ನಯನತಾರಾ ಮತ್ತು ವಿಘ್ನೇಶ್ ಶಿವನ್ ವಿವಾಹವಾದ ಮರುದಿವನೇ ವಿವಾದದಲ್ಲಿ ಸಿಲುಕಿದ್ದಾರೆ. ಹೌದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಮದುವೆಯಾದ ಮರುದಿನವೇ ತಿರುಪತಿಗೆ ಭೇಟಿ ನೀಡಿದ್ದರು. ಆದರೆ ತಿರುಪತಿಯಲ್ಲಿ ನಯನತಾರಾ ಚಪ್ಪಲಿ ಧರಿಸಿ ಓಡಾಡುವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ದೇವಸ್ಥಾನದ ಆವರಣದ ನಿರ್ಭಂದಿತ ಏರಿಯಾದಲ್ಲಿ ನವಜೋಡಿ ವಿಘ್ನೇಶ್ ಶಿವನ್ ಮತ್ತು ನಯನಾತಾರಾ ಕೈ ಕೈ ಹಿಡಿದು ಓಡಾಡಿದ್ದಾರೆ. ವಿಘ್ನೇಶ್ ಶಿವನ್ ಬರಿಗಾಲಿನಲ್ಲಿ ಓಡಾಡಿದ್ದಾರೆ. ಆದರೆ ನಯನತಾರಾ ಚಪ್ಪಲಿ ಧರಿಸಿ ದೇವಸ್ಥಾನದಲ್ಲಿ ಓಡಾಡಿದ್ದಾರೆ. ಇದು ಸಾರ್ವಜನಿಕರ ಭಾವನೆಗೆ ಧಕ್ಕೆ ತಂದಿದ್ದಾರೆ ಎನ್ನುವ ಆಕ್ರೋಶ ಕೇಳಿಬರುತ್ತಿದೆ.
ನಾಯನತಾರಾ ತಪ್ಪಲಿ ಧರಿಸಿ ಓಡಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿವಾದವಾಗುತ್ತಿದ್ದಂತೆ ದೇವಸ್ಥಾನದ ಅಧಿಕಾರಿ ಮಂಡಳಿ ಸ್ಪಷ್ಟನೆ ನೀಡಿದ್ದಾರೆ ಎಂದು ವರದಿಯಾಗಿದೆ. ಅದು ದೇವಸ್ಥಾನದ ಹೊರವಲಯ. ಅಲ್ಲಿ ಯಾರು ಬೇಕಾದರೂ ಚಪ್ಪಲಿ ಧರಿಸಿ ಓಡಾಡಬಹುದು. ಭಕ್ತಾದಿಗಳಿಗೂ ಅವಕಾಶವಿದೆ ಎಂದು ಹೇಳಿದ್ದಾರೆ.
ಇನ್ನು ವಿಘ್ನೇಶ್ ಶಿವನ್ ಕೂಡ ಸ್ಪಷ್ಟನೆ ನೀಡಿದ್ದಾರೆ. ಮದುವೆ ಬಳಿಕ ಮನೆಗೆ ಹೋಗುವ ಬದಲು ದೇವಸ್ಥಾನಕ್ಕೆ ಹೋದೆವು. ಅಲ್ಲಿ ನೆನಪಿಗಾಗಿ ಫೋಟೋ ತೆಗೆಸಿಕೊಂಡೆವು. ಜನ ಜಾಸ್ತಿಯಾದ ಕಾರಣ ಅಲ್ಲಿಂದ ಹೊರಟು ಹೋದೆವು. ಬಳಿಕ ಮತ್ತೆ ಬಂದು ಫೋಟೋ ಕ್ಲಿಕ್ಕಿಸಿಕೊಂಡೆವು. ಆ ಗಡಿಬಿಡಿಯಲ್ಲಿ ಚಪ್ಪಲಿ ಧರಿಸಿದ್ದು ಗೊತ್ತಾಗಿಲ್ಲ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ(Nayanthara) ಮತ್ತು ವಿಘ್ನೇಶ್ ಶಿವನ್(Vignesh shivan) ಮದುವೆ ಅದ್ದೂರಿಯಾಗಿ ನೆರವೇರಿತು. ಜೂನ್ 9ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ವಿಘ್ನೇಶ್ ಶಿವನ್, ನಯನತಾರಾಗೆ ಮಾಂಗಲ್ಯ ಧಾರಣೆ ಮಾಡಿದರು.
ಇಬ್ಬರ ಮದುವೆ ಸಮಾರಂಭಕ್ಕೆ ಗಣ್ಯಾತಿಗಣ್ಯರು ಹಾಜರಿದ್ದು ನವಜೋಡಿಗೆ ಶುಭಹಾರೈಸಿದ್ದರು. ಗ್ರ್ಯಾಂಡ್ ಆಗಿ ನಡೆದ ಮದುವೆ ಸಮಾರಂಭದಲ್ಲಿ ಇಬ್ಬರು ಕುಟುಂಬದವರು, ಆಪ್ತರು ಮತ್ತು ಚಿತ್ರರಂಗದ ಗಣ್ಯರು ಹಾಜರಿದ್ದರು.
ನಯನತಾರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು ನಾಲ್ಕು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೊನೆಗೂ ಮದುವೆಯಾಗಿದ್ದಾರೆ.