ಬೆಂಗಳೂರು ಅಭಿವೃದ್ಧಿಗಾಗಿ ಪ್ರತಿದಿನ ಸುಮಾರು 100 ಕೋಟಿ ರೂ ಖರ್ಚು ಮಾಡಲಾಗುತ್ತದೆ. ರಾಜ್ಯ ಸರ್ಕಾರ ಮತ್ತು ಹಲವು ಸಾರ್ವಜನಿಕ ಸಂಸ್ಥೆಗಳು ಈ ಹಣವನ್ನು ಖರ್ಚು ಮಾಡುತ್ತಿದ್ದರೂ, ವ್ಯವಸ್ಥಿತ ಯೋಜನೆ ಮತ್ತು ಪಾರದರ್ಶಕತೆಯ ಕೊರತೆಯಿಂದಾಗಿ ರಸ್ತೆಗುಂಡಿ, ಟ್ರಾಫಿಕ್‌ನಂತಹ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.
ಸಿಲಿಕಾನ್ ಸಿಟಿ, ದೇಶದ ಐಟಿ ಕೇಂದ್ರ ಎಂದ ಕರೆಸಿಕೊಳ್ಳುವ ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುತ್ತವೆ. ಈ ಎಲ್ಲದರ ನಡುವೆ ರಸ್ತೆಗುಂಡಿ, ಟ್ರಾಫಿಕ್, ಕುಡಿಯುವ ನೀರಿನ ಅಭಾವದಂತಹ ಸಮಸ್ಯೆಗಳು ಬೆಂಗಳೂರು ನಗರಕ್ಕೆ ಕಳಂಕವನ್ನುಂಟು ಮಾಡುತ್ತಿರುತ್ತವೆ. ವರದಿಗಳ ಪ್ರಕಾರ, ಬೆಂಗಳೂರು ನಗರಕ್ಕೆ ಪ್ರತಿದಿನ ಬರೋಬ್ಬರಿ 100 ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಹಾಗಾದ್ರೆ ಈ ಹಣವೆಲ್ಲಾ ಎಲ್ಲಿ ಹೋಗುತ್ತದೆ?
25
38,455 ಕೋಟಿ ರೂಪಾಯಿ ಖರ್ಚು
ಟೈಮ್ಸ್ ಆಫ್ ಇಂಡಿಯಾ, ಜನಾಗ್ರಹ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ, ನಗರಕ್ಕೆ ದಿನಕ್ಕೆ ಅಂದಾಜು 100 ಕೋಟಿ ರೂ. ಖರ್ಚು ಮಾಡುತ್ತೆ ಎಂದು ಹೇಳಿದೆ. ಈ ವರದಿ ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ ನಗರಕ್ಕೆ ಒಟ್ಟು 38,455 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ರಾಜ್ಯ ಸರ್ಕಾರ ಮತ್ತು ಹಲವು ಪಬ್ಲಿಕ್ ಏಜೆನ್ಸಿಗಳು ಜಂಟಿಯಾಗಿ ಈ ಹಣವನ್ನು ಖರ್ಚು ಮಾಡುತ್ತವೆ. ಅಭಿವೃದ್ಧಿಗಾಗಿ ದಿನಕ್ಕೆ 100 ಕೋಟಿ ಖರ್ಚು ಮಾಡುತ್ತಿದ್ರೂ ನಗರದಲ್ಲಿ ರಸ್ತೆ ಗುಂಡಿಗಳು, ಮಳೆ ಬಂದಾಗ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವುದು, ರಾಜಕಾಲುವೆ ನೀರು ಹೊರಕ್ಕೆ ಬರೋದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಬೆಂಗಳೂರು ಹೊಂದಿದೆ.
35
ಯಾರಿಂದ ಎಷ್ಟು ಖರ್ಚು?
ಬೆಂಗಳೂರಿನ ಒಟ್ಟು ಖರ್ಚಿನಲ್ಲಿ ಮಹಾನಗರ ಪಾಲಿಕೆ ಶೇ.20 ರಷ್ಟು ಮಾತ್ರ ಭರಿಸುತ್ತದೆ. ಇನ್ನುಳಿದ ಶೇ.80 ರಷ್ಟು ಹಣವನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮದಂತಹ ಹಲವಾರು ಸಂಸ್ಥೆಗಳು ನಿರ್ವಹಿಸುತ್ತವೆ. ಆದ್ರೆ ಈ ಸಂಸ್ಥೆಗಳು ನೀಡುವ ಸೇವೆಗಳು ದೋಷಪೂರಿತವಾಗಿವೆ ಎಂದು ಬೆಂಗಳೂರಿನ ಜನರು ಆರೋಪಿಸುತ್ತಾರೆ.
ಇಷ್ಟು ದೊಡ್ಡಮೊತ್ತ ಅಭಿವೃದ್ಧಿಗಾಗಿ ಖರ್ಚು ಆಗ್ತಿದ್ರೂ ನಗರದ ಪರಿಸ್ಥಿತಿ ಸುಧಾರಿಸುತ್ತಿಲ್ಲ ಯಾಕೆ ಎಂಬುವುದಕ್ಕೆ ತಜ್ಞರು ಮೂರು ಪ್ರಮುಖ ಕಾರಣಗಳನ್ನು ನೀಡುತ್ತಾರೆ.
ಕಾರಣ 1: ಹಣವು ವಿವಿಧ ಏಜೆನ್ಸಿಗಳಲ್ಲಿ ಹಂಚಿಕೊಂಡಿದ್ದು, ವ್ಯವಸ್ಥಿತ ಖರ್ಚನ್ನು ತಡೆಯುತ್ತದೆ. ಹಾಗೆಯೇ ಈ ಹಣದ ನಿರ್ವಹಣೆ ಮತ್ತು ಖರ್ಚುಗಳ ಲೆಕ್ಕವನ್ನಿಡಲು ಕೇಂದ್ರೀಕೃತ ವ್ಯವಸ್ಥೆ ಇರಬೇಕು.
ಅನೇಕ ಸಂಸ್ಥೆಗಳು ಖರ್ಚಿನ ವಿವರಗಳನ್ನು ಸಾರ್ವಜನಿಕಗೊಳಿಸಲ್ಲ. ಇದು ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ ಎಂದು ತಜ್ಞರು ಬೇಸರ ವ್ಯಕ್ತಪಡಿಸುತ್ತಾರೆ.
ಏಜೆನ್ಸಿಗಳು ಯಾವುದೇ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡದಿರೋದು ನಗರದಲ್ಲಿನ ಸಮಸ್ಯೆಗಳಿಗೆ ಕಾರಣವಾಗಿದೆ. ವ್ಯವಸ್ಥೆಯು ದುರ್ಬಲವಾಗಿರೋದರಿಂದ ಪ್ರತಿದಿನ ₹100 ಕೋಟಿ ಖರ್ಚು ಮಾಡಿದರೂ, ಸಾರ್ವಜನಿಕರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.