ಸಾಮಾನ್ಯವಾಗಿ ಪತಿಯಾದವನು ಪತ್ನಿಯ ಮನೆಗೆ ಹೋಗಿ ಹೆಚ್ಚು ದಿನ ಇರೋದಿಲ್ಲ. ಇದ್ದರೆ ಎಲ್ಲಿ ಎಲ್ಲರೂ ತನ್ನನ್ನು ಮನೆ ಅಳಿಯ ಎನ್ನುತ್ತಾರೋ ಎಂಬ ಭಯದಲ್ಲಿ ಬದುಕುತ್ತಿರುತ್ತಾರೆ. ಆದರೆ, ರಾಮ್‌ಚರಣ್ ಈ ಸಾಮಾಜಿಕ ನಂಬಿಕೆಗೆ ಸವಾಲು ಹಾಕಿದ್ದಾರೆ.
ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ದಕ್ಷಿಣ ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದೆ. ಆರ್‌ಆರ್‌ಆರ್ ಚಿತ್ರದ ಬಳಿಕ ನಟ ವಿಶ್ವಾದ್ಯಂತ ಜನಪ್ರಿಯರಾಗಿದ್ದಾರೆ.
ಕಳೆದ ವರ್ಷ, ದಂಪತಿ ತಮ್ಮ ಮೊದಲ ಮಗು ಕ್ಲಿನ್ ಕಾರಾಳನ್ನು ಸ್ವಾಗತಿಸಿದರು ಮತ್ತು ಈಗ ಪೋಷಕರಾಗಿ ತಮ್ಮ ಹೊಸ ಕರ್ತವ್ಯಗಳನ್ನು ಆನಂದಿಸುತ್ತಿದ್ದಾರೆ.
ಏತನ್ಮಧ್ಯೆ, ಪ್ರಮುಖ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಉಪಾಸನಾ ಹೆರಿಗೆ ಮತ್ತು ಪ್ರಸವಾ ನಂತರದ ಅನುಭವಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡುತ್ತಾ, ಈ ಪ್ರಯಾಣದುದ್ದಕ್ಕೂ ತನ್ನ ಗಂಡನ ನಿರಂತರ ಬೆಂಬಲವನ್ನು ಒತ್ತಿ ಹೇಳಿದರು.
ಪ್ರಸವಾನಂತರದ ಖಿನ್ನತೆಯಿಂದ ಹೊರಬರಲು ರಾಮ್ ಚರಣ್ ತನಗೆ ಹೇಗೆ ಸಹಾಯ ಮಾಡಿದರು, ಅವರ ಚಿಕಿತ್ಸಕನ ಪಾತ್ರ ಮತ್ತು ಮಗುವಿನ ಹುಟ್ಟಿನ ನಂತರ ತನ್ನ ಹೆತ್ತವರ ಮನೆಯಲ್ಲಿ ತನ್ನೊಂದಿಗೆ ಉಳಿಯುವ ನಿರ್ಧಾರವನ್ನು ಪತಿ ಮಾಡಿದ್ದರ ಬಗ್ಗೆ ಉಪಾಸನಾ ಹೇಳಿದರು.
'ನನ್ನ ಪತಿ ನನ್ನ ಚಿಕಿತ್ಸಕ ಮತ್ತು ನನ್ನೊಂದಿಗೆ ನನ್ನ ಹೆತ್ತವರ ಸ್ಥಳಕ್ಕೆ (ಅವರು ಮಗುವನ್ನು ಪಡೆದ ನಂತರ) ತೆರಳಿದರು. ಪತಿಯ ಸಹಾಯದಿಂದ ಮಗು ಹುಟ್ಟಿದ ಬಳಿಕ ನಾನು ಖಿನ್ನತೆ ಗೆದ್ದು ಸಂತೋಷ ಅನುಭವಿಸಿದೆ' ಎಂದು ಉಪಾಸನಾ ಹೇಳಿದ್ದಾರೆ.
ರಾಮ್ ಚರಣ್ ಒಬ್ಬ ಸಮರ್ಪಿತ ತಂದೆ. ಅವರ ಪೋಷಕತ್ವದ ವಿಧಾನಕ್ಕಾಗಿ ಧನ್ಯವಾದಗಳು ಎಂದ ಉಪಾಸನಾ, ನಟನ ಉಪಸ್ಥಿತಿ ತನಗೆ ಅತ್ಯಂತ ಅಗತ್ಯವಾಗಿತ್ತು ಎಂದಿದ್ದಾರೆ.
ರಾಮ್‌ಚರಣ್ ಕೇವಲ ಸಿನಿಮಾಗಳಲ್ಲಿ ಹೀರೋವಲ್ಲ, ಪತ್ನಿಯ ಪಾಲಿಗೂ ಹೀರೋ ಆಗಿದ್ದಾರೆ. ಎಲ್ಲ ಗಂಡಂದಿರೂ ಪತ್ನಿಯರ ಸಂತೋಷ, ಅಗತ್ಯ ಅರ್ಥ ಮಾಡಿಕೊಂಡರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ?
ನಟರ ಇಂಥ ನಿರ್ಧಾರಗಳು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ, ಪತ್ನಿ ಹೇಗೆ ಗಂಡನ ತಂದೆತಾಯಿಯನ್ನು ಪೋಷಕರಂತೆ ನೋಡುವಳೋ, ಪತಿಯೂ ಆಕೆಯ ಪೋಷಕರಿಗೆ ಮಗನಾಗಬೇಕು. ಅಂದ ಮೇಲೆ, ಯಾರು ಯಾರ ಮನೆಯಲ್ಲಿದ್ದರೇನಂತೆ?