ನಟಿ ಹೇಮಾ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ ಎಂಬ ಸುದ್ದಿ ಸಂಚಲನ ಮೂಡಿಸಿತ್ತು. ಬೆಂಗಳೂರು ಹೊರವಲಯದ ತೋಟದ ಮನೆಯಲ್ಲಿ ಹುಟ್ಟುಹಬ್ಬದ ನೆಪದಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದು, ಇದರಲ್ಲಿ ನಟಿ ಹೇಮಾ ಸೇರಿ 100ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಆದರೆ, ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ತಾನು ಪಾರ್ಟಿಗೆ ಹೋಗಿಲ್ಲ ಎಂದು ವಿಡಿಯೋ ಹರಿಬಿಟ್ಟಿದ್ದ ನಟಿ ಹೇಮಾ, ಕೊನೆಗೆ ಕೆಲವು ದಿನ ಬೆಂಗಳೂರಿನಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿ ಹೋಗಿದ್ದರು. ಇದೀಗ ಸ್ವತಃ ನಟಿ ಹೇಮಾ ತಾನು ಬೆಂಗಳೂರು ಪಾರ್ಟಿಯಲ್ಲಿ ಭಾಗವಹಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಬೆಂಗಳೂರು ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಇದ್ದಾರೆ ಎಂದು ಪೊಲೀಸರು ಆಕೆಯ ಫೋಟೋ ಬಿಡುಗಡೆ ಮಾಡಿದ್ದರೂ, ಇದನ್ನೊಪ್ಪಿಕೊಳ್ಳದೇ ನಟಿ ಹೇಮಾ ತಾನು ಆಂಧ್ರದಲ್ಲಿದ್ದೇನೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದರು. ಆದರೆ, ಬೆಂಗಳೂರಿನಲ್ಲಿ ನಡೆದ ಪಾರ್ಟಿಯಲ್ಲಿ ನಾನು ಭಾಗವಹಿಸಿದ್ದೇನೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದರು. ಅಂದರೆ, ಈ ಹಿಂದೆ ನಟಿ ಹೇಮಾ ಸುಳ್ಳು ಹೇಳಿದ್ದಾರೆ ಎಂದು ಸಾಬೀತಾಗಿದೆ.
ಮೇ ತಿಂಗಳ 19ರ ಮಧ್ಯರಾತ್ರಿಯಿಂದ 20ರ ಬೆಳಗ್ಗಿನವರೆಗೂ ಸನ್ ಸೆಟ್ ಟು ಸನ್ ರೈಸ್ ಥೀಮ್ ಅಡಿಯಲ್ಲಿ ರೇವ್ ಮಾರ್ಟಿ ಮಾಡಲಾಗಿತ್ತು. ಈ ವೇಳೆ ನಟಿ ಹೇಮಾ ನಿಷೇಧಿತ MDMA ಮಾತ್ರೆ (ಡ್ರಗ್ಸ್) ಸೇವನೆ ಮಾಡಿದ್ದಾರೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಟಿ ಹೇಮಾ ಅವರನ್ನು ವಶಕ್ಕೆ ಪಡೆದು ರಕ್ತದ ಮಾದರಿ ಪರೀಕ್ಷೆ ಮಾಡಿದ್ದರು. ಇದರಲ್ಲಿ ಡ್ರಗ್ಸ್ ಸೇವನೆ ಮಾಡಿರುವ ಬಗ್ಗೆ ಪಾಸಿಟಿವ್ ಫಲಿತಾಂಶ ಬಂದಿತ್ತು. ನಂತರ, ಜೈಲಿಗೆ ಹೋದ ಹೇಮಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ನಟಿ ಹೇಮಾ
ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ನಟಿ ಹೇಮಾ, ತಾನು ಬೆಂಗಳೂರು ಪಾರ್ಟಿಗೆ ಹಾಜರಾಗಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಅದು ರೇವ್ ಪಾರ್ಟಿ ಅಲ್ಲ. ರೇವ್ ಪಾರ್ಟಿ ಎಂದರೆ ಏನು ಎಂದು ಹೇಮಾ ನಿರೂಪಕರನ್ನು ಪ್ರಶ್ನಿಸಿದ್ದಾರೆ. ಮಾದಕ ವಸ್ತು ಸೇವಿಸುತ್ತಾರೆ, ಬಟ್ಟೆ ಇಲ್ಲದೆ ಕುಣಿಯುತ್ತಾರೆ ಎಂದು ನಿರೂಪಕರು ಉತ್ತರಿಸಿದ್ದಾರೆ. ನಿಮ್ಮ ಅಕ್ಕ (ಹೇಮಾ) ಹಾಗೆ ಮಾಡುತ್ತಾರೆ ಎಂದು ನೀವು ನಂಬುತ್ತೀರಾ ಎಂದು ಹೇಮಾ ಪ್ರಶ್ನಿಸಿದ್ದಾರೆ.
ನಾನು ಶನಿವಾರ ನಡೆದ ಪಾರ್ಟಿಯಲ್ಲಿದ್ದೆ. ಭಾನುವಾರ ಏನಾಯಿತು ಎಂದು ನನಗೆ ತಿಳಿದಿಲ್ಲ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ವ್ಯಕ್ತಿ ನನ್ನ ಸಹೋದರನಂತೆ. ಅವನು ಕರೆದಾಗ ಹೋಗಿದ್ದೆ ಅಷ್ಟೇ. ನಾನು ಈವರೆಗೆ ರಕ್ತದ ಮಾದರಿಗಳನ್ನು ನೀಡಿಲ್ಲ. ವರದಿ ಪಾಸಿಟಿವ್ ಬಂದಿದೆ ಎಂದು ಒಂದು ಮಾಧ್ಯಮ ವಾಹಿನಿ ಪ್ರಚಾರ ಮಾಡಿದೆ. ನಾನು ಅವರನ್ನು ಪ್ರಶ್ನಿಸಿದಾಗ, ಹೇಮಾ ನಾಟಕ ಮಾಡುತ್ತಿದ್ದಾರೆ ಎಂದು ವರದಿ ಬಿತ್ತರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಟಿ ಹೇಮಾ
ಕೆಲವರು ನನ್ನನ್ನು ಸಾಂಪ್ರದಾಯಕಿ, ಸಂಪ್ರದಾಯಸ್ಥೆ ಎಂದು ಅಣಕಿಸಿದ್ದಾರೆ. ಆದರೆ, ನಾನು ಸಾಂಪ್ರದಾಯಿಕಳಲ್ಲ. ನನ್ನ ಜೀವನ ನನ್ನಿಷ್ಟ. ನಾನು ಎಲ್ಲಿಗಾದರೂ ಹೋಗುತ್ತೇನೆ. ಕೇಳುವುದಕ್ಕೆ ನೀವ್ಯಾರು? ನಿಮಗೆ ಏನು ಹಕ್ಕಿದೆ? ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಾಲಯವೇ ಹೇಳುತ್ತಿದೆ. ಆದರೆ ನ್ಯಾಯಾಲಯದ ವಿಷಯಗಳು ಬೇಗ ಇತ್ಯರ್ಥವಾಗುವುದಿಲ್ಲ. ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಮಾ ಹೇಳಿದ್ದಾರೆ.
Photo courtesy: Suman Tv