ಹೊಸ ವರ್ಷ ಯುಗಾದಿ ತಯಾರಿ ಜೋರಾಗಿ ನಡೀತಿದೆ. ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗ್ತಿದೆ. ಮಾರುಕಟ್ಟೆಯಲ್ಲಿ ಹಣ್ಣು, ಮಾವಿನ ಎಲೆಗಳು ರಾರಾಜಿಸುತ್ತಿವೆ. ಹಬ್ಬವೆಂದ್ಮೇಲೆ ರುಚಿಯಾದ ರುಚಿ ಅಡುಗೆ ಬೇಕೇಬೇಕು. ಇಲ್ಲಿದೆ ಕೆಲವು ರೆಸಿಪಿಯ ಮಾಹಿತಿ.
ಹಬ್ಬ ಎಂದರೆ ಅಡುಗೆ ಮನೆ ವಿವಿಧ ಸಿಹಿತಿಂಡಿಗಳಿಂದ ತುಂಬಿರುತ್ತೆ. ನಾಳೆ ಯುಗಾದಿ ಹಬ್ಬ. ಹೊಸ ವರುಷವನ್ನು ಬೇವು ಬೆಲ್ಲ ಹಾಗೂ ಸಿಹಿ ಕಜ್ಜಾಯದೊಂದಿಗೆ ಸ್ವಾಗತಿಸಿ. ಯುಗಾದಿ ಹಬ್ಬದ ದಿನ ಕೆಲ ಅಡುಗೆಗಳನ್ನು ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಬಹುದು. ಅನೇಕರಿಗೆ ಯುಗಾದಿಯಲ್ಲಿ ಮಾಡುವ ಬೇವು-ಬೆಲ್ಲ, ಕೆಲ ತಿಂಡಿಗಳನ್ನು ಹೇಗೆ ತಯಾರಿಸೋದು ಎಂಬುದು ಗೊತ್ತಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಬೇವು ಬೆಲ್ಲ
ಬೇವು ಬೆಲ್ಲ ತಯಾರಿಸಲು ಬೇಕಾಗುವ ಸಾಮಗ್ರಿ : ¼ ಕಪ್ ಹುರಿದ ಹುರಿಗಡಲೆ, 2-4 ಚಮಚ ಬೆಲ್ಲ, 4 ಬಾದಾಮಿ, 2-4 ಗೋಡಂಬಿ, 1 ಚಮಚ ಕಹಿಬೇವಿನ ಹೂವು, 3-4 ಕಹಿಬೇವಿನ ಎಲೆ, 1 ಏಲಕ್ಕಿ
ಬೇವು ಬೆಲ್ಲ ಮಾಡುವ ವಿಧಾನ :
• ಹುರಿದ ಹುರಿಗಡಲೆಯನ್ನು ನುಣ್ಣಗೆ ರುಬ್ಬಿಕೊಳ್ಳಿ.
• ಗೋಡಂಬಿ, ಬಾದಾಮಿ, ಬೆಲ್ಲ, ಬೇವಿನ ಹೂವು, ಕಹಿಬೇವಿನ ಎಲೆ, ಏಲಕ್ಕಿ ಎಲ್ಲವನ್ನು ಹಾಕಿ ಮತ್ತೆ ರುಬ್ಬಿ.
• ಸಿಹಿ ಬೇಕಾದಲ್ಲಿ ಮತ್ತೆ ಸ್ವಲ್ಪ ಬೆಲ್ಲವನ್ನು ಸೇರಿಸಿಕೊಂಡರೆ ಹೊಸ ಶೈಲಿಯ ಬೇವು ಬೆಲ್ಲ ಸವಿಯಲು ಸಿದ್ಧ.
Ugadi Legends: ಬ್ರಹ್ಮಾಂಡದ ಸೃಷ್ಟಿಯಾದ ದಿನ, ಹೊಸ ವರ್ಷ ಆಚರಿಸಲು ಇಲ್ಲಿವೆ ಕಾರಣಗಳು..
ಯುಗಾದಿಗೆ ಸ್ಪೆಷಲ್ ಪಚಡಿ (Pachadi)
ಪಂಚಾಮೃತಕ್ಕೆ ಬೇಕಾಗುವ ಸಾಮಗ್ರಿ : ¾ ಕಪ್ ನೀರು, 1 ಚಮಚ ಹುಣಸೇ ರಸ, 2 ಚಮಚ ಬೆಲ್ಲ, 1 ಚಮಚ ಚಿಕ್ಕದಾಗಿ ಕತ್ತರಿಸಿದ ಮಾವಿನಕಾಯಿ ಹೋಳು, 1 ಚಮಚ ಕಹಿಬೇವಿನ ಹೂವು, ಚಿಟಿಕೆ ಕಾಳುಮೆಣಸಿನ ಪುಡಿ, ಸ್ವಲ್ಪ ಉಪ್ಪು
ಪಚಡಿ ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಹುಣಸೆ ರಸ, ಮಾವಿನಕಾಯಿಯ ಚೂರುಗಳು, ಬೆಲ್ಲ, ಕಾಳುಮೆಣಸಿನ ಪುಡಿ, ಕತ್ತರಿಸಿದ ಕಹಿಬೇವಿನ ಹೂವು, ಉಪ್ಪು ಹಾಕಿ ಮಿಕ್ಸ್ ಮಾಡಿದರೆ ಪಚಡಿ ಕುಡಿಯಲು ಸಿದ್ಧ.
ಕ್ಯಾರೆಟ್ ಹೋಳಿಗೆ
ಹೋಳಿಗೆ ಹೂರಣಕ್ಕೆ ಬೇಕಾಗುವ ಸಾಮಗ್ರಿ : 1 ಕಪ್ ತುರಿದ ಕ್ಯಾರೆಟ್, ¼ ಕಪ್ ಕಾಯಿತುರಿ, ½ ಕಪ್ ಪುಡಿಯಾದ ಬೆಲ್ಲ, ಸ್ವಲ್ಪ ಏಲಕ್ಕಿ ಪುಡಿ
ಹೂರಣ ತಯಾರಿಸುವ ವಿಧಾನ : ತುರಿದ ಕ್ಯಾರೆಟ್ ಗೆ ಕಾಯಿತುರಿ, ಬೆಲ್ಲ, ಏಲಕ್ಕಿ ಪುಡಿ ಎಲ್ಲವನ್ನು ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ಕ್ಯಾರೆಟ್ ಮಿಶ್ರಣ ಸ್ವಲ್ಪ ಡ್ರೈ ಆದ ನಂತರ ನಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿ.
ಹೋಳಿಗೆಗೆ ಕಣಕಕ್ಕೆ ಬೇಕಾಗುವ ಸಾಮಗ್ರಿ : 1 ಕಪ್ ಗೋಧಿ ಹಿಟ್ಟು, 3 ಚಮಚ ಎಣ್ಣೆ, 2 ಚಮಚ ತುಪ್ಪ, ಸ್ವಲ್ಪ ಉಪ್ಪು
ಕಣಕ ತಯಾರಿಸುವ ವಿಧಾನ :
• ಗೋಧಿ ಹಿಟ್ಟಿಗೆ ಉಪ್ಪನ್ನು ಹಾಕಿ ಸ್ವಲ್ಪ ನೀರನ್ನು ಹಾಕುತ್ತಾ ಚಪಾತಿ ಹಿಟ್ಟಿನ ರೀತಿ ಕಲಸಿ.
• ಚೆನ್ನಾಗಿ ಕಲಸಿದ ನಂತರ ಎಣ್ಣೆ ಹಾಕಿ ಕಲಸಿ 30 ನಿಮಿಷ ಬಿಡಿ.
• ಕಲಸಿದ ಹಿಟ್ಟನ್ನು ಚಿಕ್ಕ ಗೋಲಾಕಾರದಲ್ಲಿ ಮಾಡಿಕೊಂಡು ಅದರೊಳಗೆ ಹೂರಣದ ಉಂಡೆಯನ್ನು ಹಾಕಿ ಕವರ್ ಮಾಡಿ ರೊಟ್ಟಿಯ ತರಹ ಲಟ್ಟಿಸಿ ಬೇಯಿಸಿ.
Ugadi 2023 ದಿನಾಂಕ, ಮುಹೂರ್ತ, ಹಬ್ಬದ ಹಿನ್ನೆಲೆ, ಪ್ರಾಮುಖ್ಯತೆ ವಿವರ ಇಲ್ಲಿದೆ..
ಯುಗಾದಿ (Ugadi) ಹಬ್ಬಕ್ಕೆ ಮಾಡಿ ಸೆವೆನ್ ಕಪ್ ಬರ್ಫಿ (Barfi)
ಸೆವೆನ್ ಕಪ್ ಬರ್ಫಿಗೆ ಬೇಕಾಗುವ ಸಾಮಗ್ರಿ : 1 ಕಪ್ ಕಡಲೇಹಿಟ್ಟು, 1 ಕಪ್ ತುರಿದ ಕಾಯಿತುರಿ, 1 ಕಪ್ ತುಪ್ಪ, 1 ಕಪ್ ಹಾಲು, 3 ಕಪ್ ಸಕ್ಕರೆ, ಸ್ವಲ್ಪ ಏಲಕ್ಕಿ ಪುಡಿ
ಬರ್ಫಿ ಮಾಡುವ ವಿಧಾನ:
• ಮೊದಲು ಬಾಣಲೆಗೆ ಕಡಲೆಹಿಟ್ಟನ್ನು ಹಾಕಿ, 3-4 ನಿಮಿಷಗಳವರೆಗೆ ಚೆನ್ನಾಗಿ ಹುರಿಯಿರಿ. ಕಡಲೆಹಿಟ್ಟಿನ ಬಣ್ಣ ಸ್ವಲ್ಪ ಬದಲಾಗಿ ಅದು ಪರಿಮಳ ಬೀರುವ ತನಕ ರೋಸ್ಟ್ ಮಾಡಿ.
• ಈಗ ಅಳತೆ ಮಾಡಿದ ತೆಂಗಿನತುರಿ, ತುಪ್ಪ ಮತ್ತು ಹಾಲನ್ನು ಕಡಲೆಹಿಟ್ಟಿಗೆ ಹಾಕಿ ಚೆನ್ನಾಗಿ ಕಲಸಿ.
• ಮೇಲಿನ ಮಿಶ್ರಣವು ಚೆನ್ನಾಗಿ ಹೊಂದಿಕೊಂಡ ಮೇಲೆ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.
• ಸಕ್ಕರೆ ಸ್ವಲ್ಪ ಕರಗುವವರೆಗೂ ಮಿಕ್ಸ್ ಮಾಡಿ.
• ನಂತರ ಮಂದ ಉರಿಯಲ್ಲಿ ಬರ್ಫಿಯ ಮಿಶ್ರಣವನ್ನು ಬಿಡದೇ ಕೈ ಆಡಿಸುತ್ತಿರಿ.
• ಸ್ವಲ್ಪ ಸಮಯದ ಬಳಿಕ ಮಿಶ್ರಣ ದಪ್ಪವಾಗುತ್ತಾ ಬಂದು ತುಪ್ಪವನ್ನು ಹೊರಗೆ ಬಿಡುತ್ತದೆ.
• ಈಗ ಅದನ್ನು ಎಣ್ಣೆ ಅಥವಾ ತುಪ್ಪ ಸವರಿದ ಪಾನ್ ಅಥವಾ ಪ್ಲೇಟ್ ಗೆ ಹಾಕಿ ತಣ್ಣಗಾದ ಮೇಲೆ ಕತ್ತರಿಸಿ.