ಆರೋಗ್ಯಕರ ಬೀಜಗಳ ಪಟ್ಟಿಯಲ್ಲಿ ಸೇರುವ ಚಿಯಾ ಸೀಡ್ಸ್ ಅತಿಯಾದ್ರೆ ಒಳ್ಳೆಯದಲ್ಲ. ಹಾಗೇ ಅದನ್ನು ತಪ್ಪಾದ ವಿಧಾನದಲ್ಲಿ ಸೇವನೆ ಮಾಡಿದ್ರೆ ಅಪಾಯ. ಸರಿಯಾದ ಪ್ರಮಾಣ ಹಾಗೂ ಸೇವನೆ ವಿಧಾನ ತಿಳಿದುಕೊಳ್ಳಿ.
ಚಿಯಾ ಸೀಡ್ಸ್ (Chia seeds) ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆರೋಗ್ಯಕರ ಸೀಡ್ಸ್ ಪಟ್ಟಿಯಲ್ಲಿ ಚಿಯಾ ಸೇರುತ್ತೆ. ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡೋದ್ರಿಂದ ಸಾಕಷ್ಟು ಆರೋಗ್ಯ ಪ್ರಯೋಜನವಿದೆ. ಚಿಯಾ ಸೀಡ್ಸ್ ಫೈಬರ್, ಪ್ರೋಟೀನ್, ಜೀವಸತ್ವಗಳು, ಖನಿಜ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪುಟ್ಟದಾಗಿರುವ ಈ ಬೀಜ, ಸಾಕಷ್ಟು ಪೋಷಕಾಂಶ ಮತ್ತು ಆರೋಗ್ಯ ಪ್ರಯೋಜವನ್ನು ಒದಗಿಸುತ್ತದೆ. ಆದರೆ ಯಾವುದೇ ಆಹಾರವನ್ನು ಸರಿಯಾದ ರೀತಿಯಲ್ಲಿ ಹಾಗೂ ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ಮಾತ್ರ ಆರೋಗ್ಯ ಸುಧಾರಿಸುತ್ತದೆ. ತಪ್ಪು ವಿಧಾನದಲ್ಲಿ ಹಾಗೂ ಅತಿಯಾಗಿ ತಿಂದಾಗ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಚಿಯಾ ಸೀಡ್ಸ್ ಸೇವನೆ ಮಾಡುವ ವಿಧಾನ ಹಾಗೂ ಅತಿಯಾಗಿ ತಿಂದ್ರೆ ಏನೆಲ್ಲ ಅಪಾಯವಿದೆ ಎಂಬುದನ್ನು ತಿಳಿದುಕೊಳ್ಳಿ.
ಚಿಯಾ ಸೀಡ್ಸ್ ಸೇವಿಸುವ ವಿಧಾನ : ಚಿಯಾ ಸೀಡ್ಸನ್ನು ಯಾವುದೇ ಕಾರಣಕ್ಕೂ ಹಸಿಯಾಗಿ ಸೇವನೆ ಮಾಡಬಾರದು. ಹಸಿ ಚಿಯಾ ಸೀಡ್ಸ್ ನಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ (fiber) ಇರುತ್ತೆ. ಅದನ್ನು ಹಾಗೆ ಸೇವನೆ ಮಾಡಿದಾಗ ಅಜೀರ್ಣ ಸಮಸ್ಯೆ ಕಾಡುತ್ತದೆ. ಹಸಿಯಾದ ಚಿಯಾ ಸೀಡ್ಸ್ ನಿಮ್ಮ ದೇಹದಲ್ಲಿರುವ ನೀರನ್ನು ಹೀರಿಕೊಳ್ಳುತ್ತದೆ. ಇದ್ರಿಂದ ನಿಮಗೆ ಡಿಹೈಡ್ರೇಷನ್ ಕಾಡುವ ಸಾಧ್ಯತೆ ಇದೆ. ನೀವು ಹಸಿಯಾದ ಚಿಯಾ ಸೀಡ್ಸನ್ನು ಹೆಚ್ಚಾಗಿ ಸೇವನೆ ಮಾಡಿದ್ದೀರಿ ಎಂದಾದ್ರೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡಿ. ಹಸಿಯಾದ ಚಿಯಾ ಸೀಡ್ಸ್ ತಿನ್ನುವುದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ನಿಮ್ಮನ್ನು ಕಾಡುತ್ತದೆ.
ಬೇಸಿಗೆಯ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಲಾವಂಚ ಬೇರಿನ ನೀರು
ನೀವು ಚಿಯಾ ಸೀಡ್ಸನ್ನು ನೀರಿನಲ್ಲಿ ನೆನೆಸಿಟ್ಟು ಸೇವನೆ ಮಾಡಬೇಕು. ರಾತ್ರಿ ಚಿಯಾ ಸೀಡ್ಸನ್ನು ನೀರಿನಲ್ಲಿ ನೆನೆ ಹಾಕಿ ಬೆಳಿಗ್ಗೆ ತಿನ್ನಿ. ಇಲ್ಲವೆ ಅರ್ಧ ಗಂಟೆ ಮೊದಲು ಚಿಯಾ ಸೀಡ್ಸ್ ನೆನೆ ಹಾಕಿ ನಂತ್ರ ಸೇವನೆ ಮಾಡಿ. ನೀವು ಅಂಬಲಿ ಅಥವಾ ಆಹಾರದ ಜೊತೆ ಬೆರೆಸಿ ತಿನ್ನಬಹುದು.
ಎಷ್ಟು ಪ್ರಮಾಣದಲ್ಲಿ ಚಿಯಾ ಸೀಡ್ಸ್ ಸೇವನೆ ಮಾಡಬೇಕು? : ಚಿಯಾ ಬೀಜಗಳ ಸೇವನೆಯು ವಯಸ್ಸು, ವೈದ್ಯಕೀಯ ಸ್ಥಿತಿ ಮತ್ತು ಆಹಾರ ಪದ್ಧತಿಯನ್ನು ಅವಲಂಬಿಸಿರುತ್ತದೆ. ವರದಿ ಪ್ರಕಾರ, ವಯಸ್ಕರು ದಿನಕ್ಕೆ ಸುಮಾರು ಒಂದರಿಂದ ಎರಡು ಚಮಚ ಅಂದ್ರೆ 15 ರಿಂದ 30 ಗ್ರಾಂ ಚಿಯಾ ಬೀಜಗಳನ್ನು ತಿನ್ನಬಹುದು.
ಅತಿ ಹೆಚ್ಚು ಚಿಯಾ ಸೀಡ್ಸ್ ಸೇವನೆಯಿಂದ ಆಗುವ ನಷ್ಟ :
ಅಲರ್ಜಿ : ಚಿಯಾ ಬೀಜವನ್ನು ಅತಿಯಾಗಿ ತಿಂದ್ರೆ ಕೆಲವು ಜನರಿಗೆ ಅಲರ್ಜಿ ಕಾಡುತ್ತದೆ. ಚಿಯಾ ಬೀಜಗಳಿಂದ ಉಂಟಾಗುವ ಆಹಾರ ಅಲರ್ಜಿ ಅಂದ್ರೆ ವಾಂತಿ, ಅತಿಸಾರ, ತುಟಿ ಮತ್ತು ನಾಲಿಗೆ ತುರಿಕೆ, ಚರ್ಮದ ಮೇಲೆ ದದ್ದುಗಳು, ಕಣ್ಣುಗಳಲ್ಲಿ ನೀರು ಬರುವುದು ಮತ್ತು ಉಸಿರಾಟದ ತೊಂದರೆ ಸೇರಿದೆ.
ಬೇರೆ ದೇಶದ ಚಿಯಾ ಬೀಜಗಳಿಗಿಂತ ನಮ್ಮ ದೇಶದ ತುಳಸಿ ಬೀಜಗಳೇ ಬೆಸ್ಟ್! ಬಲವಾದ ಕಾರಣ ಇಲ್ಲಿದೆ!
ಅಜೀರ್ಣ : ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಚಿಯಾ ಬೀಜ ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆ ಕಾಡುತ್ತದೆ. ಚಿಯಾ ಬೀಜಗಳು ದೇಹದಲ್ಲಿರುವ ದ್ರವವನ್ನು ಹೀರಿಕೊಳ್ಳುತ್ತವೆ. ಇದು ಹೊಟ್ಟೆ ಉಬ್ಬರ, ಗ್ಯಾಸ್ ಗೆ ಕಾರಣವಾಗಬಹುದು.
ಉಸಿರುಗಟ್ಟಿಸುವಿಕೆ : ಹೆಚ್ಚು ಚಿಯಾ ಬೀಜ ತಿನ್ನುವುದು ಉಸಿರುಗಟ್ಟುವಿಕೆಯ ಅಪಾಯ ಹೆಚ್ಚಾಗುತ್ತದೆ. ಆಹಾರ ನುಂಗುವಾಗ ತೊಂದರೆಪಡುವ ವ್ಯಕ್ತಿಯಾಗಿದ್ರೆ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು.
ಕ್ಯಾನ್ಸರ್ ಅಪಾಯ : ಅಧ್ಯಯನದ ಪ್ರಕಾರ, ಚಿಯಾ ಬೀಜ, ಆಲ್ಫಾ-ಲಿನೋಲೆನಿಕ್ ಆಮ್ಲ (ALA) ಎಂದು ಕರೆಯಲ್ಪಡುವ ಒಮೆಗಾ-3 ಕೊಬ್ಬಿನಾಮ್ಲದಲ್ಲಿ ಸಮೃದ್ಧವಾಗಿವೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.