
ಮುಂಬೈ: 90ರ ದಶಕದಲ್ಲಿ ತಮ್ಮ ಮುಗ್ಧ ಸೌಂದರ್ಯ ಮತ್ತು ಅದ್ಭುತ ಅಭಿನಯದ ಮೂಲಕ ಬಾಲಿವುಡ್ ಆಳಿದ ನಟಿ ಯಾರು ಎಂದು ಕೇಳಿದರೆ, ಥಟ್ಟನೆ ನೆನಪಾಗುವ ಹೆಸರು 'ಸೊನಾಲಿ ಬೇಂದ್ರೆ'. 'ಸರ್ಫರೋಶ್', 'ಹಮ್ ಸಾಥ್ ಸಾಥ್ ಹೈ', 'ಮೇಜರ್ ಸಾಬ್' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ, ಕೋಟ್ಯಂತರ ಪಡ್ಡೆಹುಡುಗರ ನಿದ್ದೆ ಕದ್ದಿದ್ದ ಸುಂದರಿ ಸೋನಾಲಿ ಬೇಂದ್ರೆ (Sonali Bendre). 2002ರಲ್ಲಿ ನಿರ್ಮಾಪಕ ಗೋಲ್ಡಿ ಬೆಹ್ಲ್ ಅವರನ್ನು ಮದುವೆಯಾಗಿ, 2005ರಲ್ಲಿ ಮಗನ ಜನನದ ನಂತರ ಸೊನಾಲಿ ಬೆಳ್ಳಿತೆರೆಯಿಂದ ಕೊಂಚ ದೂರ ಸರಿದಿದ್ದರು.
ಆದರೆ ಈಗ, ತಮ್ಮ ವೈವಾಹಿಕ ಜೀವನ, ಅತ್ತೆ ಮನೆಯ ರೂಲ್ಸ್ ಮತ್ತು ಆಹಾರ ಪದ್ಧತಿಯ ಬಗ್ಗೆ ಅವರು ನೀಡಿರುವ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇತ್ತೀಚೆಗೆ ಜನಪ್ರಿಯ ಕಾಮಿಡಿಯನ್ ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ನಡೆಸಿಕೊಡುವ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಭಾಗವಹಿಸಿದ್ದ ಸೊನಾಲಿ ಬೇಂದ್ರೆ, ತಮ್ಮ ಅತ್ತೆ ಮನೆಯ ಸೀಕ್ರೆಟ್ಸ್ ಮತ್ತು ಅಡುಗೆ ಮನೆಯ ವಿಷಯಗಳನ್ನು ಮನಬಿಚ್ಚಿ ಮಾತನಾಡಿದ್ದಾರೆ.
"ನನ್ನ ಅತ್ತೆ ಅಡುಗೆ ಮಾಡಲು ಬಿಡಲೇ ಇಲ್ಲ!"
ಸಾಮಾನ್ಯವಾಗಿ ಭಾರತೀಯ ಸೊಸೆಯಂದಿರಿಗೆ ಮದುವೆಯಾದ ತಕ್ಷಣ ಅಡುಗೆ ಮನೆಯ ಜವಾಬ್ದಾರಿ ಹೆಗಲೇರುತ್ತದೆ. ಆದರೆ ಸೊನಾಲಿ ವಿಷಯದಲ್ಲಿ ಆಗಿದ್ದೇ ಬೇರೆ. ತಮ್ಮ ಅತ್ತೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಸೊನಾಲಿ, "ನನ್ನ ಅತ್ತೆ ನನಗೆ ಹೇಳಿದ ಅತ್ಯುತ್ತಮ ಮಾತು ಎಂದರೆ- 'ನಿನ್ನ ತಂದೆ-ತಾಯಿ ನಿನಗೆ ಇಷ್ಟು ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿದ್ದಾರೆ, ನೀನು ಯಾಕೆ ಅಡುಗೆ ಮನೆಯಲ್ಲಿ ಕಷ್ಟಪಡಬೇಕು? ನಿನಗೆ ನಿಜವಾಗಲೂ ಆಸಕ್ತಿ ಇದ್ದರೆ ಮಾಡು, ಇಲ್ಲದಿದ್ದರೆ ಕೇವಲ ಮೇಲ್ವಿಚಾರಣೆ (Supervise) ಮಾಡು ಸಾಕು' ಎಂದು ಹೇಳಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಅವರ ಮಾವ (ಗಂಡನ ತಂದೆ) ಕೂಡ ಇದೇ ಅಭಿಪ್ರಾಯ ಹೊಂದಿದ್ದರಂತೆ. "ನಾನು ಆಫೀಸ್‌ನಿಂದ ಮನೆಗೆ ಬಂದಾಗ ನನ್ನ ಹೆಂಡತಿ ಅಡುಗೆ ಮನೆಯಲ್ಲಿ ಕೆಲಸ ಮಾಡುವುದನ್ನು ನೋಡಲು ಇಷ್ಟಪಡುವುದಿಲ್ಲ" ಎಂದು ಅವರು ಹೇಳುತ್ತಿದ್ದರಂತೆ. ಸೊನಾಲಿ ಅವರಿಗೆ ಅತ್ತೆ-ಮಾವನಿಂದ ಸಿಕ್ಕ ಈ ಬೆಂಬಲ ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು.
ಹರ್ಷ್‌ಗೆ ಕ್ಲಾಸ್ ತೆಗೆದುಕೊಂಡ ಸೊನಾಲಿ!
ಇದೇ ವೇಳೆ ಶೋ ನಡೆಸಿಕೊಡುವ ಭಾರತಿ ಸಿಂಗ್, ತನಗೆ ಅಡುಗೆ ವಿಷಯದಲ್ಲಿ ಸ್ವಲ್ಪ ಮುಜುಗರವಾಗುತ್ತದೆ ಎಂದು ಹೇಳಿಕೊಂಡರು. ಭಾರತಿ ಎಷ್ಟೇ ಸುಸ್ತಾಗಿ ಮನೆಗೆ ಬಂದರೂ, ಗಂಡ ಹರ್ಷ್ ಅವರಿಂದ ಅಡುಗೆ ಮಾಡಿಸಲು ಇಷ್ಟಪಡುತ್ತಾರಂತೆ. ಇದಕ್ಕೆ ಸಮಜಾಯಿಷಿ ನೀಡಿದ ಹರ್ಷ್, "ಅದು ಕೇವಲ ರುಚಿಯ ವಿಷಯವಷ್ಟೇ. ಅವಳು ಕೇವಲ 10 ನಿಮಿಷದಲ್ಲಿ ಒಗ್ಗರಣೆ ಹಾಕಿದರೂ ಅಡುಗೆ ಅದ್ಭುತವಾಗಿರುತ್ತದೆ" ಎಂದರು.
ಇದನ್ನು ಕೇಳಿಸಿಕೊಂಡ ಸೊನಾಲಿ ಸುಮ್ಮನಿರಲಿಲ್ಲ. ನೇರವಾಗಿ ಹರ್ಷ್‌ಗೆ, "ನಾನು ನಿನ್ನನ್ನು ಜಡ್ಜ್ ಮಾಡುತ್ತಿದ್ದೇನೆ. ಅವಳು ಎಷ್ಟೇ ಚೆನ್ನಾಗಿ ಅಡುಗೆ ಮಾಡಿದರೂ, ಆಕೆ ಸುಸ್ತಾಗಿ ಮನೆಗೆ ಬಂದಾಗ ಯಾಕೆ ಅಡುಗೆ ಮಾಡಬೇಕು? ಕೇವಲ ರುಚಿಗೋಸ್ಕರ ಹೆಂಡತಿಯನ್ನು ಕಷ್ಟಪಡಿಸುವುದು ಎಷ್ಟು ಸರಿ?" ಎಂದು ಮರುಪ್ರಶ್ನೆ ಹಾಕುವ ಮೂಲಕ ಭಾರತಿ ಪರ ಬ್ಯಾಟ್ ಬೀಸಿದರು.
"ಇವತ್ತು ಯಾರ ಮದುವೆ ಇದೆ?" - ಪಂಜಾಬಿ ಊಟ ನೋಡಿ ಬೆಚ್ಚಿಬಿದ್ದಿದ್ದ ನಟಿ!
ಇನ್ನು ಸಂಸ್ಕೃತಿ ಮತ್ತು ಊಟದ ವಿಷಯಕ್ಕೆ ಬಂದರೆ, ಸೊನಾಲಿ ಪಕ್ಕಾ ಮಹಾರಾಷ್ಟ್ರದವರು, ಆದರೆ ಮದುವೆಯಾಗಿದ್ದು ಪಂಜಾಬಿ ಕುಟುಂಬಕ್ಕೆ. ಈ ಬಗ್ಗೆ ನಗುತ್ತಲೇ ಮಾತನಾಡಿದ ಅವರು, "ನಾನು ಮಹಾರಾಷ್ಟ್ರದವಳು, ನಮ್ಮ ಮನೆಯಲ್ಲಿ ದಿನನಿತ್ಯದ ಊಟ ಎಂದರೆ ಸಿಂಪಲ್ ಆಗಿ ಬೇಳೆ ಮತ್ತು ಅನ್ನ (Dal-Rice) ಇರುತ್ತಿತ್ತು.
ಆದರೆ ಪಂಜಾಬಿ ಕುಟುಂಬದಲ್ಲಿ ಹಾಗಿಲ್ಲ. ಅಲ್ಲಿ ಪ್ರತಿದಿನವೂ ಹಬ್ಬದೂಟವೇ. ಮದುವೆಯಾದ ಹೊಸತರಲ್ಲಿ ಡೈನಿಂಗ್ ಟೇಬಲ್ ಮೇಲಿನ ಅಡುಗೆ ನೋಡಿ, 'ಇವತ್ತು ಯಾರ ಮದುವೆ ಇದೆ?' ಎಂದು ನಾನು ಆಶ್ಚರ್ಯಪಡುತ್ತಿದ್ದೆ. ಅಷ್ಟೊಂದು ವೆರೈಟಿ ಮತ್ತು ಅಷ್ಟೊಂದು ಪ್ರಮಾಣದ ಊಟ ಅಲ್ಲಿರುತ್ತಿತ್ತು" ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಕ್ಯಾನ್ಸರ್ ನಂತರ ಬದಲಾದ ಜೀವನಶೈಲಿ:
ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿರುವ ಸೊನಾಲಿ, ಈಗ ತಮ್ಮ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಸದ್ಯದ ತಮ್ಮ ದಿನಚರಿ ಬಗ್ಗೆ ಹೇಳಿದ ಅವರು, "ನಾನು ರಾತ್ರಿ ಊಟವನ್ನು ಸಂಜೆ 6:30 ರಿಂದ 7 ಗಂಟೆಯೊಳಗೆ ಮುಗಿಸುತ್ತೇನೆ. ಅದರ ನಂತರ ಯಾರಾದರೂ ತಡವಾಗಿ ಊಟ ಮಾಡಿದರೆ, ನಾನು ಅವರ ಜೊತೆ ಸುಮ್ಮನೆ ಕೂರಬೇಕಾಗುತ್ತದೆ, ಅದು ಸ್ವಲ್ಪ ಕಷ್ಟವೇ" ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಸಿನಿಮಾಗಳಿಂದ ದೂರವಿದ್ದರೂ ರಿಯಾಲಿಟಿ ಶೋಗಳು ಮತ್ತು ಸಂದರ್ಶನಗಳ ಮೂಲಕ ಸೊನಾಲಿ ಬೇಂದ್ರೆ ಇಂದಿಗೂ ಅಭಿಮಾನಿಗಳ ಮನಸ್ಸಿಗೆ ಹತ್ತಿರವಾಗಿದ್ದಾರೆ. ಅದರಲ್ಲೂ ಸೊಸೆಯಂದಿರ ಬಗ್ಗೆ ಅವರ ಅತ್ತೆ-ಮಾವ ಹೊಂದಿದ್ದ ಪ್ರಗತಿಪರ ಆಲೋಚನೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.