ಸಿನಿ ಜೀವನದ ಉತ್ತುಂಗದಲ್ಲಿ ಇರುವಾಗಲೇ ದುರಂತ ಅಂತ್ಯ ಕಂಡ ನಟಿಯಲ್ಲಿ ದಿವ್ಯಾ ಭಾರತಿ(Divya Bharti) ಕೂಡ ಒಬ್ಬರು. ಹಿಂದಿ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಹಾಟ್ ಫೇವರಿಟ್ ಆಗಿದ್ದ ತಾರೆ ದಿವ್ಯಾ ಭಾರತಿ. ಈಕೆಯ ದುರಂತ ಸಾವು ಇಂದಿಗೂ ರಹಸ್ಯವಾಗಿಯೇ ಉಳಿದುಹೋಗಿದೆ. 1990ರಲ್ಲಿ 'ಬೊಬ್ಬಿಲಿ ರಾಜಾ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟ ದಿವ್ಯಾ ಭಾರತಿ ದಕ್ಷಿಣ ಭಾರತದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ್ದರು.
ದಕ್ಷಿಣದಿಂದ ದಿವ್ಯಾ ಬಳಿಕ ಹಿಂದಿ ಚಿತ್ರರಂಗಕ್ಕೆ ಜಿಗಿದರು. ಕೆಲವೇ ವರ್ಷಗಳಲ್ಲಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದರು ದಿವ್ಯಾ. ಅತ್ಯಂತ ಕಡಿಮೆ ಅವದಿಯಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದರು. ದಿವ್ಯಾ 90 ದಶಕದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.
1992-93ರ ಅವಧಿಯಲ್ಲಿ 14 ಹಿಂದಿ ಚಿತ್ರಗಳಲ್ಲಿ ದಿವ್ಯಾ ಭಾರತಿ ನಟಿಸಿದ್ದರು. 1993ರ ಏಪ್ರಿಲ್ 5ರಂದು ತನ್ನ ಅಪಾರ್ಟ್ಮೆಂಟ್ ನಿಂದ ಕೆಳಗೆಬಿದ್ದು ದುರಂತ ಸಾವನಪ್ಪಿದ್ದರು. ಈಕೆಯ ಸಾವು ಆಕಸ್ಮಿಕವೋ, ಆತ್ಮಹತ್ಯೆಯೋ ಅಥವಾ ಹತ್ಯೆಯೋ ಎಂಬುದು ಕಡೆಗೂ ಗೊತ್ತಾಗಲಿಲ್ಲ. 1998ರಲ್ಲಿ ಈಕೆಯ ರಹಸ್ಯ ಸಾವಿನ ತನಿಖೆಯ ಫೈಲ್ ಕೂಡ ಕ್ಲೋಸ್ ಆಯಿತು. ಇಂದು ದಿವ್ಯಾ ಭಾರತಿ ಅವರ ಪುಣ್ಯ ತಿಥಿ. ಅಭಿಮಾನಿಗಳು 90 ದಶಕದ ಆ ಸುಂದರ ನಟಿಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದಾರೆ.
ದಿವ್ಯಾ ಭಾರತಿ ಕುಟುಂಬ ಇವತ್ತಿಗೂ ಸಾವಿನ ನೋವಿನಲ್ಲೇ ಬದುಕುತ್ತಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ದಿವ್ಯಾ ತಾಯಿ ಮಿತಾ ಭಾರತಿ ಮಗಳ ಸಾವಿನ ಬಗ್ಗೆ ಮಾತನಾಡಿದ್ದರು. 'ದಿವ್ಯಾ ಎಲ್ಲಿದ್ದಳು ಎಂದು ಅವಳೇ ಅರ್ಥಮಾಡಿಕೊಂಡಿಲ್ಲ. ಜನ ಎಷ್ಟು ಪ್ರೀತಿಸುತ್ತಿದ್ದರು ಎಂದು ಅವಳು ಅರ್ಥಮಾಡಿಕೊಂಡಿದ್ದರೆ ಅವಳು ತನ್ನನ್ನು ತಾನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದರೆ ಇಂಥ ದುರಂತ ಸಂಭವಿಸುತ್ತಿರಲಿಲ್ಲ' ಎಂದಿದ್ದಾರೆ.
ದಿವ್ಯಾ ಸಾವು ಆತ್ಮಹತ್ಯೆ ಎಂದು ವರದಿಯಾಗಿತ್ತು. ಆದರೆ ಇದನ್ನು ದಿವ್ಯಾ ತಾಯಿ ತಳ್ಳಿ ಹಾಕಿದ್ದಾರೆ. ದಿವ್ಯಾ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಸ್ವಭಾವ ಅವಳದಲ್ಲ. ಆದರೆ ಕೊಲೆಯು ಅಲ್ಲ. ಕೊಲೆಯಾಗಿದ್ದರೆ ಯಾರಾದರೂ ಯಾಕೆ ಆಕೆಯನ್ನು ಕೊಲೆ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
'ದಿವ್ಯಾ ಯಾವತ್ತು ಗ್ಲಾಮರ್ ಪ್ರಪಂಚದತ್ತ ಆಕರ್ಷಿತರಾದವರಲ್ಲ, ದೊಡ್ಡ ನಟಿಯಗಬೇಕು ಎಂದು ಕನಸು ಕಂಡವರಲ್ಲ. ಶಿಕ್ಷಣ ಮುಗಿಸಿ ಗೃಹಿಣಿ ಆಗಲು ಬಯಸಿದ್ದರು' ಎಂದು ತಾಯಿ ಮೀತಾ ಭಾರತಿ ಬಹಿರಂಗ ಪಡಿಸಿದ್ದರು.
'ಓದುತ್ತಿರುವಾಗಲೇ ಅವಳಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಬರುತ್ತಿದ್ದವು. ಪಕ್ಕದ ಕಟ್ಟಡದಲ್ಲೇ ನಿರ್ಮಾಪಕರಿದ್ದರು. ಅವರ ಮ್ಯಾನೇಜರ್ ಬಂದು ಸಿನಿಮಾ ಮಾಡುವಂತೆ ಕೇಳಿಕೊಳ್ಳುತ್ತಿದ್ದರು. ಆಗ ಸಿನಿಮಾಗಳಿಗೆ ಸಹಿ ಹಾಕಿದರೆ ಅಧ್ಯಯನ ಗತಿ ಏನು ಎಂದು ಪ್ರಶ್ನೆ ಮಾಡಿದ್ದಳು. ಅದಕ್ಕೆ ನಾನು ಸಿನಿಮಾದಲ್ಲಿ ಮುಂದುವರೆದರೆ ಓದು ನಿಲ್ಲಬೇಕು ಎಂದಿದ್ದೆ. ಆಗ ಇನ್ಮುಂದೆ ಓದು ಬೇಡ ಸಿನಿಮಾದಲ್ಲಿ ಮುಂದುವರೆಯುವುದಾಗಿ ಹೇಳಿ ಸಿನಿಮಾಗೆ ಸಹಿ ಹಾಕಿದ್ದಳು' ಎಂದು ತಾಯಿ ಬಹಿರಂಗ ಪಡಿಸಿದ್ದರು.
1993 ಏಪ್ರಿಲ್ 5 ದಿವ್ಯಾ ಭಾರತಿ ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ವರದಿಗಳ ಪ್ರಕಾರ ದಿವ್ಯಾ ಭಾರತಿ ಅಂದು ಚೆನ್ನೈನಿಂದ ಶೂಟಿಂಗ್ ಮುಗಿಸಿ ಮುಂಬೈಗೆ ಮರಳಿದರು. ಅಂದು ದಿವ್ಯಾ ತನ್ನ ಸ್ನೇಹಿತರ ಜೊತೆ ಇದ್ದರು. ದಿವ್ಯಾ ಊಟ ಮಾಡಲು ಕಿಟಕಿ ಬಳಿ ಕುಳಿತಿದ್ದರು. ಆದರೆ ಗ್ರಿಲ್ ಇಲ್ಲದ ಕಿಟಕಿ ಬಳಿ ಕುಳಿತಿದ್ದ ದಿವ್ಯಾ ಜಾರಿ ಕೆಳಗೆ ಬಿದ್ದರು ಎಂದು ವರದಿಯಾಗಿದೆ. ತಕ್ಷಣ ಅವರನ್ನು ಕೂಪರ್ ಆಸ್ಪತ್ರೆಗೆ ಕರೆದುಕೊಂಡು ಹೋದರು ದಿವ್ಯಾ ಬದುಕಿ ಉಳಿಯಲಿಲ್ಲ.