ಶಿವರಾತ್ರಿ ಹಬ್ಬಕ್ಕಾಗಿ ಸಬ್ಬಕ್ಕಿ ಕಿಚಡಿ ಮತ್ತು ಪಾಯಸ

By Suvarna NewsFirst Published Feb 19, 2020, 11:06 AM IST
Highlights

ಶಿವರಾತ್ರಿ ಹಬ್ಬ ಎಂದ ತಕ್ಷಣ ನೆನಪಾಗುವುದು ಉಪವಾಸ. ಈ ವ್ರತ ಆಚರಣೆಯಲ್ಲಿ ತೊಡಗಿರುವವರಿಗಾಗಿಯೇ ಕೆಲವೊಂದು ತಿನಿಸುಗಳನ್ನು ಸಿದ್ಧಪಡಿಸಲಾಗುತ್ತದೆ. ಅವುಗಳಲ್ಲಿ ಸಬ್ಬಕ್ಕಿಯಿಂದ ಮಾಡಿದ ಯಾವುದಾದರೊಂದು ತಿನಿಸು ಇದ್ದೇ ಇರುತ್ತದೆ. 

ಮಹಾಶಿವರಾತ್ರಿ ಹಬ್ಬ ಸಮೀಪಿಸುತ್ತಿದೆ.ಶಿವರಾತ್ರಿ ಎಂದ ತಕ್ಷಣ ನೆನಪಾಗುವುದು ಉಪವಾಸ,ಜಾಗರಣೆ ಜೊತೆಗೆ ಅಂದು ತಯಾರಿಸುವ ವಿಶೇಷ ತಿನಿಸುಗಳು.ಶಿವರಾತ್ರಿಯಂದು ಉಪವಾಸ ಅಥವಾ ವ್ರತಕ್ಕೆ ಕುಳಿತವರಿಗಾಗಿ ಸಬ್ಬಕ್ಕಿಯಿಂದ ಸಿದ್ಧಪಡಿಸುವ ಯಾವುದಾದರೊಂದು ಖಾದ್ಯ ಇರಲೇಬೇಕು.ಸಬ್ಬಕ್ಕಿಯಿಂದ ಸಿದ್ಧಪಡಿಸಿದ ಖಾದ್ಯ ತಿಂದ್ರೇನೆ ಉಪವಾಸ ಪೂರ್ಣ ಎಂಬ ಭಾವನೆ ಕೆಲವರಲ್ಲಿದೆ. ಸಬ್ಬಕ್ಕಿಯಲ್ಲಿ ಕಾರ್ಬೋಹೈಡ್ರೇಟ್ಸ್ ಸಮೃದ್ಧವಾಗಿದ್ದು, ಹಸಿವನ್ನು ದೂರ ಮಾಡುತ್ತದೆ. ಸಬ್ಬಕ್ಕಿ ಕಿಚಡಿ ಹಾಗೂ ಪಾಯಸ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಆರೋಗ್ಯಕಾರಿ ಸಿಹಿ ತಿನಿಸು ಅರಿಶಿಣ ಎಲೆ ಕಡುಬು

ಸಬ್ಬಕ್ಕಿ ಕಿಚಡಿ
ಬೇಕಾಗುವ ಸಾಮಗ್ರಿಗಳು: ಸಬ್ಬಕ್ಕಿ-2 ಕಪ್,ಆಲೂಗಡ್ಡೆ- 1,ಕಡಲೆಕಾಯಿ ಬೀಜ-1/4 ಕಪ್,ಹಸಿಮೆಣಸು-2,ಶುಂಠಿ-1 ಇಂಚು,ಅರಿಶಿಣ ಪುಡಿ-1/4 ಟೀ ಚಮಚ, ಸಾಸಿವೆ-1 ಟೀ ಚಮಚ,ಜೀರಿಗೆ-1 ಟೀ ಚಮಚ,ಲಿಂಬೆಹಣ್ಣಿನ ರಸ-1 ಟೀ ಚಮಚ, ತೆಂಗಿನಕಾಯಿ ತುರಿ-ಕಾಲು ಕಪ್, ಅಡುಗೆ ಎಣ್ಣೆ,ಕರಿಬೇವು,ಉಪ್ಪು,ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:
-ಸಬ್ಬಕ್ಕಿಯನ್ನು 3 ಗಂಟೆ ನೀರಿನಲ್ಲಿ ನೆನೆಹಾಕಿ.ನೀರನ್ನು ಹೀರಿಕೊಂಡು ಸಬ್ಬಕ್ಕಿ ಗುಂಡಗಾಗುತ್ತದೆ.ಈಗ ಪಾತ್ರೆಯಲ್ಲಿರುವ ಹೆಚ್ಚುವರಿ ನೀರನ್ನು ಬಸಿಯಿರಿ.
-ಕಡಲೆಬೀಜವನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿದುಕೊಂಡು,ಅದರ ಮೇಲಿನ ಸಿಪ್ಪೆಯನ್ನು ತೆಗೆದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ.
-ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
-ಶುಂಠಿ ಹಾಗೂ ಹಸಿಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
-ಈಗ ಪ್ಯಾನ್ ಅನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ.ಎಣ್ಣೆ ಬಿಸಿಯಾದ ತಕ್ಷಣ ಸಾಸಿವೆ, ಜೀರಿಗೆ, ಹಚ್ಚಿದ ಶುಂಠಿ ಹಾಗೂ ಕರಿಬೇವು ಹಾಕಿ ಫ್ರೈ ಮಾಡಿ.

ಗರಿ ಗರಿ ಸಾಬೂದಾನ್ ವಡೆ ಮತ್ತು ಪನ್ನೀರ್‌ ಚಿಲ್ಲಿ ಫ್ರೈ

-ಬಳಿಕ ಇದಕ್ಕೆ ಆಲೂಗಡ್ಡೆ ಹಾಕಿ ಫ್ರೈ ಮಾಡಿ.ಉಪ್ಪು, ಅರಿಶಿಣ ಪುಡಿ ಹಾಗೂ ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿ.
-ಈ ಮಿಶ್ರಣಕ್ಕೆ ಸಬ್ಬಕ್ಕಿ ಹಾಗೂ ಕಡಲೆಬೀಜದ ಪುಡಿಯನ್ನು ಹಾಕಿ ಕಡಿಮೆ ಉರಿಯಲ್ಲಿ 3 ನಿಮಿಷ ಬೇಯಿಸಿ.ಸಬ್ಬಕ್ಕಿ ಅಗತ್ಯಕ್ಕಿಂತ ಜಾಸ್ತಿ ಬೆಂದರೆ ತಳಹಿಡಿಯುತ್ತದೆ.ಹೀಗಾಗಿ ಸಬ್ಬಕ್ಕಿಯನ್ನು ಬೇಯಿಸುವಾಗ ಎಚ್ಚರ ವಹಿಸಬೇಕು.
-ಕೊನೆಯಲ್ಲಿ ತೆಂಗಿನಕಾಯಿ ತುರಿ ಸೇರಿಸಿ ಸ್ಟೌವ್ ಆಪ್ ಮಾಡಿ.
-ಇದಕ್ಕೆ ಲಿಂಬೆಹಣ್ಣಿನ ರಸ ಸೇರಿಸಿ,ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದ್ರೆ ಸಬ್ಬಕ್ಕಿ ಕಿಚಡಿ ರೆಡಿ ಟು ಸರ್ವ್.

ಸಬ್ಬಕ್ಕಿ ಪಾಯಸ
ಬೇಕಾಗುವ ಸಾಮಗ್ರಿಗಳು: ಸಬ್ಬಕ್ಕಿ-1 ಕಪ್,ತೆಂಗಿನಕಾಯಿ - 3 ಕಪ್,ಸಕ್ಕರೆ-1/4 ಕಪ್,ನೀರು, ತುಪ್ಪ,ಗೋಡಂಬಿ,ದ್ರಾಕ್ಷಿ, ಉಪ್ಪು,ಏಲಕ್ಕಿ ಪುಡಿ

ಮಾಡುವ ವಿಧಾನ:
-ಒಂದು ಪುಟ್ಟ ಪಾತ್ರೆಯಲ್ಲಿ ಸಬ್ಬಕ್ಕಿಯನ್ನು ಒಂದು ಗಂಟೆಗಳ ಕಾಲ ನೆನೆಹಾಕಿ.
-ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ನೀರು ಸೇರಿಸಿ ರುಬ್ಬಿಕೊಳ್ಳಿ.ಇದನ್ನು ತೆಳುವಾದ ಒಂದು ಬಟ್ಟೆಯೊಳಗೆ ಹಾಕಿ ಒಂದು ಪಾತ್ರೆಗೆ ಹಾಲು ಹಿಂಡಿ. 
-ದಪ್ಪ ತಳದ ಪಾತ್ರೆಗೆ ಸಬ್ಬಕ್ಕಿ ಮತ್ತು ನೀರನ್ನು ಹಾಕಿ 3 ನಿಮಿಷ ಬೇಯಿಸಿ.

ನಾಳೆ ಬೆಳಗ್ಗಿನ ತಿಂಡಿಗೆ ಉತ್ತಪ್ಪ ಟ್ರೈ ಮಾಡಿ

-ಇದಕ್ಕೆ ತೆಂಗಿನಕಾಯಿ ಹಾಲು ಸೇರಿಸಿ ಒಂದು ಕುದಿ ಬರಿಸಿ. ಇದಕ್ಕೆ ಸಕ್ಕರೆ, ಉಪ್ಪು ಮತ್ತು ಏಲಕ್ಕಿ ಪುಡಿ ಹಾಕಿ ಮಗುಚಿ ಸ್ವಲ್ಪ ಹೊತ್ತು ಕಾಯಿಸಿ ಸ್ಟೌವ್ ಆಪ್ ಮಾಡಿ.
-ಸಬ್ಬಕ್ಕಿಯನ್ನು ಜಾಸ್ತಿ ಬೇಯಿಸಬೇಡಿ. ಹೆಚ್ಚು ಬೇಯಿಸಿದರೆ ಕರಗಿ ಹೋಗುತ್ತದೆ.
-ಪ್ಯಾನ್‍ಗೆ ತುಪ್ಪ ಹಾಕಿ ಬಿಸಿ ಮಾಡಿ.ಅದಕ್ಕೆ ಗೋಡಂಬಿ ಹಾಗೂ ದ್ರಾಕ್ಷಿ ಹಾಕಿ ಹುರಿದು ಸಬ್ಬಕ್ಕಿ ಪಾಯಸಕ್ಕೆ ಸೇರಿಸಿ. 
-ಸಬ್ಬಕ್ಕಿ ಪಾಯಸವನ್ನು ತೆಂಗಿನಕಾಯಿ ಹಾಲಿನ ಬದಲು ಹಸುವಿನ ಹಾಲು ಬಳಸಿ ಕೂಡ ಮಾಡಬಹುದು. 

click me!