ಚಿನ್ನದ ಮೇಲೆ ಹೂಡಿಕೆ ಮಾಡಲು ಹೆಚ್ಚಿನವರು ಆಭರಣ, ಬಿಸ್ಕೆಟ್ ಅಥವಾ ನಾಣ್ಯಗಳನ್ನು ಖರೀದಿಸುತ್ತಾರೆ. ಆದರೆ, ಈಗ ಇವನ್ನು ಖರೀದಿಸದೆಯೇ ಚಿನ್ನದಲ್ಲಿ ಹೂಡಿಕೆ ಮಾಡುವ ಅವಕಾಶವಿದೆ. ಅದೇ ಗೋಲ್ಡ್ ಇಟಿಎಫ್ (Gold Exchange Traded Fund). ಇದೊಂದು ರೀತಿಯ ಮ್ಯೂಚುವಲ್ ಫಂಡ್. ಈ ಫಂಡ್, ನಾವು ಹೂಡಿದ ಹಣದಿಂದ ನಿಜವಾದ ಚಿನ್ನವನ್ನು ಖರೀದಿಸಿ ಸುರಕ್ಷಿತವಾಗಿಡುತ್ತದೆ.
ಹೂಡಿಕೆದಾರರು ಡಿಮ್ಯಾಟ್ ಖಾತೆ ಮೂಲಕ ಈ ಫಂಡ್ ಯೂನಿಟ್‌ಗಳನ್ನು ಷೇರು ಮಾರುಕಟ್ಟೆಯಲ್ಲಿ ಖರೀದಿಸಬಹುದು. ಚಿನ್ನದ ಬೆಲೆ ಏರಿದರೆ, ಈ ಯೂನಿಟ್‌ಗಳ ಮೌಲ್ಯವೂ ಹೆಚ್ಚುತ್ತದೆ. ಅಂದರೆ, ಕೈಯಲ್ಲಿ ಚಿನ್ನ ಇಲ್ಲದಿದ್ದರೂ, ಚಿನ್ನದ ಬೆಲೆ ಏರಿಕೆಯ ಲಾಭವನ್ನು ಪಡೆಯಬಹುದು. ಇತ್ತೀಚೆಗೆ, ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದಾಗಿ ಭಾರತೀಯರು ಗೋಲ್ಡ್ ಇಟಿಎಫ್‌ಗಳತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.