ಇತ್ತೀಚೆಗೆ ಬಿಡುಗಡೆಯಾದ ಹೇಮಾ ಕಮಿಟಿ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ. ಹಲವು ಗಣ್ಯರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಈ ಬಗ್ಗೆ ಅವರು ತಮ್ಮ X ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಒಂದು ದೀರ್ಘ ಪೋಸ್ಟ್ ಪೋಸ್ಟ್ ಮಾಡಿದ್ದಾರೆ.
'ಚಿತ್ರರಂಗದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯವನ್ನು ನಿಗ್ರಹಿಸಲು ಹೇಮಾ ಸಮಿತಿ ಅಗತ್ಯವಿತ್ತು. ಆದರೆ ಚಿತ್ರರಂಗ ಮಾತ್ರವಲ್ಲ, ಪ್ರತಿಯೊಂದೂ ಕ್ಷೇತ್ರದಲ್ಲೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನಡೆಯುತ್ತಿದೆ. ಕೆಲವು ಪುರುಷರೂ ಇದನ್ನು ಎದುರಿಸುತ್ತಿದ್ದಾರೆ. ನನ್ನ 24 ಮತ್ತು 21 ವರ್ಷದ ಹೆಣ್ಣುಮಕ್ಕಳೊಂದಿಗೆ ನಾನು ಮನಬಿಚ್ಚಿ ಮಾತನಾಡಿದಾಗ, ಸಂತ್ರತ್ಯೆರ ಬಗ್ಗೆ ಅವರ ಕಾಳಜಿ ನೋಡಿ ಆಶ್ಚರ್ಯವಾಯಿತು. ನನ್ನ ಹೆಣ್ಣುಮಕ್ಕಳು ಇಂದು ಅಂಥ ಸಂತ್ರಸ್ತೆಯರೊಂದಿಗಿದ್ದಾರೆ. ಬಾಧಿತ ಮಹಿಳೆಯರು ಇಂದು ಅಥವಾ ನಾಳೆ ಮಾತನಾಡಿದರೂ ಪರವಾಗಿಲ್ಲ, ಆದರೆ ತಕ್ಷಣ ಮಾತನಾಡಿದರೆ, ಪರಿಣಾಮಕಾರಿಯಾಗಿ ತನಿಖೆ ನಡೆಸಲು ಸಹಾಯವಾಗುತ್ತದೆ,' ಎಂದಿದ್ದಾರೆ.
'ಹೊರಗೆ ಹೇಳಿದರೆ ಅವಮಾನ ಎಂದು ಭಾವಿಸುವುದು, ಬಲಿಪಶುವಾದ ಮಹಿಳೆಯರನ್ನೇ ದೂಷಿಸುವುದು ಮತ್ತು 'ನೀವು ಅದನೇಕೆ ಮಾಡಿದ್ದೀರಿ?” ಎಂಬಂತಹ ಪ್ರಶ್ನೆಗಳು ಬಲಿಪಶುವಿನ ಮನಸ್ಸನ್ನು ಕುಗ್ಗಿಸುತ್ತದೆ. ಸಂತ್ರಸ್ತೆಯರು ನಿಮಗೆ ಅಥವಾ ನನಗೆ ಅಪರಿಚಿತರಾಗಿರಬಹುದು. ಆದರೆ ಅವರಿಗೆ ನಮ್ಮ ಬೆಂಬಲ ಮಾತ್ರ ಬೇಕು, ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಏಕೆ ಮೊದಲೇ ಹೇಳಲಿಲ್ಲ?' ಎಂದು ಕೇಳುವಾಗ, ನಾವು ಅವರ ಪರಿಸ್ಥಿತಿಯನ್ನು ಪರಿಗಣಿಸಬೇಕು. ಎಲ್ಲರಿಗೂ ಮಾತನಾಡಲು ಆಗೋಲ್ಲ. ಇಂಥ ನಡವಳಿಕೆಯಿಂದಾಗುವ ಗಾಯ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಆಳವಾಗಿ ಚುಚ್ಚಿರುತ್ತದೆ. ಈ ಕೃತ್ಯಗಳು ನಮ್ಮ ನಂಬಿಕೆ, ಪ್ರೀತಿ ಮತ್ತು ಶಕ್ತಿಯನ್ನೇ ಅಲ್ಲಾಡಿಸುತ್ತದೆ. ಪ್ರತಿಯೊಬ್ಬ ತಾಯಿಯ ಹಿಂದೆಯೂ ಪೋಷಿಸುವ ಮತ್ತು ರಕ್ಷಿಸುವ ಬಯಕೆ ಇರುತ್ತದೆ, ಆ ಪಾವಿತ್ರ್ಯತೆಗೆ ಧಕ್ಕೆಯಾದಾಗ, ಅದು ನಮ್ಮೆಲ್ಲರ ಮೇಲೂ ಪರಿಣಾಮ ಬೀರುತ್ತದೆ,' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಕೆಲವರು ಈ ದೌರ್ಜನ್ಯದ ಬಗ್ಗೆ ಮಾತನಾಡಲು ಏಕಿಷ್ಟು ಸಮಯ ಬೇಕಾಯಿತು ಎಂದು ಕೇಳುವುದಿದೆ. ಮೊದಲೇ ಮಾತನಾಡಬೇಕಿತ್ತು ಹೌದು. ಆದರೆ ಅದಾಗಬೇಕಲ್ಲ? ಹಾಗಂಥ ಜೀವನವನ್ನು ಕಟ್ಟಿಕೊಳ್ಳಲು ಮಾಡಿಕೊಂಡ ರಾಜಿ ಅದು ಅಲ್ಲವೇ ಅಲ್ಲ. ನನ್ನ ಮೇಲೆ ದೌರ್ಜನ್ಯ ನಡೆದಿದೆ. ಬಿದ್ದಾಗ ಕೈ ಹಿಡಿಯುತ್ತಾನೆಂದು ನಂಬುವ ವ್ಯಕ್ತಿಯೇ ಜೀವನಪೂರ್ತಿ ಅನುಭವಿಸುವಂತೆ ಮಾಡುತ್ತಾನೆ. ಅವನೂ ಒಬ್ಬ ಮಹಿಳೆಗೆ ಹುಟ್ಟಿರುತ್ತಾನೆ ಎಂಬುವುದು ಸತ್ಯ. ಅವರಮ್ಮನೂ ತನ್ನ ಮಗನ ಬಗ್ಗೆ ಎಷ್ಟು ಕಾಳಜಿ ವಹಿಸಬೇಕೋ, ಅಷ್ಟು ಕಾಳಜಿ ವಹಿಸಿಕೊಂಡಿರುತ್ತಾರೆ. ಪುರುಷನ ವ್ಯಕ್ತಿತ್ವ ರೂಪಿಸಿದ್ದು ಒಬ್ಬ ಮಹಿಳೆಯೇ, ಎಂಬುದನ್ನು ಒತ್ತು ಹೇಳಿದ್ದಾರೆ.
'ಮಹಿಳೆಯ ಒಗ್ಗಟ್ಟು (Unity of Women) ಭರವಸೆಯ ದೀಪಸ್ತಂಭವಾಗಿರಲಿ, ನ್ಯಾಯ ಮತ್ತು ಕರುಣೆ ಮೇಲುಗೈ ಸಾಧಿಸಲಿ ಎಂಬುದಕ್ಕೆ ಸಾಕ್ಷಿಯಾಗಿರಲಿ. ನಮ್ಮೊಂದಿಗಿಲ್ಲ, ನಮ್ಮನ್ನು ರಕ್ಷಿಸಿ, ನಿಮಗೆ ಜೀವ ಮತ್ತು ಪ್ರೀತಿಯನ್ನು ನೀಡಿದ ಮಹಿಳೆಯನ್ನು ಗೌರವಿಸಿ. ದೌರ್ಜನ್ಯದ ವಿರುದ್ಧ ನಿಮ್ಮ ಧ್ವನಿ ಎತ್ತಿ. ನಿಮ್ಮ ನಡವಳಿಕೆಯು ಪ್ರತಿಯೊಬ್ಬ ಮಹಿಳೆಗೂ ಸಲ್ಲಬೇಕಾದ ಗೌರವ ಮತ್ತು ಸಹಾನುಭೂತಿ ಇರಲಿ. ನಾವು ಒಟ್ಟಾಗಿ ಬಲಶಾಲಿಗಳು, ಒಟ್ಟಾದರೆ ಮಾತ್ರ ಈ ಗಾಯಗಳನ್ನು ಗುಣಪಡಿಸಬಹುದು ಮತ್ತು ಸುರಕ್ಷಿತ, ಕರುಣಾಮಯಿ ಜಗತ್ತನ್ನು ಸೃಷ್ಟಿಸಬಹುದು, ಎಂದಿದ್ದಾರೆ.
'ಅನೇಕ ಮಹಿಳೆಯರಿಗೆ ತಮ್ಮ ಕುಟುಂಬದ ಬೆಂಬಲವೂ ಇರುವುದಿಲ್ಲ. ಇದು ಎಚ್ಚರಿಕೆಯ ಗಂಟೆಯಾಗಿರಬೇಕು. ಲೈಂಗಿಕ ದೌರ್ಜನ್ಯವನ್ನು ಇಲ್ಲೇ ನಿಲ್ಲಿಸಬೇಕು. ನೀವು ಹೇಳುವ 'ಇಲ್ಲ' ಎಂದರೆ ಅದು ಯಾವಾಗಲೂ 'ಇಲ್ಲ'ವೆಂದರ್ಥ. ಗೌರವ ಮತ್ತು ಘನತೆಗೆ ಎಂದಿಗೂ ಧಕ್ಕೆ ತಂದುಕೊಳ್ಳಬೇಡಿ. ಒಬ್ಬ ತಾಯಿಯಾಗಿ ಮತ್ತು ಒಬ್ಬ ಮಹಿಳೆಯಾಗಿ, ಈ ಲೈಂಗಿಕ ಕಿರುಕುಳವನ್ನು ಅನುಭವಿಸಿದ ಎಲ್ಲಾ ಮಹಿಳೆಯರೊಂದಿಗೆ ನಾನು ನಿಂತಿದ್ದೇನೆ,' ಎಂಬ ಭರವಸೆಯನ್ನು ಖುಷ್ಬೂ ಕೊಟ್ಟಿದ್ದಾರೆ. 2023ರಲ್ಲಿ, ಖುಷ್ಬೂ ಅವರ ತಂದೆ ಬಗ್ಗೆ ಮಾಡಿದ ಆರೋಪ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ತಾನು ಎಂಟು ವರ್ಷದವಳಿದ್ದಾಗ ತನ್ನ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಗಿ ಮತ್ತು 15 ವರ್ಷದವರೆಗೂ ಅದನ್ನು ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ ಎಂದು ಖುಷ್ಬೂ ಹೇಳಿದ್ದರು.