ಮೊದಲು ವಿದ್ಯಾನಗರದಲ್ಲಿ ಪೃಥ್ವಿ ಪ್ಯಾರಾಡೈಸ್ ಎಂಬ ಹೋಟೆಲ್ ಇತ್ತು. ಆದರೆ ಅದು ಟ್ರೈನ್ ರೆಸ್ಟೋರೆಂಟ್ ಆಗಿರಲಿಲ್ಲ. ಅಲ್ಲಿ ಪಾರ್ಕಿಂಗ್ ಸಮಸ್ಯೆಯಾಗಿದ್ದರಿಂದ ಆ ರೆಸ್ಟೋರೆಂಟ್‌ನ್ನು ನ್ಯಾಯಾಲಯದ ಸಂಕೀರ್ಣದ ಬಳಿ ಇರುವ ಕಟ್ಟಡಕ್ಕೆ ಸ್ಥಳಾಂತರಿಸಲು ಮಾಲೀಕರು ನಿರ್ಧರಿಸಿದರು. ಇದರ ಜೊತೆಗೆ ಗ್ರಾಹಕರನ್ನು ತಮ್ಮ ಹೋಟೆಲ್‌ನತ್ತ ಸೆಳೆಯಬೇಕು. ರಾಜ್ಯ ಹಾಗೂ ದೇಶದ ಗಮನ ಸೆಳೆಯಬೇಕೆಂಬ ಉದ್ದೇಶದಿಂದ ಟ್ರೈನ್ ರೆಸ್ಟೋರೆಂಟ್‌ನ್ನಾಗಿ ಮಾಡಿ ಸ್ಥಳಾಂತರಿಸಿರುವುದು ಇದರ ವಿಶೇಷ.
ಉತ್ತರ ಭಾರತ ಶೈಲಿಯ ಊಟದ ವ್ಯವಸ್ಥೆ ಇರುವ ಈ ಹೋಟೆಲ್‌ನಲ್ಲಿ ಆರ್ಡರ್ ತೆಗೆದುಕೊಳ್ಳಲು ಮಾತ್ರ ‘ಕ್ಯಾಪ್ಟನ್’ ಬರುತ್ತಾರೆ. ಇವರು ಗ್ರಾಹಕರಿಗೆ ಏನು ಬೇಕು ಎಂದು ಕೇಳಿ ತೆಗೆದುಕೊಳ್ಳುತ್ತಾರೆ. ಬಳಿಕ ಅದನ್ನು ಕಂಪ್ಯೂಟರ್‌ನಲ್ಲಿ ಫೀಡ್ ಮಾಡುತ್ತಾರೆ. ಅದರ ಪ್ರೀಂಟ್ ನೇರವಾಗಿ ಅಡುಗೆ ಮನೆಗೆ ಹೋಗುತ್ತದೆ. ಅಲ್ಲಿ ಪ್ರಿಂಟ್ ತೆಗೆದುಕೊಂಡು ಯಾವ ಟೇಬಲ್‌ನ ಗ್ರಾಹಕರು ಯಾವ ಬಗೆಯ ಉಪಾಹಾರ, ಊಟದ ಆರ್ಡರ್ ಮಾಡಿರುತ್ತಾರೋ ಅವರಿಗೆ ಟ್ರೈನ್ ಮೂಲಕವೇ ಸರಬರಾಜು ಮಾಡಲಾಗುತ್ತದೆ.
ಈ ಹೋಟೆಲ್‌ನಲ್ಲಿ 6 ಟೇಬಲ್‌ಗಳಿವೆ. ಪ್ರತಿ ಟೇಬಲ್‌ನಲ್ಲಿ ಆರು ಜನ ಕುಳಿತುಕೊಳ್ಳಬಹುದಾಗಿದೆ. ಮುಂಬೈ, ದೆಹಲಿ, ಹೈದ್ರಾಬಾದ್, ಪುಣೆ ಹೀಗೆ ನಾಲ್ಕು ಟೇಬಲ್‌ಗೆ ಪ್ರಮುಖ ನಗರಗಳ ರೈಲ್ವೆ ನಿಲ್ದಾಣಗಳ ಹೆಸರಿಡಲಾಗಿದೆ. ಇನ್ನೆರಡು ಟೆಬಲ್‌ಗಳಿಗೆ ಹೆಸರಿಟ್ಟಿಲ್ಲ. ಅವುಗಳನ್ನು ಶೀಘ್ರದಲ್ಲೇ ಇಡಲಾಗುವುದು. ಇದರೊಂದಿಗೆ ಒಂದು ಮುಖ್ಯ ನಿಲ್ದಾಣವೆಂದು ಘೋಷಿಸಿ ಅದಕ್ಕೆ ಹುಬ್ಬಳ್ಳಿಯ ‘ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣ’ ಎಂದು ಹೆಸರಿಡಲಾಗಿದೆ. ಅಡುಗೆ ಮನೆಯಿಂದಲೇ ಎಲ್ಲ ಟೇಬಲ್‌ಗಳಿಗೂ ಊಟ ಸರಬರಾಜು ಮಾಡಲು ರೈಲು ಹಳಿಗಳನ್ನು ಅಳವಡಿಸಲಾಗಿದೆ. ಅಲ್ಲಿಂದಲೇ ನೇರವಾಗಿ ಟೇಬಲ್‌ಗಳಿಗೆ ಸರಬರಾಜು ಮಾಡಲಾಗುತ್ತದೆ.
ಊಟದ ಸರಬರಾಜುವಿಗೆ ಎರಡು ಸ್ಟೀಂ ಎಂಜಿನ್ ಮಾದರಿಯ ಟ್ರೈನ್‌ಗಳಿದ್ದರೆ, ಒಂದು ಮೆಟ್ರೋ ಮಾದರಿಯ ಟ್ರೈನ್ ಮೂಲಕ ಸರಬರಾಜು ಮಾಡಲಾಗುತ್ತದೆ. ಪ್ರತಿ ಟ್ರೈನ್‌ಗೂ ಎರಡೆರಡು ಬೋಗಿಗಳಿವೆ. ಹೆಚ್ಚುವರಿಯಾಗಿ ಒಂದು ಬೋಗಿ ಇರುತ್ತದೆ. ಈ ಬೋಗಿಗಳ ಮೂಲಕ ಊಟದ ಸರಬರಾಜು ಮಾಡಲಾಗುತ್ತದೆ. ಮೂರು ರೈಲುಗಳು ವಿದ್ಯುತ್‌ಚಾಲಿತ ರೈಲುಗಳಾಗಿವೆ. ಒಂದೊಂದು ಟ್ರೈನ್‌ಗೆ 1.5 ಲಕ್ಷಕ್ಕೂ ಅಧಿಕ ಖರ್ಚು ಮಾಡಲಾಗಿದೆ. ಈ ವ್ಯವಸ್ಥೆಯ ಟೇಬಲ್, ಟ್ರೈನ್, ಹಳಿ ಅಳವಡಿಕೆ ಸೇರಿದಂತೆ ವಿವಿಧ ವ್ಯವಸ್ಥೆಗೆ ಸುಮಾರು 15 ಲಕ್ಷಕ್ಕೂ ಅಧಿಕ ಖರ್ಚಾಗಿದೆಯಂತೆ.
ಗ್ರಾಹಕರ ಟೇಬಲ್‌ಗಳಿಗೆ ನೇರವಾಗಿ ಆಹಾರ ಬಂದು ತಲುಪುವುದು ಇಲ್ಲಿ ಗ್ರಾಹಕರ ಆಕರ್ಷಣೆಗೆ ಪಾತ್ರವಾಗಿದೆ. ಮಕ್ಕಳಿಗಂತೂ ಈ ರೈಲ್ವೆ ರೆಸ್ಟೋರೆಂಟ್ ಖುಷಿ ತಂದುಕೊಡುತ್ತಿದೆಯಂತೆ. ಇಂತಹ ವ್ಯವಸ್ಥೆ ಯಾವ ಹೊಟೇಲ್‌ಗಳಲ್ಲಿ ಇಲ್ಲದಿರುವುದು ಹುಬ್ಬಳ್ಳಿಯ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಈವರೆಗೆ ದೇಶದ ನಾಲ್ಕು ಕಡೆ ಇಂಥ ಟ್ರೈನ್ ರೆಸ್ಟೋರೆಂಟ್‌ಗಳಿದ್ದವು. ಹುಬ್ಬಳ್ಳಿಯ ಈ ಟ್ರೈನ್ ರೆಸ್ಟೋರೆಂಟ್ ಕರ್ನಾಟಕದ ಮೊದಲ ರೆಸ್ಟೋರೆಂಟ್ ಆಗಿರುವುದು ವಿಶೇಷವಾಗಿದೆ. ಇಲ್ಲಿನ ವಿಶೇಷತೆ ಅರಿತು ದೂರದ ಊರುಗಳಿಂದ ಗ್ರಾಹಕರು ಆಗಮಿಸಿ ಊಟದ ರುಚಿ ಸವಿಯಲು ಬರುತ್ತಿದ್ದಾರೆ ಎಂದು ಹೋಟೆಲ್ ಸಿಬ್ಬಂದಿ ತಿಳಿಸುತ್ತಾರೆ.
ಟ್ರೈನ್ ಹೋಟೆಲ್ ಆಗಿರುವ ಪೃಥ್ವಿ ಪ್ಯಾರಾಡೈಸ್ ಗ್ರಾಹಕರನ್ನು ಸೆಳೆಯುತ್ತಿರುವುದರ ಜತೆಗೆ ಹೋಟೆಲ್ ಉದ್ಯಮಕ್ಕೆ ಒಂದು ಖದರ್ ನೀಡಿದೆ. ಹುಬ್ಬಳ್ಳಿ ಹೆಸರು ಎಲ್ಲೆಡೆ ಖ್ಯಾತಿಗೊಳಿಸಬೇಕು. ಹೋಟೆಲ್ ಉದ್ಯಮದಲ್ಲಿ ಉತ್ತಮ ಹೆಸರು ಮಾಡಬೇಕೆಂದು ಈ ಟ್ರೈನ್ ರೆಸ್ಟೋರೆಂಟ್ ತೆರೆದಿದ್ದೇವೆ. ಗ್ರಾಹಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಬಂದು ಊಟ ಸವಿಯುತ್ತಿದ್ದಾರೆ ಎಂದು ಹೋಟೆಲ್ ಮಾಲೀಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.