ಸಾಮಾನ್ಯವಾಗಿ ಹೆಣ್ಣುಮಕ್ಕಳು ಮೊದಲ ಬಾರಿ ಮುಟ್ಟಾದಾಗ ಸಾಕಷ್ಟು, ಭಯ, ಮುಜುಗರ ಅನುಭವಿಸುತ್ತಾರೆ. ಅದನ್ನು ತಾಯಿಯ ಬಳಿ ಗುಟ್ಟಾಗಿ ಹೇಳುತ್ತಾರೆ. ಆದರೆ, ಬಾಲಿವುಡ್ ನಟಿ ಭೂಮಿ ಮೊದಲ ಮುಟ್ಟಾದಾಗ ಹೇಳಿದ್ದು ತಂದೆಯ ಬಳಿ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಭೂಮಿ, ತನಗೆ ಮೊದಲ ಪೀರಿಯಡ್ಸ್ ದಿನ ತಾಯಿ ಮನೆಯಲ್ಲಿರಲಿಲ್ಲ. ಹಾಗಾಗಿ ಅಳುಕುತ್ತ, ಮುಜುಗರದಲ್ಲೇ ತಂದೆಯ ಬಳಿ ಹೇಳಿಕೊಂಡರಂತೆ.
ಆದರೆ, ತಂದೆ ಆಕೆಯ ಮುಜುಗರವನ್ನು ಹೋಗಿಸಿಬಿಟ್ಟರಂತೆ. ಅವರು ಸಂತಸ ತೋರಿಸಿ, ಹೊರ ಹೋಗಿ ಸ್ಯಾನಿಟರಿ ಪ್ಯಾಡ್ ತಂದುಕೊಟ್ಟರು.
ನಂತರ ಮಗಳ ಪಾದಗಳನ್ನು ಒತ್ತಿದರು. ಮುಟ್ಟಿನ ನೋವನ್ನು ಕಡಿಮೆ ಮಾಡಲು ಬಿಸಿ ನೀರು ಬಾಟಲಿ ಸಿದ್ಧಪಡಿಸಿದರು. ಅಷ್ಟೇ ಅಲ್ಲ, ದೊಡ್ಡ ಪಾರ್ಟಿಯನ್ನೂ ಕೊಟ್ಟರು. ಅಂಥ ತಂದೆ ಹೊಂದಲು ನಾನು ಅದೃಷ್ಟಶಾಲಿ ಎಂದಿದ್ದಾರೆ ನಟಿ.
ಕುಟುಂಬದ ಬಗ್ಗೆ ಅಪಾರ ಒಲವು ಹೊಂದಿರುವ ಭೂಮಿಗೆ ತಂದೆ ತಾಯಿ ತಂಗಿಯೆಂದರೆ ಜೀವ. ದುರದೃಷ್ಟವಶಾತ್ ಭೂಮಿ 18 ವರ್ಷದವರಿರುವಾಗಲೇ ತಂದೆ ಬಾಯಿಯ ಕ್ಯಾನ್ಸರ್‌ಗೆ ಅಸು ನೀಗಿದರು.
ಅಂದಿನಿಂದ ಅವರ ತಾಯಿ ಸುಮಿತ್ರಾ ಪೆಡ್ನೇಕರ್ ಅವರು ತಂಬಾಕು ವಿರೋಧಿ ಹೋರಾಟಗಾರರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಹೆಣ್ಮಕ್ಕಳ ಬೆಂಬಲಕ್ಕೆ ನಿಂತಿದ್ದಾರೆ.
ಇಷ್ಟಕ್ಕೂ ಭೂಮಿಯ ತಂದೆ ಮಹಾರಾಷ್ಟ್ರದ ಮಾಜಿ ಶಾಸಕ ಮತ್ತು ಗೃಹ ಮತ್ತು ಕಾರ್ಮಿಕ ಸಚಿವರಾಗಿದ್ದ ಸತೀಶ್ ಪೆಡ್ನೇಕರ್ ಆಗಿದ್ದಾರೆ.
ದಮ್ ಲಗಾ ಕೆ ಹೈಸಾ ನಟಿಯು ಆಗಾಗ್ಗೆ ತಂದೆಯ ಮೇಲಿನ ತಮ್ಮ ಅಪಾರ ಪ್ರೀತಿಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ತಂದೆಯನ್ನು ತಾನು ಮಿಸ್ ಮಾಡಿಕೊಳ್ಳುವುದಾಗಿ ಹೇಳುತ್ತಾರೆ.
ಒಮ್ಮೆ ತಂದೆಯ ಹುಟ್ಟುಹಬ್ಬದಂದು ಅವರ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಭೂಮಿ, 'ಪ್ರತಿದಿನ, ಪ್ರತಿ ನಿಮಿಷ ಮತ್ತು ಪ್ರತಿ ಸೆಕೆಂಡಿಗೆ ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಬರೆದಿದ್ದರು.
'ಆದರೆ ನಂತರ, ನಾನು ನಿಮ್ಮನ್ನು ಎಲ್ಲೆಡೆ ನೋಡುತ್ತೇನೆ. ನಾನು ನೋಡಿದಾಗ, ನನ್ನ ಕಣ್ಣುಗಳು ನಿಮ್ಮಂತೆಯೇ. ನಾವು ಅಮ್ಮನಿಗೆ ತೊಂದರೆ ಕೊಡುವಾಗ ಅವಳು ಹೇಳುತ್ತಾಳೆ - ನೀವಿಬ್ಬರೂ ಸತೀಶನಂತೆಯೇ ಇದ್ದೀರಿ. ನಾವು ಏನಾದರೂ ಒಳ್ಳೆಯದನ್ನು ಮಾಡಿದಾಗ, ಅವಳು ಹೇಳುತ್ತಾಳೆ - ನೀವಿಬ್ಬರೂ ಸತೀಶನಂತೆಯೇ ಇದ್ದೀರಿ' ಎಂದು ಬರೆದಿದ್ದರು.