ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಮುಂದುವರಿದರೂ, ಈ ಹಿಂದೆ ದುಬಾರಿ ಬೆಲೆಗೆ ಖರೀದಿಸಿದ ತೈಲದಿಂದಾದ ನಷ್ಟವನ್ನು ತೈಲ ಕಂಪನಿಗಳು ಇನ್ನೂ ಸರಿದೂಗಿಸುತ್ತಿವೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಸಾಧ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಸುಳಿವು ನೀಡಿದ್ದಾರೆ. ಇಂಧನ ಬೆಲೆ ಇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಮುಂದಿನ ವಾರಗಳಲ್ಲೂ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಮುಂದುವರಿದರೆ, ಆಗ ನಿಮ್ಮ ಪ್ರಶ್ನೆ ನ್ಯಾಯಸಮ್ಮತವಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.
25
ತೈಲ ಕಂಪನಿಗಳಿಗೆ 74,781 ಕೋಟಿ ರೂಪಾಯಿ ನಷ್ಟ
ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿತ್ತು. ಜೂನ್ 30ರವರೆಗಿನ ಅವಧಿಯಲ್ಲಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಮಾರಾಟ ಮಾಡಿದ್ದವು. ಇದರಿಂದ ಕಂಪನಿಗಳಿಗೆ ಬರೋಬ್ಬರಿ 74,781 ಕೋಟಿ ರೂಪಾಯಿ ನಷ್ಟವಾಗಿದೆ. ಈಗ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಯಾಗಿದ್ದರೂ, ಕಂಪನಿಗಳು ಇನ್ನೂ ಸಂಕಷ್ಟದ ಸಮಯದಲ್ಲಿ ಖರೀದಿಸಿದ ದುಬಾರಿ ಬೆಲೆಯ ತೈಲವನ್ನೇ ಸಂಸ್ಕರಿಸುತ್ತಿವೆ ಎಂದು ಸಚಿವರು ಹೇಳಿದ್ದಾರೆ.
35
ಬೇರೆ ದೇಶಗಳಿಗೆ ಹೋಲಿಕೆ
ಎರಡು ತಿಂಗಳ ಹಿಂದೆ ಅಂದಿನ ಬೆಲೆಗೆ ಖರೀದಿಸಿದ ಕಚ್ಚಾ ತೈಲವನ್ನು ನಾವು ಇಂದು ಬಳಸುತ್ತಿದ್ದೇವೆ. ಮುಂದಿನ ಎರಡು-ಮೂರು ತಿಂಗಳು ತೈಲ ಬೆಲೆ ಇಳಿಕೆ ಮುಂದುವರಿದರೆ, ಆಗ ನೋಡೋಣ. ಆದರೆ ಸದ್ಯಕ್ಕೆ ಇದು ಕೇವಲ ಕಾಲ್ಪನಿಕ ಸನ್ನಿವೇಶ ಎಂದು ಪುರಿ ವಿವರಿಸಿದರು.
ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪೆಟ್ರೋಲ್ ಬೆಲೆ ಸುಮಾರು 20% ಮತ್ತು ಭಾರತದ ನೆರೆಯ ದೇಶಗಳಲ್ಲಿ ಸುಮಾರು 35% ಹೆಚ್ಚಾಗಿತ್ತು. ಆದರೆ ಭಾರತದಲ್ಲಿ ಕೇವಲ 5.58% ಮಾತ್ರ ಬೆಲೆ ಏರಿಕೆಯಾಗಿತ್ತು ಎಂದು ಸಚಿವರು ಹೇಳಿದ್ದಾರೆ.
ಕಳೆದ ನಾಲ್ಕು ತಿಂಗಳಲ್ಲಿ ದೇಶದ 1,07,000 ಪೆಟ್ರೋಲ್ ಪಂಪ್‌ಗಳಲ್ಲಿ ಒಂದೂ ಮುಚ್ಚಿಲ್ಲ ಅಥವಾ ಎಲ್ಲಿಯೂ ಇಂಧನದ ಕೊರತೆ ಉಂಟಾಗಿಲ್ಲ. ನಾವು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದೇವೆ ಎಂದು ಸರ್ಕಾರದ ನಡೆಯನ್ನು ಸಚಿವರು ಸಮರ್ಥಿಸಿಕೊಂಡರು.
55
ನಯಾರಾ ಪೆಟ್ರೋಲ್ ಬೆಲೆ ಇಳಿಕೆ
ಖಾಸಗಿ ತೈಲ ಕಂಪನಿ ನಯಾರಾ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿರುವ ಬಗ್ಗೆಯೂ ಸಚಿವರು ಮಾತನಾಡಿದರು. ಸಂಕಷ್ಟದ ಸಮಯದಲ್ಲಿ ನಯಾರಾ ಕಂಪನಿ ಲೀಟರ್‌ಗೆ ಐದು ರೂಪಾಯಿ ಹೆಚ್ಚಿಸಿತ್ತು. ಈಗ ಅವರು ಆ ಹೆಚ್ಚಳವನ್ನು ಹಿಂಪಡೆದಿದ್ದಾರೆ ಅಷ್ಟೇ. ಆದರೆ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಆ ಸಮಯದಲ್ಲಿ ಬೆಲೆ ಏರಿಸಿರಲಿಲ್ಲ ಎಂಬುದನ್ನು ನೆನಪಿಡಬೇಕು ಎಂದು ಪುರಿ ಸ್ಪಷ್ಟಪಡಿಸಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.