
ಗೋಧಿ ನುಚ್ಚಿನ ಹಲ್ವಾ ರುಚಿಕರವಾಗಿರುವುದರ ಜೊತೆಗೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಸಿಹಿತಿಂಡಿಯಾಗಿದೆ. ಗೋಧಿ ನುಚ್ಚು, ಬೆಲ್ಲ, ತುಪ್ಪ ಹಾಗೂ ಡ್ರೈಫ್ರೂಟ್ಸ್ ಬಳಸಿ ತಯಾರಿಸುವ ಈ ಹಲ್ವಾ ಬೆಳಗಿನ ಉಪಾಹಾರ ಅಥವಾ ಸಂಜೆ ಸಿಹಿತಿಂಡಿಯಾಗಿ ಸವಿಯಬಹುದು. ಹೆಚ್ಚು ಸಾಮಗ್ರಿಗಳ ಅಗತ್ಯವಿಲ್ಲದೆ ಕಡಿಮೆ ಸಮಯದಲ್ಲೇ ಈ ಹಲ್ವಾ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು
ಗೋಧಿ ನುಚ್ಚು – 1/4 ಕಪ್
ನೀರು – 2 ಕಪ್
ತುಪ್ಪ – 1/4 ಕಪ್
ಗೋಡಂಬಿ – ಸ್ವಲ್ಪ
ಒಣ ದ್ರಾಕ್ಷಿ – ಸ್ವಲ್ಪ
ಬಾದಾಮಿ – ಸ್ವಲ್ಪ
ಬೆಲ್ಲ – 1/4 ಕಪ್
ಉಪ್ಪು – ಚಿಟಿಕೆ
ಏಲಕ್ಕಿ ಪುಡಿ – 1/4 ಟೀ ಸ್ಪೂನ್
ಗೋಧಿ ನುಚ್ಚಿನ ಹಲ್ವಾ ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಯನ್ನು ಹಾಕಿ ಹುರಿದುಕೊಂಡು ಪಕ್ಕಕ್ಕೆ ತೆಗೆದಿಡಿ. ಅದೇ ಬಾಣಲೆಗೆ ಗೋಧಿ ನುಚ್ಚನ್ನು ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಗೋಧಿ ನುಚ್ಚಿನಿಂದ ಉತ್ತಮವಾದ ಪರಿಮಳ ಬರುವವರೆಗೆ ಹುರಿಯುವುದು ಮುಖ್ಯ. ನಂತರ ಇದಕ್ಕೆ 2 ಕಪ್ ನೀರನ್ನು ನಿಧಾನವಾಗಿ ಸೇರಿಸಿ ಚೆನ್ನಾಗಿ ಕಲಸಿ. ಗೋಧಿ ನುಚ್ಚು ಮೃದುವಾಗುವವರೆಗೆ ಬೇಯಿಸಿಕೊಳ್ಳಿ.
ನುಚ್ಚು ಚೆನ್ನಾಗಿ ಬೆಂದ ಬಳಿಕ ಬೆಲ್ಲವನ್ನು ಸೇರಿಸಿ ಮಿಶ್ರಣ ಮಾಡಿ. ಬೆಲ್ಲ ಕರಗಿ ಹಲ್ವಾ ಗಟ್ಟಿಯಾಗಲು ಆರಂಭಿಸಿದಾಗ ಉಳಿದ ತುಪ್ಪವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಚೆನ್ನಾಗಿ ಕಲಸಿ. ಕೊನೆಯಲ್ಲಿ ಚಿಟಿಕೆ ಉಪ್ಪು ಹಾಗೂ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ. ಹುರಿದ ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಯನ್ನು ಸೇರಿಸಿದರೆ ರುಚಿಕರವಾದ ಗೋಧಿ ನುಚ್ಚಿನ ಹಲ್ವಾ ಸವಿಯಲು ಸಿದ್ಧ.
ಸವಿಯಲು ಸಿದ್ಧ
ಬಿಸಿ ಬಿಸಿಯಾಗಿ ಅಥವಾ ಸ್ವಲ್ಪ ತಣ್ಣಗಾದ ಬಳಿಕ ಈ ಹಲ್ವಾವನ್ನು ಸವಿಯಬಹುದು. ಬೆಲ್ಲ ಮತ್ತು ತುಪ್ಪದ ಸುವಾಸನೆಯೊಂದಿಗೆ ಡ್ರೈಫ್ರೂಟ್ಸ್ ಸೇರಿರುವುದರಿಂದ ಈ ಸಿಹಿತಿಂಡಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.