮದುವೆ ನಡೆದಿತ್ತು.

ಇಬ್ಬರ ವಿಚಾರ ಮನೆಯಲ್ಲಿ ತಿಳಿದ ಬೆನ್ನಲ್ಲೇ ಒಂದೇ ತಿಂಗಳಲ್ಲಿ ಎರಡೂ ಕುಟುಂಬಗಳು ಮದುವೆ ನಿಶ್ಚಯ ಮಾಡಿದ್ದವು. 2007ರ ಆಗಸ್ಟ್‌ 26 ರಂದು ಇವರ ವಿವಾಹ ನಡೆದಿತ್ತು.

ಮದುವೆಯ 16ನೇ ವಾರ್ಷಿಕೋತ್ಸವಕ್ಕೆ ಇನ್ನು 19 ದಿನಗಳು ಬಾಕಿ ಇದ್ದಾಗಲೇ ಸ್ಪಂದನಾ ವಿಜಯ್‌ ರಾಘವೇಂದ್ರ ಇಹಲೋಕ ತ್ಯಜಿಸಿದ್ದಾರೆ.

ಮಗಳ ಹಠಾತ್‌ ನಿಧನದಿಂದ ಆಘಾತಗೊಂಡಿರುವ ತಂದೆ ಬಿಕೆ ಶಿವರಾಮ್‌ ಕೂಡ ಬ್ಯಾಂಕಾಕ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ. 

ಇತ್ತೀಚಿನ ದಿನಗಳಲ್ಲಿ ಡಯಟ್‌ಗೆ ಹೆಚ್ಚಿನ ಆಸಕ್ತಿ ತೋರಿದ್ದ ಸ್ಪಂದನಾ ವಿಜಯ್‌ ರಾಘವೇಂದ್ರ, 16 ಕೆಜಿ ತೂಕ ಇಳಿಸಿಕೊಂಡಿದ್ದರು.

ಬ್ಯಾಂಕಾಂಕ್‌ನಲ್ಲಿ ಶಾಪಿಂಗ್‌ ಮುಗಿಸಿ ಬರುವಾಗ ಹೃದಯಾಘಾತವಾಗಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗದಲ್ಲಿಯೇ ಸಾವು ಕಂಡಿದ್ದಾರೆ.

Latest Videos

click me!