ಲಾರಾ ದತ್ತಾ ಬಾಲಿವುಡ್‌ನ ಪ್ರತಿಭಾನ್ವಿತ ನಟಿ. ಅನೇಕ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಮಿಸ್ ಯೂನಿವರ್ಸ್ 2000ರ ಸ್ಪರ್ಧೆಯ ಹೆಮ್ಮೆಯ ವಿಜೇತೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿದ್ದರೂ ಟ್ರೋಲಿಗರು ಇವರನ್ನೂ ಸುಮ್ಮನೆ ಬಿಡುವುದಿಲ್ಲ. ಆಗಾಗ ವಯಸ್ಸಿನ ಬಗ್ಗೆ ಟ್ರೋಲ್ ಮಾಡುತ್ತಲೇ ಇರುತ್ತಾರೆ.
ಇತ್ತೀಚಿಗೆ ಆನ್‌ಲೈನ್ ಟ್ರೋಲ್‌ಗಳೊಂದಿಗೆ ತಾನು ಹೇಗೆ ವ್ಯವಹರಿಸುತ್ತೇನೆ ಎಂದು ಲಾರಾ ದತ್ತಾ ಬಹಿರಂಗಪಡಿಸಿದ್ದಾರೆ. ಸಂದರ್ಶನದಲ್ಲಿ, ಲಾರಾ ದತ್ತಾರನ್ನು ಟ್ರೋಲಿಂಗ್ ಮತ್ತು ನಕಾರಾತ್ಮಕತೆಯನ್ನು ಹೇಗೆ ಎದುರಿಸುತ್ತಾರೆ ಎಂದು ಕೇಳಲಾಯಿತು. ಇದಕ್ಕೆ ನಟಿ, 'ಸೆಲೆಬ್ರಿಟಿ ಸ್ಥಾನಮಾನದ ಜೊತೆಗೆ ಬರುವ ಎಲ್ಲವನ್ನೂ ಎದುರಿಸಲು ಅವಳು ಸಿದ್ಧವಾಗಿದ್ದೇನೆ' ಎಂದರು.
'ನಾನು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿಲ್ಲ. ನಾನು ಅಲ್ಲಿ ಸಕ್ರಿಯವಾಗಲು ಬಯಸುವುದಾದರೆ ಜನರಿಂದ ಒಳ್ಳೆಯ ಕಾಮೆಂಟ್‌ಗಳನ್ನು ಪಡೆಯುವುದರ ಜೊತೆಗೆ ಕೆಟ್ಟ ಕಾಮೆಂಟ್‌ಗಳನ್ನು ಸಹ ಸ್ವೀಕರಿಸಲು ಸಿದ್ಧವಾಗಿರಬೇಕು' ಎಂದು ಲಾರಾ ತಿಳಿಸಿದರು.
ಇದರ ಜೊತೆಗೆ ನಟಿ ತನಗೆ ವಿಶೇಷವಾದ ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತೇನೆ ಎಂದು ಉಲ್ಲೇಖಿಸಿದ್ದಾರೆ. ಆಕೆಗೆ ಹೆಚ್ಚಿನ ಅನುಯಾಯಿಗಳಿಲ್ಲದ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ಆಕೆಯನ್ನು ಪ್ರಾಮಾಣಿಕವಾಗಿ ಅನುಸರಿಸುವ ಜನರು ಆಕೆಯ ಪೋಸ್ಟ್‌ಗಳನ್ನು ಇಷ್ಟಪಡುತ್ತಾರೆ ಎಂದು ಲಾರಾ ಹೇಳಿದರು:
'ನನ್ನ ಸಾಮಾಜಿಕ ಮಾಧ್ಯಮ ಫೀಡ್ ನಿಜವಾಗಿಯೂ ನನಗೆ ವಿಶೇಷವಾದ ವಿಷಯವಾಗಿದೆ, ನಾನು ನಿಜವಾಗಿಯೂ ನನ್ನನ್ನು ಅನುಸರಿಸುತ್ತಿರುವ ಜನರೊಂದಿಗೆ ನನ್ನ ಜೀವನದ ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಯಾಕೆಂದರೆ ನನ್ನನ್ನು ಪ್ರೀತಿಸುವವರು ಮಾತ್ರ ಅಲ್ಲಿದ್ದಾರೆ. ದ್ವೇಷಿಸುವವರು ಇಲ್ಲ' ಎಂದಿದ್ದಾರೆ.
ಇತರ ಅನೇಕ ಸೆಲೆಬ್ರಿಟಿಗಳಂತೆ, ಲಾರಾ ದತ್ತಾ ತನ್ನ ನೋಟ ಮತ್ತು ದೇಹದ ಬಗ್ಗೆ ಅಸಹ್ಯಕರ ಕಾಮೆಂಟ್‌ಗಳನ್ನು ಎದುರಿಸಬೇಕಾಗಿ ಬಂದಿರುವ ಬಗ್ಗೆ ಮಾತನಾಡಿದ್ದಾರೆ. ಕೆಲವೊಬ್ಬರು ನೀವು ಮುದುಕಿಯಾಗಿದ್ದೀ ಎಂದು ಕಾಮೆಂಟ್ ಮಾಡಿದ್ದರು ಎಂಬ ಬಗ್ಗೆ ಲಾರಾ ಹೇಳಿದರು.
'ಯಾರಾದರೂ ಹೀಗೆ ಕಾಮೆಂಟ್ ಮಾಡಿದ ತಕ್ಷಣ ಇದು ನಿಜವಾಗಿಯೂ ನನ್ನ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆಯೇ? ಹಾಗಾಗಿ ನಾನು ಅಂಥಾ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಲಾರಾದತ್ತಾ ತಿಳಿಸಿದ್ದಾರೆ.
ಲಾರಾ ದತ್ತಾ ವೈಯಕ್ತಿಕ ಜೀವನ
ಫೆಬ್ರವರಿ 16, 2011ರಂದು ಲಾರಾ ದತ್ತಾ ಅವರು ಏಸ್ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರನ್ನು ವಿವಾಹವಾದರು. ಜನವರಿ 20, 2012 ರಂದು, ದಂಪತಿಗಳು ಪುಟ್ಟ ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಸೈರಾ ಭೂಪತಿ ಎಂದು ಹೆಸರಿಸಿದ್ದಾರೆ.
ಸಿನಿ ಕೆರಿಯರ್ ವಿಚಾರಕ್ಕೆ ಬರುವುದಾದರೆ ಲಾರಾ ದತ್ತಾ ವೆಬ್ ಸರಣಿ, ರಣ್‌ನೀರಿ ಮತ್ತು ಬಿಯಾಂಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.