ಮಾಡೆಲ್‌ಗಳು ವಿಚಿತ್ರವಾಗಿ ಬಟ್ಟೆಗಳನ್ನು ಧರಿಸಿ ಗಮನ ಸೆಳೆಯುತ್ತಿರುತ್ತಾರೆ. ಅದರಲ್ಲೂ ಅಂತಾರಾಷ್ಟ್ರೀಯ ಫ್ಯಾಷನ್ ಈವೆಂಟ್ ಗಳಲ್ಲಿ ಪ್ರಸಿದ್ಧ ಮಾಡೆಲ್, ಸಿನಿಮಾ ಸೆಲೆಬ್ರಿಟಿಗಳು ಧರಿಸಿರುವ ಬಟ್ಟೆ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತದೆ. ಕೆಲವೊಮ್ಮೆ ಅವರು ಧರಿಸುವ ಬಟ್ಟೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತದೆ.
ಇದೀಗ ಖ್ಯಾತ ಗಾಯಕಿ ಧರಿಸಿದ್ದ ಬಟ್ಟೆ ವಿಶ್ವ ಮಟ್ಟದ ಗಮನ ಸೆಳೆಯುತ್ತಿದೆ. ಅಮೆರಿಕದ ರ್ಯಾಪರ್ ಹಾಗೂ ಗಾಯಕಿ ಡೋಜಾ ಕ್ಯಾಟ್ ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ. 27 ವರ್ಷದ ಈ ಗಾಯಕಿ ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಭಾಗವಹಿಸಿದ್ದರು. ಮೈ ಮೇಲೆ 30 ಸಾವಿರ ಹರಳುಗಳು ಇರುವ ಬಟ್ಟೆ ಧರಿಸಿ ಹೆಜ್ಜೆ ಹಾಕಿದ್ದಾರೆ.
ಡೋಜಾ ಕ್ಯಾಟ್ ಅವರ ಫ್ಯಾಷನ್ ವೀಕ್ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋ ನೋಡಿ ಅನೇಕರು ಅಚ್ಚರಿಗೊಂಡಿದ್ದಾರೆ.
ಗಾಯಕಿ ಡೋಜಾ ಕ್ಯಾಟ್ ಸಂಪೂರ್ಣವಾಗಿ ತಲೆ, ಮುಖ, ಎದೆ ಮತ್ತು ತೋಳುಗಳು ಹರಳುಗಳಿಂದ ತುಂಬಿದೆ. ಕೆಂಪು ಬಣ್ಣದಿಂದ ಮಾಡಿದ ವಿಶೇಷ ಡ್ರೆಸ್ ಎಲ್ಲರ ಗಮನ ಸೆಳೆಯುತ್ತಿದೆ. ಡೋಜಾ ಕ್ಯಾಟ್ ಲುಕ್ ಅನ್ನು ಸೆಲೆಬ್ರಿಟಿ ಮೇಕಪ್ ಕಲಾವಿದ ಪ್ಯಾಟ್ ಮೆಕ್‌ಗ್ರಾತ್ ತಯಾರಿಸಿದ್ದಾರೆ.
ಡೋಜಾ ಕ್ಯಾಟ್ ವಿಡಿಯೋವನ್ನು ಶೇರ್ ಮಾಡಿ, 30,000 ಸ್ಫಟಿಕಗಳನ್ನು ಒಳಗೊಂಡಿದೆ ಎಂದು ಮೆಕ್‌ಗ್ರಾತ್ ಹೇಳಿದ್ದಾರೆ. ಡ್ರೆಸ್ ಮಾಡಲು ಬರೋಬ್ಬರಿ 5 ಗಂಟೆಗಳು ಬೇಕಾಯಿತು ಎಂದು ಬಹಿರಂಗ ಪಡಿಸಿದ್ದಾರೆ.
ಡೋಜಾ ಕ್ಯಾಟ್ ಲುಕ್ ಅನೇಕರ ಮೆಚ್ಚುಗೆಗೆ ಕಾರಣವಾಗಿದೆ. ಆದರೆ ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ವಿಭಿನ್ನವಾಗಿರುವ ಡೋಜಾ ಲುಕ್ ಈಗ ವಿಶ್ವದ ಗಮನ ಸೆಳೆಯುತ್ತಿದೆ.