ಅವರ ಪರಂಪರೆಯನ್ನು ಇಂದು ಎಷ್ಟೋ ಕಲಾವಿದರು, ತಂತ್ರಜ್ಞರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದನ್ನೆಲ್ಲಾ ಬದಿಗಿಟ್ಟು ನೋಡಿದರೆ ನಟರಾಗಿ ಎನ್‌ಟಿಆರ್ ಅವರನ್ನು ಎಷ್ಟೋ ಜನ ಅರಾಧಿಸುತ್ತಾರೆ. ಅವರು ನಿರ್ವಹಿಸಿದ ಕೃಷ್ಣ, ರಾಮ ಪಾತ್ರಗಳನ್ನೇ ದೇವರೆಂದು ಭಾವಿಸುತ್ತಾರೆ. ರಾಮ, ಕೃಷ್ಣ ಎಂದರೆ ಹೀಗೇ ಇರುತ್ತಾರೆಂದು ಆರಾಧಿಸುತ್ತಾರೆ. ರಾಮನ ಸ್ಥಾನದಲ್ಲಿ ರಾಮರಾವ್ ಫೋಟೋ ಇಟ್ಟು ಪೂಜಿಸುವ ಅಭಿಮಾನಿಗಳು ಇಂದಿಗೂ ಇದ್ದಾರೆ. ಮದ್ರಾಸ್‌ನಲ್ಲಿದ್ದಾಗ ಅವರನ್ನು ನೋಡಲು ಎಷ್ಟೋ ಅಭಿಮಾನಿಗಳು ಪ್ರತಿದಿನ ಅವರ ಮನೆಗೆ ಹೋಗುತ್ತಿದ್ದರಂತೆ. ತಿರುಮಲ ಶ್ರೀನಿವಾಸನ ದರ್ಶನದಂತೆ ರಾಮರಾವ್ ಅವರನ್ನು ದರ್ಶನ ಮಾಡಿಕೊಂಡು ಹೋಗುತ್ತಿದ್ದರಂತೆ. ಆಗ ಇದನ್ನೆಲ್ಲಾ ಕಥೆ ಕಥೆಗಳಾಗಿ ಹೇಳಿಕೊಳ್ಳುತ್ತಿದ್ದರು. ಇಂದಿಗೂ ಹೇಳುತ್ತಾರೆ. ಎನ್‌ಟಿ ರಾಮರಾವ್ ಎಂದರೆ ಅವರಿಗೆ ಅಷ್ಟೊಂದು ಅಭಿಮಾನ. ಹೀಗೆ ಆರಾಧಿಸುವವರಲ್ಲಿ ಸಿನಿಮಾ ಜನರು ಇದ್ದಾರೆ, ಅವರ ನಂತರದ ತಲೆಮಾರಿನ ನಾಯಕರು, ಸೂಪರ್ ಸ್ಟಾರ್‌ಗಳು ಇದ್ದಾರೆ.