'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ಸಂಜು ಬಸಯ್ಯ ತಮ್ಮ ಪರಿಶ್ರಮದಿಂದ ಯಶಸ್ಸು ಕಂಡಿದ್ದು, ಇತ್ತೀಚೆಗೆ ತಮ್ಮ ಬಹುಕಾಲದ ಕನಸಾಗಿದ್ದ 'ಮಾರುತಿ ಸುಜುಕಿ XL6' ಕಾರನ್ನು ಖರೀದಿಸಿದ್ದಾರೆ. ಅವರು ತಮ್ಮ ಪತ್ನಿ ಪಲ್ಲವಿ ಹಾಗೂ ಪೋಷಕರ ಸಮ್ಮುಖದಲ್ಲಿ ಈ ಸಂತಸದ ಕ್ಷಣವನ್ನು ಆಚರಿಸಿಕೊಂಡಿದ್ದಾರೆ.
ಯಾವುದೇ ಗಾಡ್‌ಫಾದರ್ ಇಲ್ಲದೆ, ಉತ್ತರ ಕರ್ನಾಟಕದ ಗ್ರಾಮೀಣ ಭಾಗದಿಂದ ಬಂದು ಕೇವಲ ತಮ್ಮ ಪರಿಶ್ರಮದಿಂದಲೇ ಕನ್ನಡಿಗರ ಮನೆಮಾತಾದವರು ನಟ ಸಂಜು ಬಸಯ್ಯ. ಇವರ ಬದುಕಿಗೆ ದೊಡ್ಡ ತಿರುವು ನೀಡಿದ್ದು, 'ಜೀ ಕನ್ನಡ' ವಾಹಿನಿಯ ʻಕಾಮಿಡಿ ಕಿಲಾಡಿಗಳುʼ ರಿಯಾಲಿಟಿ ಶೋ. ತಮ್ಮ ದೈಹಿಕ ಸವಾಲುಗಳನ್ನು ಎಂದಿಗೂ ಕೀಳರಿಮೆಯಾಗಿ ನೋಡದೆ, ಅದನ್ನೇ ತಮ್ಮ ದೊಡ್ಡ ಶಕ್ತಿಯನ್ನಾಗಿ ಮಾಡಿಕೊಂಡ ಸಂಜು ಬಸಯ್ಯ, ಈಗ ಸಾಕಷ್ಟು ಬ್ಯುಸಿಯಾಗಿದ್ದಾರೆ. ತಮ್ಮ ಈ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿ ಇತ್ತೀಚೆಗೆ ಅವರು ದುಬಾರಿ ಬೆಲೆಯ ಹೊಸ ಕಾರೊಂದನ್ನು ಖರೀದಿಸಿ ತಮ್ಮ ಬದುಕಿನ ಮತ್ತೊಂದು ಕನಸನ್ನು ನನಸು ಮಾಡಿಕೊಂಡಿದ್ದಾರೆ.
25
ಪತ್ನಿ ಮತ್ತು ಪೋಷಕರ ಸಮ್ಮುಖದಲ್ಲಿ ಹೊಸ ಕಾರಿನ ಸಂಭ್ರಮ
ಸಂಜು ಬಸಯ್ಯ ಅವರ ವೃತ್ತಿಜೀವನದ ಯಶಸ್ಸಿನಷ್ಟೇ ಅವರ ಪ್ರೇಮಕಥೆಯೂ ರೋಚಕವಾಗಿದೆ. ತಮ್ಮ ಬಹುಕಾಲದ ಗೆಳತಿ ಪಲ್ಲವಿ ಅವರನ್ನು ಪ್ರೀತಿಸಿ ಮದುವೆಯಾದ ಅವರು, ಜೀ ಕನ್ನಡದ ʻಜೋಡಿ ನಂ 1 ಸೀಸನ್ 2ʼ ರಿಯಾಲಿಟಿ ಶೋ ಮೂಲಕ ಇಡೀ ಕರ್ನಾಟಕದ ನೆಚ್ಚಿನ ಜೋಡಿಯಾಗಿದ್ದರು. ಇತ್ತೀಚೆಗೆ ತಾವು ಖರೀದಿಸಿದ ಹೊಸ ಕಾರಿನ Delivery ಪಡೆಯುವ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಸಂಜು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಯಶಸ್ಸಿನ ಹಿಂದಿನ ಶಕ್ತಿಯಾಗಿರುವ ಪತ್ನಿ ಪಲ್ಲವಿ ಹಾಗೂ ತಂದೆ-ತಾಯಿಯೊಂದಿಗೆ ಹೊಸ ಕಾರಿನ ಎದುರು ನಿಂತು ಸಂಜು ಬಸಯ್ಯ ಸಂಭ್ರಮಿಸಿದ್ದಾರೆ.
35
ಸಂಜು ಬಸಯ್ಯ ಮನೆಗೆ ಬಂದ 'ಮಾರುತಿ ಸುಜುಕಿ XL6' ವಿಶೇಷತೆಗಳೇನು?
ದೊಡ್ಡ ಕುಟುಂಬಕ್ಕೆ ಸೂಕ್ತವಾದ, ಎಸ್‌ಯುವಿ ಲುಕ್ ನೀಡುವ ನೆಕ್ಸಾ (Nexa) ಶೋರೂಮ್‌ನ ಪ್ರೀಮಿಯಂ 6-ಸೀಟರ್ ಎಂಪಿವಿ ಕಾರಾದ 'ಮಾರುತಿ ಸುಜುಕಿ XL6' ಅನ್ನು ಸಂಜು ಬಸಯ್ಯ ಖರೀದಿಸಿದ್ದಾರೆ. ಈ ಕಾರು ಪವರ್‌ಫುಲ್ 1.5-ಲೀಟರ್ ಕೆ-ಸೀರೀಸ್ ಡ್ಯುಯಲ್ ಜೆಟ್ ಎಂಜಿನ್ ಹೊಂದಿದ್ದು, ಪೆಟ್ರೋಲ್‌ನಲ್ಲಿ 102 PS ಪವರ್ ಹಾಗೂ ಸಿಎನ್‌ಜಿ (CNG) ಆವೃತ್ತಿಯಲ್ಲಿ 87 PS ಪವರ್ ಉತ್ಪಾದಿಸುತ್ತದೆ. ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಈ ಕಾರು ಅತ್ಯಂತ ಸ್ಮೂತ್ ಚಾಲನಾ ಅನುಭವ ನೀಡುತ್ತದೆ.
ಮಾರುತಿ XL6 ತನ್ನ ಕ್ಲಾಸ್ ಲಕ್ಸುರಿ ಫೀಚರ್ಸ್‌ಗೆ ಹೆಸರುವಾಸಿಯಾಗಿದೆ. ಕಾರಿನ ಸೆಕೆಂಡ್ ರೋನಲ್ಲಿ ಅತ್ಯಂತ ಕಂಫರ್ಟಬಲ್ ಆದ ಲೆದರೆಟ್ ಕ್ಯಾಪ್ಟನ್ ಸೀಟ್‌ಗಳಿದ್ದು, ಸ್ಲೈಡ್ ಮತ್ತು ರಿಕ್ಲೈನ್ ಮಾಡಿಕೊಳ್ಳಬಹುದು. ಇದರೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ. ಮನರಂಜನೆಗಾಗಿ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ವ್ಯವಸ್ಥೆ ಇದೆ. ಇಷ್ಟೆಲ್ಲಾ ಸೌಕರ್ಯವಿದ್ದರೂ ಇದು ಪೆಟ್ರೋಲ್‌ನಲ್ಲಿ 20 km/l ಗಿಂತ ಹೆಚ್ಚು ಹಾಗೂ ಸಿಎನ್‌ಜಿಯಲ್ಲಿ ಬರೋಬ್ಬರಿ 26.32 km/kg ಮೈಲೇಜ್ ನೀಡುವ ಮೂಲಕ ಅತ್ಯಂತ ಆರ್ಥಿಕವಾಗಿದೆ.
55
ಸುರಕ್ಷತೆಗೆ ಮೊದಲ ಆದ್ಯತೆ ಮತ್ತು ಬೆಲೆ ವಿವರ
ಮಾರುತಿ ಸುಜುಕಿ ಸಂಸ್ಥೆಯು ಈ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಇದು ಹಾರ್ಟೆಕ್ಟ್ (Heartect) ಪ್ಲಾಟ್‌ಫಾರ್ಮ್ ಆಧಾರಿತವಾಗಿದ್ದು, ಅಪಘಾತದ ಸಮಯದಲ್ಲಿ ಪ್ರಯಾಣಿಕರನ್ನು ರಕ್ಷಿಸುತ್ತದೆ. ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್, ಎಬಿಎಸ್ ವಿತ್ ಇಬಿಡಿ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಹಾಗೂ ಸುಲಭ ಪಾರ್ಕಿಂಗ್‌ಗಾಗಿ 360-ಡಿಗ್ರಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಮಾರುತಿ XL6 ಕಾರಿನ ಎಕ್ಸ್ ಶೋರೂಮ್ ಬೆಲೆ ₹11.52 ಲಕ್ಷದಿಂದ ಆರಂಭವಾಗಿ ಟಾಪ್ ಮಾಡೆಲ್‌ಗೆ ₹14.48 ಲಕ್ಷದವರೆಗೆ ಇರಲಿದ್ದು, ಸಂಜು ಬಸಯ್ಯ ಅವರ ದೊಡ್ಡ ಕುಟುಂಬದ ಪ್ರಯಾಣಕ್ಕೆ ಇದು ಅತ್ಯಂತ ಸುರಕ್ಷಿತ ಹಾಗೂ ಐಷಾರಾಮಿ ಕಾರಾಗಿದೆ.