
ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಚಿನ್ನ ಕಳ್ಳಸಾಗಣೆ ಕೂಡ ಕಮ್ಮಿ ಆಗುತ್ತಿಲ್ಲ. ಆದರೆ ವಿದೇಶದಿಂದ ಭಾರತಕ್ಕೆ ಬರುತ್ತಿರುವ ಪ್ರಯಾಣಿಕರಿಗೆ ಮಾತ್ರ ಈಗ ಚಿನ್ನದ ಬೆಲೆ ಏರಿಕೆಯೇ ಕಂಟಕವಾಗಿ ಪರಿಣಮಿಸಿದೆ. ಹಳೆಯ ಕಸ್ಟಮ್ಸ್ ನಿಯಮಗಳಿಂದ ದಂಡ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 2016ರಲ್ಲಿ ಕೊನೆಯದಾಗಿ ನಿಯಮ ಬದಲಿಸಲಾಗಿತ್ತು. ಅದಾದ ನಂತರ ಈವರೆಗೆ ಯಾವುದೇ ನಿಯಮವನ್ನು ಬದಲಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಹಳೆಯ ಕಸ್ಟಮ್ಸ್ ನಿಯಮಗಳನ್ನು ಬದಲಾಯಿಸುವಂತೆ ಯುಎಇಯಲ್ಲಿರುವ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಭಾರತೀಯ ವಿಮಾನ ನಿಲ್ದಾಣಗಳಲ್ಲಿ ನಡೆಯುತ್ತಿರುವ ಕಿರುಕುಳ ಮತ್ತು ಗೊಂದಲಗಳನ್ನು ಉಲ್ಲೇಖಿಸಿ, ಯುಎಇ ಸೇರಿ ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಚಿನ್ನಾಭರಣಗಳ ಮೇಲಿನ ಹಳೆಯ ಕಸ್ಟಮ್ಸ್ ಸುಂಕ ನಿಯಮಗಳನ್ನು ತಿದ್ದುಪಡಿ ಮಾಡಿ ನವೀಕರಿಸಲು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವೈಯಕ್ತಿಕ ಚಿನ್ನಾಭರಣಗಳನ್ನು ಹೊತ್ತೊಯ್ಯುವ ನಿಜವಾದ ಪ್ರಯಾಣಿಕರಿಗೆ ಕಿರುಕುಳ ನೀಡದಂತೆ ದೆಹಲಿ ಹೈಕೋರ್ಟ್ ನೀಡಿರುವ ನಿರ್ದೇಶನಗಳಿದ್ದರೂ, ಎನ್‌ಆರ್‌ಐ ಸಮುದಾಯವು ನಿರಂತರವಾಗಿ ತೊಂದರೆಗಳನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಶಾರ್ಜಾದ ಭಾರತೀಯ ಸಂಘವು ಈ ವಿಚಾರದಲ್ಲಿ ಧ್ವನಿಯೆತ್ತಿದೆ.
ಪ್ರಸ್ತುತ ಕಸ್ಟಮ್ಸ್ ನಿಯಮಗಳ ಪ್ರಕಾರ, ಮಹಿಳಾ ಪ್ರಯಾಣಿಕರು ಗರಿಷ್ಠ 40 ಗ್ರಾಂ (₹1 ಲಕ್ಷ ಮೌಲ್ಯ) ಹಾಗೂ ಪುರುಷರು ಗರಿಷ್ಠ 20 ಗ್ರಾಂ (₹50 ಸಾವಿರ ಮೌಲ್ಯ) ಚಿನ್ನಾಭರಣಗಳನ್ನು ಸುಂಕವಿಲ್ಲದೆ ಕೊಂಡೊಯ್ಯಲು ಅವಕಾಶವಿದೆ. ಈ ಮಿತಿಯನ್ನು ಮೀರುವ ಚಿನ್ನದ ಮೇಲೆ ಕಡ್ಡಾಯವಾಗಿ ಕಸ್ಟಮ್ಸ್ ಸುಂಕ ವಿಧಿಸಲಾಗುತ್ತದೆ. ದಂಡ ತಪ್ಪಿಸಲು ಪ್ರಯಾಣಿಕರು ಚಿನ್ನ ಖರೀದಿಸಿದ ಬಿಲ್‌ಗಳನ್ನು ತೋರಿಸಬೇಕಾಗಿದೆ ಹಾಗೂ ಹೆಚ್ಚುವರಿ ಚಿನ್ನವನ್ನು ‘ರೆಡ್ ಚಾನೆಲ್’ ಮೂಲಕ ಘೋಷಿಸಬೇಕಾಗಿದೆ.
ಆದರೆ 2016ರಲ್ಲಿ ಈ ನಿಯಮವನ್ನು ಕೊನೆಯ ಬಾರಿ ನವೀಕರಿಸಿದಾಗ, ಚಿನ್ನದ ಬೆಲೆ ಪ್ರತಿ ಗ್ರಾಂಗೆ ಕೇವಲ ₹2,500 ಆಗಿತ್ತು. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,180 ಕ್ಕಿಂತ ಹೆಚ್ಚಾಗಿದೆ. ಕೆಲ ಸಂದರ್ಭಗಳಲ್ಲಿ ಅದು ₹10,000 ಮೀರಿದಂತೆಯೂ ಇದೆ. ಹೀಗಾಗಿ ಹಳೆಯ ಮೌಲ್ಯಮಿತಿಗಳು ಇಂದಿನ ಮಾರುಕಟ್ಟೆ ದರಗಳಿಗೆ ಹೊಂದಿಕೆಯಾಗುತ್ತಿಲ್ಲ. ಇದರ ಪರಿಣಾಮವಾಗಿ, ನಿಜವಾದ ಪ್ರಯಾಣಿಕರಿಗೂ ಕಸ್ಟಮ್ಸ್ ಚೆಕ್‌ಪೋಸ್ಟ್‌ಗಳಲ್ಲಿ ಅನಗತ್ಯ ವಿವಾದಗಳು, ಕಿರುಕುಳ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ.
ಇತ್ತೀಚಿನ ಕೆಲವು ಘಟನೆಗಳು ಈ ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸಿವೆ. ದುಬೈ ಆಧಾರಿತ ಉದ್ಯಮಿ ವಾಸು ಶ್ರಾಫ್, ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈಯಕ್ತಿಕ ರೋಲೆಕ್ಸ್ ಕೈಗಡಿಯಾರದ ಕಾರಣಕ್ಕೆ ಕಸ್ಟಮ್ಸ್ ಅಧಿಕಾರಿಗಳಿಂದ ಕಿರುಕುಳ ಅನುಭವಿಸಿರುವುದಾಗಿ ದೂರಿದ್ದರು.
ಅದೇ ರೀತಿ, ಶಾರ್ಜಾದ ಭಾರತೀಯ ಸಂಘದ ಉಪಾಧ್ಯಕ್ಷ ಟಿ.ಕೆ. ಪ್ರತೀಪ್ ಕೂಡ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೊಂದರೆ ಅನುಭವಿಸಿದ ನಂತರ ಈ ವಿಚಾರವನ್ನು ಗಂಭೀರವಾಗಿ ಖಂಡಿಸಿದ್ದಾರೆ. ತಮ್ಮ ಸೊಸೆಯ ಮದುವೆಗೆ ಉಡುಗೊರೆಯಾಗಿ ತಂದಿದ್ದ ಎರಡು ಚಿನ್ನದ ಬಳೆಗಳ ಕುರಿತು ಕಸ್ಟಮ್ಸ್ ಅಧಿಕಾರಿಗಳು ₹17,000 ಬೇಡಿಕೆ ಇಟ್ಟು, ನಂತರ ನಿಯಮದ ಪ್ರಕಾರ ಸುಂಕವನ್ನು ಲೆಕ್ಕ ಹಾಕಿ ಅದನ್ನು ₹1.07 ಲಕ್ಷ ವರೆಗೆ ಏರಿಸಿದ ಘಟನೆ ಅವರು ವಿವರಿಸಿದ್ದಾರೆ.
ನಾನು ನಿಜವಾದ ಪ್ರಯಾಣಿಕನಾಗಿದ್ದರೂ ಅಧಿಕಾರಿಗಳ ವರ್ತನೆಯಿಂದ ನನ್ನನ್ನು ಕಳ್ಳಸಾಗಾಣಿಕಾರನಂತೆ ನೋಡಿದ ಅನುಭವವಾಯಿತು. ನಿಗದಿತ ಮೌಲ್ಯ ಮಿತಿಯ ಪ್ರಕಾರ 20 ಗ್ರಾಂ ಚಿನ್ನವನ್ನು ಸುಲಭವಾಗಿ ಸಾಗಿಸಬಹುದಾಗಿದ್ದರೂ, ಅವರು ಪ್ರಸ್ತುತ ಮಾರುಕಟ್ಟೆ ದರಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಸುಂಕ ವಿಧಿಸಿದರು ಎಂದು ಪ್ರತೀಪ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಶಾರ್ಜಾದ ಭಾರತೀಯ ಸಂಘದ ಅಧ್ಯಕ್ಷ ನಿಸ್ಸಾರ್ ತಲಂಗರ ಅವರು, “ಪ್ರಸ್ತುತ ಮಾರುಕಟ್ಟೆ ಬೆಲೆಯ ಏರಿಳಿತಗಳನ್ನು ಲೆಕ್ಕಿಸದೆ, ನಿರ್ದಿಷ್ಟ ತೂಕದ ಚಿನ್ನಾಭರಣಗಳನ್ನು ಸಾಗಿಸಲು ಅನುಮತಿಸುವ ರೀತಿಯ ನಿಯಮ ಜಾರಿಗೆ ಬರಬೇಕು. ಹೀಗೆ ಮಾಡಿದರೆ ಪ್ರಯಾಣಿಕರಿಗೆ ಕಿರುಕುಳ, ತೊಂದರೆ ಕಡಿಮೆಯಾಗುತ್ತದೆ ಮತ್ತು ಕಸ್ಟಮ್ಸ್ ಅಧಿಕಾರಿಗಳ ಮೇಲಿನ ಅನಗತ್ಯ ಹೊರೆ ಕೂಡ ತಗ್ಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವರು ಮುಂದುವರಿದು, “ಹಳೆಯ ನಿಯಮ ಮತ್ತು ಇಂದಿನ ಮಾರುಕಟ್ಟೆ ವಾಸ್ತವಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಅನಗತ್ಯ ವಿವಾದಗಳು, ಭ್ರಷ್ಟಾಚಾರದ ಸಂದರ್ಭಗಳು ಉಂಟಾಗುತ್ತಿವೆ. ಚಿನ್ನಾಭರಣ ಸಾಗಣೆಗಾಗಿ ತೂಕ ಆಧಾರಿತ ವ್ಯವಸ್ಥೆ ಪರಿಹಾರವಾಗಬಹುದು” ಎಂದು ತಿಳಿಸಿದ್ದಾರೆ.
ವಾಸ್ತವದಲ್ಲಿ, 2016ರ ನಂತರ ಚಿನ್ನದ ದರವು ಮೂರು ಪಟ್ಟು ಹೆಚ್ಚಾಗಿದ್ದರೂ, ಮಿತಿಗಳನ್ನು ಪರಿಷ್ಕರಿಸಲಾಗಿಲ್ಲ. ಇದರಿಂದ ಎನ್‌ಆರ್‌ಐ ಸಮುದಾಯವು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರವು ನಿಯಮವನ್ನು ತಕ್ಷಣ ನವೀಕರಿಸಬೇಕೆಂದು ಒತ್ತಾಯಿಸುತ್ತಿದೆ. ಮೌಲ್ಯ ಮಿತಿ ತೆಗೆದುಹಾಕಿ, ತೂಕ ಆಧಾರಿತ ನಿಯಮ ಜಾರಿಗೆ ತಂದರೆ ನಿಜವಾದ ಪ್ರಯಾಣಿಕರಿಗೆ ತೊಂದರೆ ಕಡಿಮೆಯಾಗುತ್ತದೆ, ಅಧಿಕಾರಿಗಳಿಗೆ ಕೆಲಸ ಸುಲಭವಾಗುತ್ತದೆ ಮತ್ತು ಭ್ರಷ್ಟಾಚಾರಕ್ಕೂ ಅಡ್ಡ ಬೀಳುತ್ತದೆ ಎಂಬ ಅಭಿಪ್ರಾಯ ಮುಂದಿಟ್ಟಿದೆ.