ಹೋಟೆಲ್‌ಗಳಲ್ಲಿ ಸಿಗುವ ಸೆಟ್ ದೋಸೆ ಬಾಯಲ್ಲಿಟ್ಟರೆ ಕರಗುವಷ್ಟು ಮೃದುವಾಗಿ, ಹತ್ತಿಯಂತೆ ಸ್ಪಾಂಜಿಯಾಗಿರುತ್ತದೆ. ಆದರೆ ಮನೆಯಲ್ಲಿ ಅದೇ ರೀತಿ ಮಾಡಲು ಎಷ್ಟೇ ಪ್ರಯತ್ನಿಸಿದರೂ ಹೋಟೆಲ್‌ನಂತಹ ಸಾಫ್ಟ್ ದೋಸೆ ಬರುವುದೇ ಇಲ್ಲ ಎಂಬುದು ಬಹುತೇಕರ ದೂರು. ಇದಕ್ಕೆ ಕಾರಣ ಹೋಟೆಲ್‌ನಲ್ಲಿ ಬಳಸುವ ಹಿಟ್ಟಿನ ಸೀಕ್ರೆಟ್ ಅಳತೆ! ನಾವಿಂದು ಹೋಟೆಲ್‌ನಲ್ಲಿ ನುರಿತ ಬಾಣಸಿಗರೊಬ್ಬರು ಬಿಚ್ಚಿಟ್ಟ ಜನಪ್ರಿಯ ಸೆಟ್ ದೋಸೆ ಹಿಟ್ಟಿನ ನಿಖರ ಅಳತೆ ಹಾಗೂ ತವಾ ಮೇಲೆ ದೋಸೆ ಅಂಟಿಕೊಳ್ಳದಂತೆ ಮಾಡುವ ವಿಶೇಷ ಟ್ರಿಕ್ ಶೇರ್ ಮಾಡಿದ್ದೇವೆ ನೋಡಿ..
ಹೋಟೆಲ್‌ಗಳಲ್ಲಿ ದೋಸೆ ಹತ್ತಿಯಂತೆ ಮೃದುವಾಗಿ ಬರಲು ಬಳಸುವ ಅಳತೆ ಹೀಗಿದೆ
ದೋಸೆ ಅಕ್ಕಿ: 6 ಕೆಜಿ
ಸಬ್ಬಕ್ಕಿ (Sabudana): 1.2 ಕೆಜಿ (ದೋಸೆ ಮೃದುವಾಗಿ ಮತ್ತು ಜಾಲರಿಯಂತೆ ಬರಲು ಇದು ಅತೀ ಮುಖ್ಯ)
ಅವಲಕ್ಕಿ (Poha): 1.2 ಕೆಜಿ (ದೋಸೆಗೆ ನೈಜ ಸಾಫ್ಟ್‌ನೆಸ್ ನೀಡುತ್ತದೆ)
ಕುಚಲಕ್ಕಿ / ಕುಸಲಕ್ಕಿ (Boiled Rice): 1.2 ಕೆಜಿ (ದೋಸೆ ಗರಿಗರಿಯಾಗದೆ ಸ್ಪಾಂಜ್ ರೂಪ ಪಡೆಯಲು ಸಹಕಾರಿ)
(ಮನೆಯಲ್ಲಿ ಮಾಡುವವರು 6 ಕೆಜಿ ಅಕ್ಕಿ ಹಾಕಿ ಮಾಡಲು ಸಾಧ್ಯವಿಲ್ಲದ ಕಾರಣ, 5 ಕಪ್ ಅಕ್ಕಿಗೆ ತಲಾ 1 ಕಪ್‌ನಂತೆ ಸಬ್ಬಕ್ಕಿ, ಅವಲಕ್ಕಿ ಮತ್ತು ಕುಚಲಕ್ಕಿ ಬೆರೆಸಿದರೆ ಪಕ್ಕಾ ಹೋಟೆಲ್ ರುಚಿಯ ಸಾಫ್ಟ್ ಸೆಟ್ ದೋಸೆ ಬರುತ್ತದೆ. ಸಣ್ಣ ಕುಟುಂಬಕ್ಕೆ 2.5 ಕಪ್ ಅಕ್ಕಿ ತೆಗೆದುಕೊಂಡರೆ ಸಬ್ಬಕ್ಕಿ, ಅವಲಕ್ಕಿ, ಕುಚಲಕ್ಕಿಯನ್ನು ತಲಾ ಅರ್ಧ ಕಪ್ ಬಳಸಬಹುದು.)
ನೆನೆಸುವುದು & ರುಬ್ಬುವುದು: ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ತೊಳೆದು, ನೀರು ಹಾಕಿ ಸುಮಾರು 4 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಗ್ರೈಂಡರ್‌ನಲ್ಲಿ ಹಾಕಿ ನುಣ್ಣಗೆ ಪೇಸ್ಟ್‌ನಂತೆ ರುಬ್ಬಿ, ರಾತ್ರಿಯಿಡೀ ಹುದುಗಲು (Fermentation) ಬಿಡಬೇಕು.
ಬೆಳಗಿನ ಸಿದ್ಧತೆ ಹೀಗಿರಲಿ: ಬೆಳಗ್ಗೆ ಹಿಟ್ಟಿಗೆ ಅಗತ್ಯಕ್ಕೆ ತಕ್ಕಷ್ಟು ಪುಡಿ ಉಪ್ಪು, ಒಂದು ಚಿಟಿಕೆ ಅಡುಗೆ ಸೋಡಾ ಮತ್ತು ಸ್ವಲ್ಪವೇ ನೀರು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ನೆನಪಿರಲಿ, ಸೆಟ್ ದೋಸೆ ಹಿಟ್ಟು ತೀರಾ ತೆಳುವಾಗಿರದೆ ಗಟ್ಟಿಯಾಗಿಯೇ ಇರಬೇಕು.
ಹೋಟೆಲ್‌ನಲ್ಲಿ ಪ್ರತಿದಿನ ಬೆಳಗ್ಗೆ ದೋಸೆ ಹಾಕುವ ಮುನ್ನ ಕಾವಲಿ (Tawa) ರೆಡಿ ಮಾಡಲು ಒಂದು ಅದ್ಭುತ ಟ್ರಿಕ್ ಬಳಸುತ್ತಾರೆ..
ಸ್ಟವ್ ಆನ್ ಮಾಡಿ, ಬಿಸಿಯಾದ ತವಾ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಹರಡಿ 10 ರಿಂದ 15 ನಿಮಿಷ ಹಾಗೆಯೇ ಬಿಡುತ್ತಾರೆ.
ನಂತರ ಅದನ್ನು ಒರೆಸಿ ತೆಗೆದು ದೋಸೆ ಹಾಕುತ್ತಾರೆ. ಈ ರೀತಿ ಮಾಡುವುದರಿಂದ ಕಬ್ಬಿಣದ ತವಾ ಕೂಡ ನಾನ್‌ಸ್ಟಿಕ್‌ನಂತಾಗಿ, ದೋಸೆ ಕಿತ್ತುಬರದೆ ಸುಲಭವಾಗಿ ಏಳುತ್ತದೆ!
ಕಾದ ತವಾ ಮೇಲೆ ದಪ್ಪನಾಗಿ ಹಿಟ್ಟು ಹಾಕಿ ಲಘುವಾಗಿ ಹರಡಿ.
ಅದರ ಮೇಲೆ 1 ರಿಂದ 2 ಚಮಚ ತಾಜಾ ತುಪ್ಪ (Ghee) ಹಾಕಿ.
ನಂತರ ತುರಿದ ಕ್ಯಾರೆಟ್ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನ ಮಿಶ್ರಣವನ್ನು ಮೇಲೆ ಉದುರಿಸಿ, ಮುಚ್ಚಳ ಮುಚ್ಚಿ ಬೇಯಿಸಿ.
ಎರಡೂ ಕಡೆ ಹದವಾಗಿ ಬೇಯಿಸಿದರೆ ಬಿಸಿಬಿಸಿ, ಘಮಘಮಿಸುವ ಸಾಫ್ಟ್ ಸೆಟ್ ದೋಸೆ ರೆಡಿ! ಇದನ್ನು ತೆಂಗಿನಕಾಯಿ ಚಟ್ನಿ ಮತ್ತು ಸಾಗು ಜೊತೆ ತಿಂದರೆ ಪಕ್ಕಾ ಹೋಟೆಲ್ ರುಚಿ ಗ್ಯಾರಂಟಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.