ಜಪಾನ್‌ನಿಂದ ದುಬೈವರೆಗೆ ರಜನಿಕಾಂತ್ ಫೀವರ್: 'ಜೈಲರ್ 2'ಗೋಸ್ಕರ ಪಟಾಕಿ ಸಿಡಿಸಿ ಫ್ಯಾನ್ಸ್ ಸಂಭ್ರಮ!

Published : Oct 15, 2026, 06:22 PM IST

ರಜನಿಕಾಂತ್ ಅವರ 'ಜೈಲರ್ 2' ರಿಲೀಸ್ ಆಗಿದ್ದು, ದೇಶ-ವಿದೇಶಗಳಲ್ಲಿ ಫ್ಯಾನ್ಸ್ ಭರ್ಜರಿ ಸಂಭ್ರಮಾಚರಣೆ ಶುರು ಮಾಡಿದ್ದಾರೆ. ಥಿಯೇಟರ್‌ಗಳ ಮುಂದೆ ಪಟಾಕಿ ಸಿಡಿಸಿ, ಡ್ಯಾನ್ಸ್ ಮಾಡುತ್ತಾ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ. ಚೆನ್ನೈನಿಂದ ಜಪಾನ್‌ವರೆಗೆ ಸೂಪರ್‌ಸ್ಟಾರ್ ಸಿನಿಮಾ ರಿಲೀಸ್ ಆಗಿದೆ.

PREV
13
ಜೈಲರ್ 2: ವಿಶ್ವಾದ್ಯಂತ ರಜನಿಕಾಂತ್ ಸಿನಿಮಾ ರಿಲೀಸ್ ಸಂಭ್ರಮ

ರಜನಿಕಾಂತ್ ಅವರ 'ಜೈಲರ್ 2' ರಿಲೀಸ್ ಆಗಿದ್ದೇ ತಡ, ಥಿಯೇಟರ್‌ಗಳೆಲ್ಲಾ ಹಬ್ಬದ ಅಂಗಳವಾಗಿ ಬದಲಾಗಿವೆ. ತಮ್ಮ ನೆಚ್ಚಿನ ಸೂಪರ್‌ಸ್ಟಾರ್‌ ಅನ್ನು ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಸಾಗರೋಪಾದಿಯಲ್ಲಿ ಹರಿದುಬಂದಿದ್ದಾರೆ. ಪಟಾಕಿ, ಹೂವಿನ ಹಾರ, ಭರ್ಜರಿ ಡ್ಯಾನ್ಸ್ ಮೂಲಕ ಭಾರತದ ನಗರಗಳಿಂದ ಹಿಡಿದು ದುಬೈ, ಸಿಂಗಾಪುರ, ಜಪಾನ್ ಹಾಗೂ ಉತ್ತರ ಅಮೆರಿಕದವರೆಗೂ ಸಂಭ್ರಮ ಮುಗಿಲುಮುಟ್ಟಿದೆ.

ರಜನಿ ಅಭಿಮಾನಿಗಳಿಗೆ ಈ ಸಿನಿಮಾ ರಿಲೀಸ್ ಕೇವಲ ಒಂದು ಶೋ ಅಲ್ಲ, ಅದೊಂದು ಹಬ್ಬ. ಮುಂಜಾನೆಯ ಶೋಗಳು, ಪೂಜೆ-ಪುನಸ್ಕಾರಗಳು ಹಾಗೂ ತಲೈವಾ ಜಪ ತಮಿಳು ಸಿನಿರಂಗದ ಐಕಾನ್ ಕ್ರೇಜ್ ಎಷ್ಟಿದೆ ಎಂಬುದನ್ನು ತೋರಿಸುತ್ತಿವೆ. ವಿಶೇಷ ಅಂದರೆ, ಭಾರತದ ಜೊತೆಯಲ್ಲೇ ಜಪಾನ್‌ನಲ್ಲೂ 'ಜೈಲರ್ 2' ಏಕಕಾಲಕ್ಕೆ ರಿಲೀಸ್ ಆಗಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

23
ದುಬೈನಿಂದ ಜಪಾನ್‌ವರೆಗೆ 'ಜೈಲರ್ 2' ಗ್ಲೋಬಲ್ ಸೆಲೆಬ್ರೇಷನ್

ವಿದೇಶಗಳಲ್ಲಿ ಮುಂಜಾನೆ ಶೋಗಳಿಗೆ ಫ್ಯಾನ್ಸ್ ಮುಗಿಬಿದ್ದಿದ್ದು, ಸಿನಿಮಾ ರಿಲೀಸ್ ದೊಡ್ಡ ಇವೆಂಟ್ ಆಗಿ ಬದಲಾಗಿದೆ. ದುಬೈನ ಡೇರಾ ಸಿಟಿ ಸೆಂಟರ್‌ನಲ್ಲಿ ಬೆಳಗಿನ ಜಾವ 3 ಗಂಟೆಗೇ ಶೋಗಳು ಶುರುವಾಗಿದ್ದು, ರಜನಿಕಾಂತ್ ಎಂಟ್ರಿಗೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.

ಸಿಂಗಾಪುರದಲ್ಲೂ ಮುಂಜಾನೆ ಶೋಗಳಿಗೆ ಥಿಯೇಟರ್‌ಗಳು ಹೌಸ್‌ಫುಲ್ ಆಗಿವೆ. ಫ್ಯಾನ್ಸ್ ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ಸಂಭ್ರಮಿಸಿದ್ದಾರೆ. ಉತ್ತರ ಅಮೆರಿಕದಲ್ಲೂ ಇದೇ ವಾತಾವರಣವಿದ್ದು, ಥಿಯೇಟರ್‌ಗಳ ಹೊರಗೆ ಗುಂಪುಗುಂಪಾಗಿ ಡ್ಯಾನ್ಸ್ ಮಾಡುತ್ತಾ, ಸೂಪರ್‌ಸ್ಟಾರ್ ಫೋಟೋ ಇರುವ ಕಸ್ಟಮೈಸ್ಡ್ ಟಿ-ಶರ್ಟ್ ಧರಿಸಿ ಫ್ಯಾನ್ಸ್ ಮಿಂಚಿದ್ದಾರೆ.

ನ್ಯೂಜೆರ್ಸಿಯ ಸ್ಥಳೀಯ ಫ್ಯಾನ್ ಕ್ಲಬ್‌ಗಳು ಮೊದಲ ಶೋಗಳಿಗೆ ಭಾರಿ ಜನ ಸೇರಿರುವ ಬಗ್ಗೆ ಮಾಹಿತಿ ನೀಡಿವೆ. ರಜನಿ ಅವರ ಬೃಹತ್ ಕಟೌಟ್‌ಗಳು ಮತ್ತು ಬಲೂನ್‌ಗಳು ಹಬ್ಬದ ಕಳೆ ಹೆಚ್ಚಿಸಿವೆ.

ಸಿನಿಮಾ ರಿಲೀಸ್ ದಿನ ಜಪಾನ್ ಕೂಡ ಭಾರಿ ಸದ್ದು ಮಾಡಿದೆ. ಇದೇ ಮೊದಲ ಬಾರಿಗೆ ರಜನಿಕಾಂತ್ ಸಿನಿಮಾವೊಂದು ಭಾರತ ಮತ್ತು ಜಪಾನ್‌ನಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದೆ. ಜಪಾನ್‌ನ ಅಭಿಮಾನಿಯೊಬ್ಬರು ಕಸ್ಟಮೈಸ್ಡ್ ವಸ್ತುಗಳ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಇತರ ಫ್ಯಾನ್ಸ್‌ಗೆ ಆಹ್ವಾನ ನೀಡಿದ್ದಾರೆ.

33
ಭಾರತದ ಥಿಯೇಟರ್‌ಗಳಲ್ಲಿ ಪಟಾಕಿ, ಆರತಿ, ಡೋಲ್ ಸದ್ದು

ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರು ಮತ್ತು ಚೆನ್ನೈನಲ್ಲಿ ಸಿನಿಮಾ ರಿಲೀಸ್ ಹಬ್ಬದ ವಾತಾವರಣ ಸೃಷ್ಟಿಸಿದೆ. ಶೋ ಶುರುವಾಗುವ ಗಂಟೆಗಳ ಮುನ್ನವೇ ಥಿಯೇಟರ್‌ಗಳ ಮುಂದೆ ಜಮಾಯಿಸಿದ ಫ್ಯಾನ್ಸ್, ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗುತ್ತಾ ರಜನಿಕಾಂತ್ ಅವರ ಬೃಹತ್ ಕಟೌಟ್‌ಗಳಿಗೆ ಹೂವಿನ ಹಾರ ಹಾಕಿ ಸಂಭ್ರಮಿಸಿದ್ದಾರೆ.

ಕೆಲವು ಅಭಿಮಾನಿಗಳು ಸಾಂಪ್ರದಾಯಿಕ ಪೂಜೆಗಳನ್ನೂ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಅಭಿಮಾನಿಯೊಬ್ಬ ಕಾಂಪೌಂಡ್ ಗೋಡೆ ಏರಿ ನಟನ ಪೋಸ್ಟರ್‌ಗೆ ಕರ್ಪೂರ ಹಚ್ಚಿ ಆರತಿ ಬೆಳಗಿರುವುದು ಎಲ್ಲರ ಗಮನ ಸೆಳೆದಿದೆ.

ಚೆನ್ನೈನಲ್ಲೂ ಇದೇ ರೀತಿಯ ಭರ್ಜರಿ ಸಂಭ್ರಮ ಕಂಡುಬಂದಿದೆ. ರಜನಿಕಾಂತ್ ಪುತ್ರಿ ಸೌಂದರ್ಯ ಅವರು ಕಾಶಿ ಥಿಯೇಟರ್‌ಗೆ ಭೇಟಿ ನೀಡಿ, ಫ್ಯಾನ್ಸ್ ಜೊತೆ ಸೇರಿ ಡೋಲ್ ಸದ್ದಿಗೆ ಹೆಜ್ಜೆ ಹಾಕಿದ್ದಾರೆ.

ಈ ಸಂಭ್ರಮ ಕೇವಲ ಥಿಯೇಟರ್‌ಗಳ ಹೊರಗೆ ಮಾತ್ರ ಸೀಮಿತವಾಗಿರಲಿಲ್ಲ. ಆಂಧ್ರಪ್ರದೇಶದ ನಗರಿಯ ಥಿಯೇಟರ್‌ವೊಂದರಲ್ಲಿ ಸಿನಿಮಾದ ಅನಿಮೇಟೆಡ್ ಟೈಟಲ್ ಕಾರ್ಡ್ ಸ್ಕ್ರೀನ್ ಮೇಲೆ ಬರುತ್ತಿದ್ದಂತೆ ಪ್ರೇಕ್ಷಕರು ಹಾಕಿದ ಕೇಕೆ, ಶಿಳ್ಳೆಗಳ ಸದ್ದಿಗೆ ಥಿಯೇಟರ್‌ನ ಸೌಂಡ್ ಸಿಸ್ಟಮ್ ಕೂಡ ಮಂಕಾಗಿತ್ತು.

ರಜನಿಕಾಂತ್ ಅವರ ಸಿನಿಮಾ ರಿಲೀಸ್ ಅಂದರೆ ಅದು ಎಲ್ಲಾ ತಲೆಮಾರಿನ ಫ್ಯಾನ್ಸ್‌ ಅನ್ನು ಒಟ್ಟುಗೂಡಿಸುವ, ಒಂದು ಸಾಮಾನ್ಯ ದಿನವನ್ನೂ ದೊಡ್ಡ ಹಬ್ಬವನ್ನಾಗಿ ಬದಲಾಯಿಸುವ ಶಕ್ತಿ ಹೊಂದಿದೆ ಎಂಬುದನ್ನು ಈ ಸಂಭ್ರಮಾಚರಣೆಗಳು ಸಾಬೀತುಪಡಿಸಿವೆ.

ಜೈಲರ್ 2 ನಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ರಜನಿ ಕಂಬ್ಯಾಕ್

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್ 2', 2023ರಲ್ಲಿ ಬಂದ 'ಜೈಲರ್' ಸಿನಿಮಾದ ಮುಂದುವರಿದ ಭಾಗವಾಗಿದೆ. ನಿವೃತ್ತ ಜೈಲರ್ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್ ಮತ್ತೆ ಅಬ್ಬರಿಸಿದ್ದಾರೆ. ನೆಮ್ಮದಿಯ ಕೌಟುಂಬಿಕ ಜೀವನ ನಡೆಸಲು ಮುಂದಾಗುವ ಅವರ ಬದುಕಿನಲ್ಲಿ ಅಪಾಯಕಾರಿ ಕ್ರಿಮಿನಲ್ ನೆಟ್‌ವರ್ಕ್ ಎಂಟ್ರಿಯಾಗುತ್ತದೆ.

ಗಡಿಯಾಚೆಗಿನ ಸಿಂಡಿಕೇಟ್ ತನ್ನ ಕುಟುಂಬಕ್ಕೆ ಬೆದರಿಕೆ ಹಾಕಿದಾಗ, ಪಾಂಡಿಯನ್ ಮತ್ತೆ ಆಕ್ಷನ್‌ಗೆ ಇಳಿಯುವುದು ಅನಿವಾರ್ಯವಾಗುತ್ತದೆ. ಈ ಬಾರಿ ಅವರು ಕ್ರಿಮಿನಲ್ ಸಂಘಟನೆಯನ್ನು ಬೇರುಸಹಿತ ಕಿತ್ತುಹಾಕಲು ಡ್ರೈವರ್ ಆಗಿ ಅಂಡರ್‌ಕವರ್ ಆಪರೇಷನ್ ಮಾಡುತ್ತಾರೆ.

ಈ ಸೀಕ್ವೆಲ್‌ನಲ್ಲಿ ಪಾಂಡಿಯನ್ ಬೆಂಬಲಿಗರಾಗಿ ಮೋಹನ್‌ಲಾಲ್ ಮತ್ತು ಶಿವರಾಜ್‌ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಎಸ್‌ಜೆ ಸೂರ್ಯ ಮತ್ತು ವಿದ್ಯಾ ಬಾಲನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕಥೆಗೆ ಹೊಸ ಟ್ವಿಸ್ಟ್ ನೀಡಿದ್ದಾರೆ.

ನೆಲ್ಸನ್ ಅವರ ಡಾರ್ಕ್ ಹ್ಯೂಮರ್, ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ಮತ್ತು ರಜನಿಕಾಂತ್ ಅವರ ಆಕ್ಷನ್ ದೃಶ್ಯಗಳು ಸಿನಿಮಾದ ತೂಕ ಹೆಚ್ಚಿಸಿವೆ. ವಿಶ್ವಾದ್ಯಂತ ನಡೆಯುತ್ತಿರುವ ಈ ಭರ್ಜರಿ ಸಂಭ್ರಮಾಚರಣೆ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಸ್ಟಾರ್‌ಗಿರುವ ತಾಕತ್ತನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories