Kayadu Lohar: 'ಕೋಪದಲ್ಲಿ ಕಲ್ಲು ಎಸೆದಿದ್ದೆ': ಶಾಲಾ ದಿನಗಳ ಕಿರುಕುಳ ನೆನೆದು ಭಾವುಕರಾದ ಮುಗಿಲ್‌ ಪೇಟೆ ಬ್ಯೂಟಿ!

Published : Jun 30, 2026, 08:49 PM IST

Mugilpete Actress: ಕಯಾದು ಲೋಹರ್ ತಮ್ಮ ಶಾಲಾ ದಿನಗಳಲ್ಲಿ ಎದುರಿಸಿದ್ದ ಕಹಿ ಅನುಭವವೊಂದನ್ನು ಬಹಿರಂಗಪಡಿಸಿದ್ದು, ಅವರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

PREV
15
ವ್ಯಾಪಕ ಚರ್ಚೆ

ಕನ್ನಡದಿಂದ ವೃತ್ತಿ ಜೀವನ ಶುರು ಮಾಡಿದ ಚೆಲುವೆ ಕಯಾದು ಲೋಹರ್. ಮುಗಿಲ್‌ ಪೇಟೆ ಚಿತ್ರದಲ್ಲಿ ಮನೋರಂಜನ್ ರವಿಚಂದನ್‌ಗೆ ನಾಯಕಿಯಾಗಿದ್ದವರು ಇವರು. ಆ ನಂತರ ಮಲಯಾಳಂ, ತೆಲುಗು ಮತ್ತು ಮರಾಠಿ ಚಿತ್ರರಂಗದಲ್ಲಿ ಅಭಿನಯಿಸಿದ ಕಯಾದು ಲೋಹರ್ ಇದೀಗ ತಮ್ಮ ಶಾಲಾ ದಿನಗಳಲ್ಲಿ ಎದುರಿಸಿದ್ದ ಕಹಿ ಅನುಭವವೊಂದನ್ನು ಬಹಿರಂಗಪಡಿಸಿದ್ದು, ಅವರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಶಾಲೆಗೆ ಹೋಗುವ ವೇಳೆ ಕೆಲವು ಯುವಕರು ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಸಹನೆಯ ಮಿತಿ ಮೀರಿದಾಗ ಕೋಪದಲ್ಲಿ ಕಲ್ಲು ಎಸೆದಿದ್ದೆ ಎಂದು ಅವರು ತಿಳಿಸಿದ್ದಾರೆ.

25
ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ

ಇತ್ತೀಚೆಗೆ ಗಲಾಟಾ ತಮಿಳುಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಯಾದು ಲೋಹರ್, ತಾವು 10ನೇ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯನ್ನು ನೆನಪಿಸಿಕೊಂಡರು. "ನಮ್ಮ ಮನೆಯ ಸಮೀಪವೇ 10ನೇ ತರಗತಿಯ ಟ್ಯೂಷನ್‌ಗೆ ಹೋಗುತ್ತಿದ್ದೆ. ಹೋಗುವ ದಾರಿಯಲ್ಲಿ ಕೆಲ ಹುಡುಗರು ಪ್ರತಿದಿನವೂ ನನ್ನನ್ನು ಚುಡಾಯಿಸುತ್ತಿದ್ದರು. ಮೊದಲ ದಿನ ಅದನ್ನು ನಿರ್ಲಕ್ಷ್ಯ ಮಾಡಿದೆ. ಎರಡನೇ ದಿನವೂ ಸುಮ್ಮನಿದ್ದೆ. ಆದರೆ ಮೂರನೇ ದಿನ ನನಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ," ಎಂದು ಹೇಳಿದರು.

35
ತುಂಬಾ ಕೋಪಗೊಂಡಿದ್ದೆ

ಆ ದಿನ ತೀವ್ರ ಕೋಪಗೊಂಡಿದ್ದ ತಾವು ರಸ್ತೆಯಲ್ಲಿ ಬಿದ್ದಿದ್ದ ಕಲ್ಲನ್ನು ತೆಗೆದು ಆ ಹುಡುಗರ ಕಡೆಗೆ ಎಸೆದಿದ್ದಾಗಿ ಅವರು ವಿವರಿಸಿದರು. "ನಾನು ತುಂಬಾ ಕೋಪಗೊಂಡಿದ್ದೆ. ಕಲ್ಲನ್ನು ಎಸೆದಾಗ ಅದು ಒಬ್ಬ ಹುಡುಗನ ತಲೆಗೆ ಬಿತ್ತು. ಅವನ ತಲೆಯಿಂದ ರಕ್ತ ಹರಿಯಲು ಆರಂಭವಾಯಿತು. ನಾನು ಅಲ್ಲಿಂದ ಹೊರಟುಬಿಟ್ಟೆ. ನಂತರ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ಆ ಕ್ಷಣದಲ್ಲಿ ನಾನು ತುಂಬಾ ಆಕ್ರೋಶದಲ್ಲಿದ್ದೆ," ಎಂದು ಕಯಾದು ಹೇಳಿದರು.

45
ನಾನು ಶಾಂತ ಸ್ವಭಾವದವಳು

ಆ ಘಟನೆ ಕುರಿತು ಈಗ ನೆನಪಿಸಿಕೊಂಡಾಗ, ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಸರಿಯಲ್ಲ ಎಂಬುದನ್ನು ಒಪ್ಪಿಕೊಂಡ ಅವರು, ಅಂದಿನ ಪರಿಸ್ಥಿತಿ ತಮ್ಮನ್ನು ಆ ರೀತಿ ನಡೆದುಕೊಳ್ಳುವಂತೆ ಮಾಡಿತ್ತು ಎಂದರು. "ಯಾರ ಮೇಲಾದರೂ ಕಲ್ಲು ಎಸೆದು ಗಾಯಗೊಳಿಸುವುದು ಸರಿಯಲ್ಲ. ಆದರೆ ಆ ಸಮಯದಲ್ಲಿ ನನಗೆ ಆಗಿದ್ದ ನೋವು, ಅಸಹಾಯಕತೆ ಮತ್ತು ಕೋಪವೇ ಆ ರೀತಿ ಪ್ರತಿಕ್ರಿಯಿಸಲು ಕಾರಣವಾಯಿತು. ನಾನು ಸಾಮಾನ್ಯವಾಗಿ ಶಾಂತ ಸ್ವಭಾವದವಳು. ಆದರೆ ಯಾರಾದರೂ ತಪ್ಪು ಮಾಡಿದಾಗ ಸುಮ್ಮನಿರಬಾರದು. ಅದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ನಾನು ನಂಬುತ್ತೇನೆ," ಎಂದು ಹೇಳಿದರು. ಕಯಾದು ಲೋಹರ್ ಅವರ ಈ ಹೇಳಿಕೆ, ಶಾಲೆ ಅಥವಾ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಅನೇಕ ಮಹಿಳೆಯರು ಎದುರಿಸುವ ಕಿರುಕುಳ ಮತ್ತು ಅದರ ಪರಿಣಾಮಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.

55
ಸಿನಿ ಪಯಣ

ಕಯಾದು ಲೋಹರ್ ಸದ್ಯ ಹಲವು ಬಹುನಿರೀಕ್ಷಿತ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಇಧಯಂ ಮುರಳಿ' ಸಿನಿಮಾ ಜುಲೈ 10ರಂದು ಬಿಡುಗಡೆಯಾಗಲಿದ್ದು, 'ಇಮ್ಮಾರ್ಟಲ್' ಜುಲೈ 23ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಜಿ.ವಿ. ಪ್ರಕಾಶ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಮರಾಠಿ ಚಿತ್ರರಂಗಗಳಲ್ಲಿ ಅಭಿನಯಿಸಿರುವ ಕಯಾದು ಲೋಹರ್, 'ಐ ಆ್ಯಮ್ ಗೇಮ್', 'ಖಲೀಫಾ' ಹಾಗೂ 'ದಿ ಪ್ಯಾರಡೈಸ್' ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories