
ಹಿರಿಯ ನಟಿ ನೀನಾ ಗುಪ್ತಾ ಅವರು ತಮ್ಮ ಜೀವನದಲ್ಲಿ ಹೋರಾಟ, ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆಯ ಮೂಲಕ ಸಾಕಷ್ಟು ಮಂದಿ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ತಮ್ಮ ಜೀವನದ ಕಥೆಯನ್ನು 'ಸಚ್ ಕಹುನ್ ತೋ' ಎಂಬ ಆತ್ಮಚರಿತ್ರೆಯಲ್ಲಿ ಹಂಚಿಕೊಂಡ ಅವರು, ಅವಿವಾಹಿತೆಯಾಗಿ ಗರ್ಭಿಣಿಯಾದ ಸಂದರ್ಭದ ಹಲವು ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಮಗುವಿಗೆ ತಂದೆ ಬೇಕು. ನಿನಗೆ ಸಂಗಾತಿ ಬೇಕು ಎಂದು "ಗೇ" ಆಗಿದ್ದ ಉದ್ಯಮಿಯನ್ನು ಮದುವೆಯಾಗಲು ಒತ್ತಾಯಿಸಲಾಗಿತ್ತು ಎಂದಿದ್ದಾರೆ.
ಅದ್ವಿತೀಯ ಆಯ್ಕೆ ಮತ್ತು ಧೈರ್ಯ:
1980ರ ದಶಕದಲ್ಲಿ ಮಗಳು ಮಸಾಬಾ ಗುಪ್ತಾ ಗರ್ಭದಲ್ಲಿದ್ದಾಗ ನೀನಾ ಗುಪ್ತಾ ಮದುವೆಯಾಗಿರಲಿಲ್ಲ. ಈ ಸಮಯದಲ್ಲಿ ಆಕೆಗೆ ಹಲವಾರು ಅಸಾಧಾರಣ ಸಲಹೆಗಳೂ ಬಂದಿದ್ದುವು. ವಿಶೇಷವಾಗಿ ಅವರ ಸ್ನೇಹಿತ ಸುಜೋಯ್ ಮಿತ್ರಾ, ಅವರು ಭದ್ರತೆಯ ಕಾರಣಕ್ಕೆ ಒಬ್ಬ ಸಲಿಂಗಕಾಮಿ ಉದ್ಯಮಿಯನ್ನು ಮದುವೆಯಾಗುವಂತೆ ಸಲಹೆ ನೀಡಿದ್ದರು. ಆದರೆ, ನೀನಾ ಅವರು ತಮ್ಮ ಅಂತರಾತ್ಮಕ್ಕೆ ಪ್ರಶ್ನಿಸಿ ಆ "ಸೌಕರ್ಯದ ಮದುವೆ" ಯನ್ನು ನಿರಾಕರಿಸಿದರು. "ನಾನು ವಿವಾದದಿಂದ ತಪ್ಪಿಸಿಕೊಳ್ಳಲು ಮದುವೆಯಾಗಬೇಕೆಂದು ನನಗೆ ಅನ್ನಿಸಲಿಲ್ಲ" ಎಂದ ಅವರು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ವೆಸ್ಟ್ ಇಂಡೀಸ್‌ನ ಕ್ರಿಕೆಟ್ ದಂತಕಥೆ ವಿವಿಯನ್ ರಿಚರ್ಡ್ಸ್ ಅವರೊಂದಿಗೆ ಸಂಬಂಧದಲ್ಲಿದ್ದ ಅವರು ಮಸಾಬಾ ಗುಪ್ತಾ ಎಂಬ ಮಗಳನ್ನು ಹೊಂದಿದರು. ಆದರೆ, ವಿವಿಯನ್ ಈಗಾಗಲೇ ಮದುವೆಯಾಗಿದ್ದ ಕಾರಣ, ನೀನಾ ಮಸಾಬಾಳನ್ನು ಒಬ್ಬಂಟಿಯಾಗಿ ಪೋಷಿಸಿದರು. ಇದು ಅವರ ಆಯ್ಕೆ ಮತ್ತು ಧೈರ್ಯವನ್ನು ತೋರಿಸುತ್ತದೆ.
ಸಾಮಾಜಿಕ ತೀರ್ಪು ಮತ್ತು ಆತ್ಮಸ್ಥೈರ್ಯ:
ನಟಿಯಾಗಿದ್ದರಿಂದ, ನೀನಾ ಮತ್ತು ಮಸಾಬಾ ಅವರ ವೈಯಕ್ತಿಕ ಜೀವನ ಸಾರ್ವಜನಿಕ ಚರ್ಚೆಗೆ ಒಳಪಡುವುದು ಸಹಜ. "ನಾನು ಹೊಟ್ಟೆ ದೊಡ್ಡದಾಗುತ್ತಿದ್ದಂತೆ, ನಾನು ಸಡಿಲ ಬಟ್ಟೆ ಹಾಕಿಕೊಳ್ಳುತ್ತಿದ್ದೆ. ಆದರೆ ಮನಸ್ಸಿನಲ್ಲಿ, ನಾನು ತಯಾರಾಗಿದ್ದೆ — ಸೇತುವೆ ಬಂದಾಗ ದಾಟುತ್ತೇನೆ ಎಂದು" ಎಂದು ತಮ್ಮ ಭೀತಿಯ ಒಳನೋಟವನ್ನೂ ಅವರು ಹಂಚಿಕೊಂಡಿದ್ದಾರೆ. ಅವಿವಾಹಿತ ತಾಯಿಯಾಗಿ, ಅದರಲ್ಲೂ ಸೆಲೆಬ್ರಿಟಿಯಾಗಿ, ಅವರು ಹಲವಾರು ಟೀಕೆಗಳನ್ನು ಎದುರಿಸಿದರು. ಕೆಲಸಗಳಲ್ಲಿ ಅವಕಾಶಗಳು ಕಡಿಮೆ ಆಗಿ, ತಮ್ಮದೇ ಆದ ಮಗುವನ್ನು ಸಾಕಲು ಮತ್ತು ಜೀವನ ನಡೆಸಲು ಅವರು ಅನೇಕ ಹೋರಾಟಗಳನ್ನು ನಡೆಸಿದರು. ಕೆಲವು ಸಮಯಗಳಲ್ಲಿ, ಆಕೆಯ ಸ್ನೇಹಿತರು ಸಹ ಸಲಹೆ ನೀಡಿದ್ರು – “ಒಬ್ಬ ಸಲಿಂಗಕಾಮಿ ವ್ಯಕ್ತಿಯನ್ನು ಮದುವೆಯಾಗು, ಕನಿಷ್ಠ ಸಮಾಜಕ್ಕೆ ಒಪ್ಪುವಂತೆ ಕಾಣಿಸುತ್ತೆ”! ಆದರೆ ನೀನಾ ಅವರು ತಮಗೆ ನಂಬಿಕೆಯುಳ್ಳ ದಾರಿಯನ್ನೇ ಆರಿಸಿಕೊಂಡರು.
ನೀನಾ ಗುಪ್ತಾ ಗರ್ಭಿಣಿಯಾಗಿದ್ದಾಗ ಹಲವರು ಗರ್ಭಪಾತ ಮಾಡಿಸಿಕೊಳ್ಳಿ ಎಂದರಂತೆ ಇನ್ನು ಕೆಲವರು ಒಂಟಿ ತಾಯಿಯಾಗಿ ಪೋಷಣೆಯಲ್ಲಿ ಎದುರಾಗುವ ಸಂಕಷ್ಟಗಳ ಬಗ್ಗೆ ಎಚ್ಚರಿಸಿದರಂತೆ. ನಾನು ಎಲ್ಲರ ಮಾತುಗಳನ್ನು ಶಾಂತಿಯುತವಾಗಿ ಕೇಳಿದರೂ, ಆ ಸಂದರ್ಭದಲ್ಲಿ ನಾನು ಮಾತನಾಡಲಾರದ ಸ್ಥಿತಿಯಲ್ಲಿದ್ದೆ. ಆದರೆ ನಾನು ಒಬ್ಬಳೇ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ನನಗೆ ಸ್ಪಷ್ಟವಾಯಿತು. ಮಗುವಿನ ತಂದೆ ವಿವಿಯನ್ ರಿಚರ್ಡ್ಸ್ ಕೂಡ ಈ ನಿರ್ಧಾರದಲ್ಲಿ ಹಕ್ಕುದಾರರಾಗಿದ್ದಾರೆ ಎಂಬ ಭಾವನೆಯಿಂದ, ನಾನು ಅವರಿಗೆ ಕರೆ ಮಾಡಿ ಬಹಳ ಹೊತ್ತು ಮಾತನಾಡಿದೆ."ನಾನು ಗರ್ಭಿಣಿ. ಈ ಮಗುವನ್ನು ಪಡೆಯುತ್ತೇನೆ. ನಿಮಗೆ ಇದರಿಂದ ಏನಾದರೂ ತೊಂದರೆ ಆಗುತ್ತದೆಯಾ?" ಎಂದು ಕೇಳಿದೆ. ವಿವಿಯನ್ ತಕ್ಷಣ "ಇದು ಸಂತೋಷದ ವಿಷಯ" ಎಂದರು. ನಾನು ಮುಂದುವರಿಯಲು ಸಂಪೂರ್ಣ ಬೆಂಬಲವಿರುವುದಾಗಿ ಸ್ಪಷ್ಟಪಡಿಸಿದರು. ಅವರ ಈ ಪ್ರಾಮಾಣಿಕ ಉತ್ತರ ನನ್ನ ಮನಸ್ಸಿಗೆ ಧೈರ್ಯ ತುಂಬಿತು. "ನಾನು ಈ ಮಗುವನ್ನು ಎಷ್ಟು ಬಯಸುತ್ತಿದ್ದೆನೋ, ಆದರೆ ತಂದೆಯ ಬೆಂಬಲವಿಲ್ಲದೆ ನಾನು ಮುಂದುವರಿಯಲು ಇಚ್ಛಿಸುತ್ತಿರಲಿಲ್ಲ. ಅವರ ಬೆಂಬಲವೇ ನನಗೆ ಶಾಂತಿ ನೀಡಿತು." ಎಂದಿದ್ದಾರೆ.
ಸ್ನೇಹ ಮತ್ತು ಸಹಾಯ:
ಈ ಸಂದರ್ಭದಲ್ಲಿ, ನಟ ಸತೀಶ್ ಕೌಶಿಕ್ ಅವರು ನೀನಾ ಅವರ ಅತೀ ಸಮೀಪದ ಸ್ನೇಹಿತನಾಗಿದ್ದರು. ಅವರು ಗರ್ಭಿಣಿಯಾಗಿದ್ದಾಗ ನೀನಾ ಬಹಳ ಆತಂಕದಲ್ಲಿದ್ದದ್ದನ್ನು ನೋಡಿ ಸತೀಶ್ ಮನೆಗೆ ಬಂದು, "ನಿಮ್ಮ ಮಗು ಕಪ್ಪಾಗಿ ಹುಟ್ಟಿದರೆ, ಅದು ನನ್ನದು ಎಂದು ಹೇಳಿ" ಎಂದು ಸಂತೈಸಿದ ಘಟನೆಯನ್ನು ನೀನಾ ಅವರು ಭಾವುಕವಾಗಿ ನೆನಪಿಸಿಕೊಂಡಿದ್ದಾರೆ. ಅವರು ಸತೀಶ್ ಅವರ ಸಹಾಯ, ಸ್ನೇಹ ಮತ್ತು ಹಾಸ್ಯಪೂರ್ಣ ಆತ್ಮೀಯತೆಯನ್ನು ಸದಾ ಮೆಚ್ಚಿಕೊಂಡಿದ್ದಾರೆ. ನೀನಾ ಮಸಾಬಾಳನ್ನು ಒಂಟಿ ತಾಯಿಯಾಗಿ ಬೆಳೆಸಿದರು. ವರ್ಷಗಳ ನಂತರ, ಅವರು 59 ನೇ ವಯಸ್ಸಿನಲ್ಲಿ 2008ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು.
ಇತ್ತೀಚೆಗಿನ ದಿನಗಳಲ್ಲಿ ನೀನಾ ಗುಪ್ತಾ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಕೊನೆಯ ಬಾರಿಗೆ ಅವರು 'ಕೇಸರಿ 2' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಜೀವನದ ಅಂಶಗಳನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳುವ ನೀನಾ, ನಿಜವಾದ ಜೀವಂತಿಕೆಯಿಂದ ತುಂಬಿದ ವ್ಯಕ್ತಿತ್ವ. ಇತ್ತೀಚಿನ ವರ್ಷಗಳಲ್ಲಿ, "ಬಧಾಯಿ ಹೋ" ಮುಂತಾದ ಚಿತ್ರಗಳ ಮೂಲಕ ಅವರು ತಮ್ಮ ಪ್ರತಿಭೆಯನ್ನು ಮತ್ತೆ ಸಾಬೀತು ಪಡಿಸಿದರು. ತಾಯಿ-ಮಗನ ಅಂತರಂಗದ ಸಂಬಂಧ, ಸ್ವಾಭಿಮಾನ ಮತ್ತು ತೀರ್ಮಾನದಲ್ಲಿ ಅಚ್ಚಳಿಯ ನಿಲುವು ನೀನಾ ಅವರ ಕಥೆಯು ಇಂದು ಸಾವಿರಾರು ಮಹಿಳೆಯರಿಗೆ ಸ್ಫೂರ್ತಿಯಾಗಿದೆ.