ಗ್ರಾಹಕರಿಗೆ ಸೈಲೆಂಟ್‌ ಆಗಿ ಶಾಕ್ ನೀಡಿದ ಏರ್‌ಟೆಲ್: ಅತ್ಯಂತ ಜನಪ್ರಿಯ ಮೊಬೈಲ್‌ ರಿಚಾರ್ಜ್‌ ಪ್ಲಾನ್ ರದ್ದು

Published : Jul 17, 2026, 10:13 PM IST

ಭಾರ್ತಿ ಏರ್‌ಟೆಲ್ ತನ್ನ ಜನಪ್ರಿಯ ಮತ್ತು ಕೈಗೆಟುಕುವ ದರದ ರೂ. 549 ಪೋಸ್ಟ್‌ಪೇಯ್ಡ್ ಪ್ಲಾನ್ ಅನ್ನು ಸದ್ದಿಲ್ಲದೆ ಸ್ಥಗಿತಗೊಳಿಸಿದೆ. ಈ ನಿರ್ಧಾರದಿಂದಾಗಿ, ಕಡಿಮೆ ವೆಚ್ಚದಲ್ಲಿ ಸೇವೆ ಪಡೆಯುತ್ತಿದ್ದ ಗ್ರಾಹಕರು ಈಗ ದುಬಾರಿ ಪ್ಲಾನ್‌ಗಳಿಗೆ ಅಪ್‌ಗ್ರೇಡ್ ಆಗುವುದು ಅನಿವಾರ್ಯವಾಗಿದೆ.

PREV
16
ಜನಪ್ರಿಯ ಮೊಬೈಲ್‌ ರಿಚಾರ್ಜ್‌ ಪ್ಲ್ಯಾನ್‌ ರದ್ದು

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಭಾರಿ ಶಾಕ್‌ ನೀಡಿದೆ. ತನ್ನ ಪೋರ್ಟ್‌ಫೋಲಿಯೊದಿಂದ ಅತ್ಯಂತ ಜನಪ್ರಿಯ ಹಾಗೂ ಕೈಗೆಟುಕುವ ದರದ ಪೋಸ್ಟ್‌ಪೇಯ್ಡ್ ಪ್ಲಾನ್‌ ಒಂದನ್ನು ಕಂಪನಿ ಸದ್ದಿಲ್ಲದೆ ಸ್ಥಗಿತಗೊಳಿಸಿದೆ. 2026ರ ಟ್ಯಾರಿಫ್ ದರ ಹೆಚ್ಚಳದ ಭಾಗವಾಗಿ ಏರ್‌ಟೆಲ್ ಈ ಕ್ರಮ ಕೈಗೊಂಡಿದ್ದು, ಇನ್ಮುಂದೆ ವೈಯಕ್ತಿಕ ವಿಭಾಗದಲ್ಲಿ ಈ ಪ್ಲಾನ್ ಲಭ್ಯವಿರುವುದಿಲ್ಲ. ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಪೋಸ್ಟ್‌ಪೇಯ್ಡ್ ಸೇವೆ ಪಡೆಯುತ್ತಿದ್ದ ಸಾಮಾನ್ಯ ಬಳಕೆದಾರರ ಜೇಬಿಗೆ ಭಾರಿ ಕತ್ತರಿ ಬೀಳಲಿದೆ.

26
ಸ್ಥಗಿತಗೊಂಡ ರೂ.549 ಜನಪ್ರಿಯ ಪ್ಲಾನ್

ಏರ್‌ಟೆಲ್ ತನ್ನ ಪರ್ಸನಲ್ ಪೋಸ್ಟ್‌ಪೇಯ್ಡ್ ವಿಭಾಗದಲ್ಲಿದ್ದ ರೂ. 549 ರ ಜನಪ್ರಿಯ ಪ್ಲಾನ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಸೌಲಭ್ಯಗಳನ್ನು ನೀಡುತ್ತಿದ್ದ ಕಾರಣ ಈ ಪ್ಲಾನ್ ಗ್ರಾಹಕರಲ್ಲಿ ಭಾರಿ ಮನ್ನಣೆ ಗಳಿಸಿತ್ತು. ಆದರೆ ಕಂಪನಿಯ ಈ ಹಠಾತ್ ನಿರ್ಧಾರದಿಂದಾಗಿ, ಕಡಿಮೆ ವೆಚ್ಚದಲ್ಲಿ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಸೇವೆಗಳನ್ನು ಬಳಸುತ್ತಿದ್ದ ಲಕ್ಷಾಂತರ ಗ್ರಾಹಕರಿಗೆ ಹಿನ್ನಡೆಯಾಗಿದೆ.

36
ರೂ. 549 ಪ್ಲಾನ್‌ನಲ್ಲಿದ್ದ ಆಕರ್ಷಕ ಸೌಲಭ್ಯಗಳು ಏನೇನಾಗಿದ್ದವು?:

ವೈಯಕ್ತಿಕ ಬಳಕೆದಾರರಿಗೆ ಲಭ್ಯವಿದ್ದ ಈ ರೂ. 549 ರ ಪ್ಲಾನ್‌ನಲ್ಲಿ ಗ್ರಾಹಕರಿಗೆ ಹಲವು ಪ್ರಮುಖ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಇದರಲ್ಲಿ ಯಾವುದೇ ಮಿತಿಯಿಲ್ಲದ ಅನ್‌ಲಿಮಿಟೆಡ್ ಲೋಕಲ್ ಹಾಗೂ ಎಸ್‌ಟಿಡಿ (STD) ವಾಯ್ಸ್ ಕಾಲಿಂಗ್, ಪ್ರತಿದಿನ 100 ಎಸ್‌ಎಂಎಸ್ (SMS) ಹಾಗೂ ಪ್ರತಿ ತಿಂಗಳಿಗೆ 40 ಜಿಬಿ (GB) ಡೇಟಾ ರೋಲ್‌ಓವರ್ ಸೌಲಭ್ಯ ಲಭ್ಯವಿತ್ತು. ಇದರೊಂದಿಗೆ ಹೆಚ್ಚುವರಿ ಕೊಡುಗೆಯಾಗಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ (Xstream Play) ಮತ್ತು ವಿಂಕ್ ಮ್ಯೂಸಿಕ್ (Wynk Music) ಆಪ್‌ಗಳ ಉಚಿತ ಸಬ್‌ಸ್ಕ್ರಿಪ್ಷನ್ ಕೂಡ ಗ್ರಾಹಕರಿಗೆ ಸಿಗುತ್ತಿತ್ತು.

46
ಹೊಸ ಗ್ರಾಹಕರಿಗೆ ಇರುವ ಆಯ್ಕೆಗಳೇನು? ಫ್ಯಾಮಿಲಿ ಪ್ಲಾನ್ ತಂತ್ರ

ಈ ಪ್ಲಾನ್ ರದ್ದಾದ ಬಳಿಕ ಹೊಸದಾಗಿ ಪೋಸ್ಟ್‌ಪೇಯ್ಡ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಈಗ ರೂ. 449 ರ ವೈಯಕ್ತಿಕ ಪ್ಲಾನ್ ಏಕೈಕ ಎಂಟ್ರಿ-ಲೆವೆಲ್ ಆಯ್ಕೆಯಾಗಿ ಉಳಿದುಕೊಂಡಿದೆ. ಇನ್ನು ರೂ. 549 ಕ್ಕಿಂತ ಹೆಚ್ಚಿನ ಸೌಲಭ್ಯಗಳನ್ನು ಬಯಸುವ ಗ್ರಾಹಕರು ಇನ್ಮುಂದೆ ನೇರವಾಗಿ ರೂ. 699 ರ ಫ್ಯಾಮಿಲಿ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಗ್ರಾಹಕರನ್ನು ಹೆಚ್ಚು ದುಬಾರಿಯಾದ ಫ್ಯಾಮಿಲಿ ಪ್ಲಾನ್‌ಗಳ ಕಡೆಗೆ ಸೆಳೆಯಲು ಏರ್‌ಟೆಲ್ ಈ ತಂತ್ರ ರೂಪಿಸಿದೆ ಎಂದು ಟೆಲಿಕಾಂ ವಲಯದ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ, ಕಂಪನಿಯು ತನ್ನ ಕಾರ್ಪೊರೇಟ್ ಗ್ರಾಹಕರಿಗೆ ಹಾಗೂ ಕೆಲವು ನಿರ್ದಿಷ್ಟ ಫ್ಯಾಮಿಲಿ ಪ್ಲಾನ್‌ಗಳಲ್ಲಿ ಇನ್ನೂ ಕೆಲವು ಅಗ್ಗದ ಆಯ್ಕೆಗಳನ್ನು ಮುಂದುವರಿಸಿದೆ.

56
ಪ್ಲಾನ್ ರದ್ದುಗೊಳಿಸಲು ಮುಖ್ಯ ಕಾರಣವೇನು?

ಟೆಲಿಕಾಂ ತಜ್ಞರ ಪ್ರಕಾರ, 2026 ರಲ್ಲಿ ಜಾರಿಗೆ ತರಲಾದ ಈ ಟ್ಯಾರಿಫ್ ರಚನೆ ಮತ್ತು ಪ್ಲಾನ್ ರದ್ದತಿಯ ಮುಖ್ಯ ಉದ್ದೇಶ ಪ್ರತಿಯೊಬ್ಬ ಗ್ರಾಹಕರಿಂದ ಬರುವ ಸರಾಸರಿ ಆದಾಯವನ್ನು (ARPU - Average Revenue Per User) ಹೆಚ್ಚಿಸುವುದಾಗಿದೆ. ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಎರಡೂ ತಮ್ಮ 5G ಮೂಲಸೌಕರ್ಯಗಳನ್ನು ಬೃಹತ್ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಮತ್ತು ಆದಾಯವನ್ನು ವೃದ್ಧಿಸಿಕೊಳ್ಳಲು ಇಂತಹ ಅಗ್ಗದ ಪ್ಲಾನ್‌ಗಳನ್ನು ನಿರಂತರವಾಗಿ ನಿಲ್ಲಿಸುತ್ತಿವೆ. ಗ್ರಾಹಕರು ಹೆಚ್ಚು ಹಣದ ದುಬಾರಿ ಪ್ಲಾನ್‌ಗಳಿಗೆ ಬದಲಾಗುವಂತೆ ಕಂಪನಿಗಳು ಪರೋಕ್ಷವಾಗಿ ಒತ್ತಡ ಹೇರುತ್ತಿವೆ.

66
ಹಾಲಿ ಯೂಸರ್‌ ಮೇಲಾಗುವ ಪರಿಣಾಮ ಮತ್ತು ಮುಂದಿನ ದಾರಿ

ನೀವು ಪ್ರಸ್ತುತ ಏರ್‌ಟೆಲ್‌ನ ಈ ರೂ. 549 ಪ್ಲಾನ್ ಬಳಸುತ್ತಿದ್ದರೆ, ನಿಮ್ಮ ಪ್ರಸಕ್ತ ಬಿಲ್ಲಿಂಗ್ ಸೈಕಲ್ (Billing Cycle) ಮುಕ್ತಾಯದ ನಂತರ ಈ ಸೌಲಭ್ಯ ಕೊನೆಗೊಳ್ಳಲಿದೆ. ಮುಂದಿನ ಬಿಲ್ಲಿಂಗ್ ಅವಧಿಯಿಂದ ನೀವು ಕಡ್ಡಾಯವಾಗಿ ಲಭ್ಯವಿರುವ ಹೊಸ ದುಬಾರಿ ಪ್ಲಾನ್‌ಗಳಿಗೆ ಅಪ್‌ಗ್ರೇಡ್ ಆಗಬೇಕಾಗುತ್ತದೆ. ಇಲ್ಲದಿದ್ದರೆ, ಮೊಬೈಲ್ ವೆಚ್ಚವನ್ನು ನಿಯಂತ್ರಣದಲ್ಲಿಡಲು ಗ್ರಾಹಕರು ಪೋಸ್ಟ್‌ಪೇಯ್ಡ್‌ನಿಂದ ಮತ್ತೆ ಹಳೆಯ ಪ್ರಿಪೇಯ್ಡ್ (Prepaid) ಸಂಪರ್ಕಕ್ಕೆ ಹಿಂತಿರುಗಬೇಕಾದ ಪರಿಸ್ಥಿತಿ ಎದುರಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories