ಜಾಗತಿಕವಾಗಿ ಹೆಸರಾಂತ ನಟಿ ಮತ್ತು ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅವರು ಡಿಸೆಂಬರ್ 2018ರಲ್ಲಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ಒಂದಲ್ಲ ಎರಡು ವಿವಾಹ ಸಮಾರಂಭಗಳಲ್ಲಿ ವಿವಾಹವಾದರು.
ಅವರು ಮೊದಲು ಕ್ರಿಶ್ಚಿಯನ್ ಸಮಾರಂಭದಲ್ಲಿ 'ಐ ಡು' ಎಂದು ಹೇಳಿದರು, ನಂತರ ರಾಜಸ್ಥಾನದಲ್ಲಿ ಸಾಂಪ್ರದಾಯಿಕ ಭಾರತೀಯ ವಿವಾಹವಾದರು.
ಅವರ ಸಂಭ್ರಮಾಚರಣೆಯು ಆಗ ಹೆಚ್ಚು ಚರ್ಚಿತ ವಿಷಯಗಳಲ್ಲಿ ಒಂದಾಗಿದ್ದರೂ, ಇಬ್ಬರ ವಯಸ್ಸಿನ ಅಂತರವನ್ನು ಸಹ ದೊಡ್ಡದಾಗಿ ಚರ್ಚಿಸಲಾಯಿತು. ಏಕೆಂದರೆ, ಪ್ರಿಯಾಂಕಾ ನಿಕ್ ಗಿಂತ ಹತ್ತು ವರ್ಷ ದೊಡ್ಡವಳು.
ಪ್ರಿಯಾಂಕಾ ಚೋಪ್ರಾಗೆ ತಾನು ಸರಿಯಾದ ವ್ಯಕ್ತಿ ಎಂದು ನಿಕ್ ಜೋನಾಸ್ ಆಕೆಯ ತಾಯಿಗೆ ಹೇಗೆ ಮನವರಿಕೆ ಮಾಡಿಕೊಟ್ಟರು ಎಂದು ಮಧು ಚೋಪ್ರಾ ನೆನಪಿಸಿಕೊಂಡಿದ್ದಾರೆ.
ಆಗ ನಿಕ್ ಮತ್ತು ಪ್ರಿಯಾಂಕಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ವಿಷಯ ಮಾಧ್ಯಮಗಳಲ್ಲಿ ಚರ್ಚೆಯಾದಾಗ ಇಬ್ಬರ ನಡುವೆ ಏನಾದರೂ ನಡೆಯುತ್ತಿದೆಯೇ ಎಂದು ಮಗಳನ್ನು ಪ್ರಶ್ನಿಸಿದ್ದರಂತೆ ಮಧು ಚೋಪ್ರಾ.
ಇಂತಹ ವದಂತಿಗಳನ್ನು ನಿರಾಕರಿಸಿದ ಪ್ರಿಯಾಂಕಾ, ತಮ್ಮ ನಡುವೆ ಏನಾದರೂ ನಡೆದರೆ ಮೊದಲು ಹೇಳುತ್ತೇನೆ ಎಂದು ತಾಯಿಗೆ ಹೇಳಿದ್ದಾರೆ.
ಕೆಲವು ದಿನಗಳ ನಂತರ, ಪ್ರಿಯಾಂಕಾ ನಿಕ್ ಜೊತೆ ಮುಂಬೈಗೆ ಮರಳಿದರು. ಮಧು ಚೋಪ್ರಾ ಅವರು ಗಾಯಕ ಭಾರತಕ್ಕೆ ಏಕೆ ಬರುತ್ತಿದ್ದಾರೆ ಎಂದು ಕೇಳಿದಾಗ, ಪ್ರಿಯಾಂಕಾ ಅವನು ಹಾಡುಗಳನ್ನು ಬರೆಯುತ್ತಾನೆ ಮತ್ತು ತನ್ನ ಕೆಲಸವನ್ನು ಪೂರ್ಣಗೊಳಿಸಲು ಬಂದಿದ್ದಾನೆ ಎಂದರು.
ಹೀಗೆ ಭಾರತಕ್ಕೆ ಬಂದ ನಿಕ್ ಮಧು ಚೋಪ್ರಾರನ್ನು ಭೇಟಿಯಾದರಂತೆ. ಪ್ರಿಯಾಂಕಾ ಇಲ್ಲದಾಗ ನೋಡಿ ಆಕೆಯ ತಾಯಿಯನ್ನು ಊಟಕ್ಕೆ ಕರೆದೊಯ್ದರು. ಮತ್ತು ಅಲ್ಲಿ, ಮಗಳಿಗೆ ಯಾವ ರೀತಿಯ ಹುಡುಗನನ್ನು ಹುಡುಕುತ್ತಿರುವುದಾಗಿ ಕೇಳಿದರು.
ಆಗ ಮದು ಚೋಪ್ರಾ ಅವರು ಬಯಸುವ ಅಳಿಯನಲ್ಲಿರಬೇಕಾದ ಎಲ್ಲ ಗುಣಗಳನ್ನು ಪಟ್ಟಿ ಮಾಡಿ ಹೇಳಿದರಂತೆ. ಇದಕ್ಕೆ ಪ್ರತಿಕ್ರಿಯಿಸಿದ ನಿಕ್, ' ನಾನು ಆ ವ್ಯಕ್ತಿಯಾಗಬಹುದೇ? ನಿಮ್ಮ ಪಟ್ಟಿಯಲ್ಲಿರುವ ಎಲ್ಲವನ್ನೂ ಪೂರ್ಣಗೊಳಿಸುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ' ಎಂದರು.
ಮಧು ಚೋಪ್ರಾಗೆ ಮಗಳು ಅಳಿಯನ ವಯಸ್ಸಿನ ಅಂತರದ ಬಗ್ಗೆ ಜನ ಮಾತಾಡುವಾಗ ಏನನ್ನಿಸುತ್ತದೆ ಎಂದು ಕೇಳಿದಾಗ- 'ಅದೇನು ವ್ಯತ್ಯಾಸ ಮಾಡುವುದಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಯಿಂದ ಇದ್ದಾರೆ. ನನಗೆ ಅಷ್ಟೇ ಮುಖ್ಯ, ಮಾತಾಡೋರು ಮಾತಾಡುತ್ತಿರಲಿ' ಎಂದಿದ್ದಾರೆ.