ಚಳಿಯಲ್ಲಿ ಖಾರ ಬೇಕೆನಿಸುವುದು ಈ ಕಾರಣಕ್ಕಂತೆ! ಈ ಪಟ್ಟಿಯಲ್ಲಿ ನೀವಿದ್ದೀರಾ?

By Suvarna News  |  First Published Dec 29, 2019, 11:38 AM IST

ಚಳಿಗಾಲದಲ್ಲಿ ಖಾರ ಪದಾರ್ಥಗಳು ಎಲ್ಲರಿಗೂ ಇಷ್ಟವಾಗುತ್ತವೆ. ಖಾರ ಖಾದ್ಯ ಕಣ್ಣಿಗೆ ಬಿದ್ದ ತಕ್ಷಣ ತಿನ್ನುವ ಬಯಕೆ ಮನದಲ್ಲಿ ಮೂಡುತ್ತದೆ. ಅಂದಹಾಗೇ ನಿಮ್ಮ ಮನಸ್ಸಿನಲ್ಲಿ ಖಾರದ ಬಯಕೆ ಮೂಡಿಸುವ ಶರೀರದ ಅಂಗ ಯಾವುದು ಗೊತ್ತಾ?


ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಖಾರ ಖಾರವಾದ ಮೆಣಸಿನ ಬಜ್ಜಿ ತಿನ್ನಬೇಕು ಎಂಬ ಬಯಕೆ ಆಗುತ್ತದೆ ಅಲ್ಲವೆ? ಚಳಿಗಾಲದಲ್ಲಿ ಖಾರವಾಗಿರುವ ಖಾದ್ಯದ ಪರಿಮಳ ಮೂಗಿಗೆ ಬಡಿದರೆ ಸಾಕು ಬಾಯಿಯಲ್ಲಿ ನೀರಿಳಿಯಲು ಪ್ರಾರಂಭವಾಗುತ್ತದೆ. ಅರೇ, ಇದ್ಯಾಕೆ ನಾಲಿಗೆಗೆ ಇಷ್ಟು ಚಪಲ ಎಂದು ನೀವು ಅಚ್ಚರಿ ಪಡಬಹುದು. ಆದರೆ, ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಚಳಿಯಿಂದ ತಪ್ಪಿಸಿಕೊಂಡು ಬೆಚ್ಚಗಿನ ಅನುಭವ ಪಡೆಯಲು ನಮ್ಮ ದೇಹವೇ ಇಂಥ ಬಯಕೆಯನ್ನು ಹುಟ್ಟು ಹಾಕುತ್ತದೆ ಎನ್ನುತ್ತದೆ ವಿಜ್ಞಾನ.

ಚಳಿಯಲ್ಲಿ ಈ ಅನುಭವ ಹೆಚ್ಚು: ವಾತಾವರಣದಲ್ಲಿ ಉಷ್ಣಾಂಶ ತಗ್ಗಿದಾಗ ದೇಹಕ್ಕೆ ಚಳಿಯ ಅನುಭವವಾಗುತ್ತದೆ. ಚಳಿಗಾಲದಲ್ಲಿ ಶೀತ, ಕೆಮ್ಮು, ಸೇರಿದಂತೆ ಶ್ವಾಸಕೋಶಕ್ಕೆ ಸೋಂಕುಂಟು ಮಾಡುವ ಅನೇಕ ರೋಗಗಳು ಕಾಡುತ್ತವೆ. ಇದಕ್ಕೆ ಕಾರಣ ಚಳಿಗಾಲದಲ್ಲಿ ವಾತಾವರಣದಲ್ಲಿ ವೈರಸ್ ಸೇರಿದಂತೆ ರೋಗಕಾರಕಗಳು ಬಹುಬೇಗ ದ್ವಿಗುಣಗೊಳ್ಳುವುದು. ಇದರಿಂದ ಕಾಯಿಲೆಗಳು ಬಹುಬೇಗ ಹರಡುತ್ತವೆ.

Tap to resize

Latest Videos

ಚಳಿಗಾಲದಲ್ಲಿಈ ಆಹಾರಗಳನ್ನು ಸೇವಿಸಿದರೆ ನಿಮ್ಮ ಆರೋಗ್ಯ ಸೂಪರ್!

ಶ್ವಾಸಕೋಶ ಈ ವೈರಸ್‍ಗಳ ಅಟ್ಯಾಕ್‍ನಿಂದ ತನ್ನನ್ನು ರಕ್ಷಿಸಿಕೊಳ್ಳಲು ಖಾರದ ಮೊರೆ ಹೋಗುತ್ತದೆ. ಖಾರದಲ್ಲಿರುವ ಉಷ್ಣಾಂಶವನ್ನು ಹೆಚ್ಚಿಸುವ ಗುಣಗಳು ಶೀತವನ್ನು ದೇಹದಿಂದ ಹೊರಹಾಕುತ್ತವೆ. ಖಾರ ತಿಂದ ಕೂಡಲೇ ಮೂಗಲ್ಲಿ ನೀರು ಸುರಿಯುವುದನ್ನು ನೀವು ಗಮನಿಸಿರಬಹುದು. ಅಂದರೆ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಶೀತಕಾರಕಗಳನ್ನು ಈ ಮೂಲಕ ಖಾರ ಹೊರ ಹಾಕುತ್ತದೆ.

ಖಾರಕ್ಕೆ ಮನಸೋಲುವ ಶ್ವಾಸಕೋಶ: ಚೀನಾದ ಸಾಂಪ್ರದಾಯಿಕ ವೈದ್ಯಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿನ ಪ್ರತಿ ಅಂಗವೂ ಒಂದೊಂದು ಪರಿಮಳಕ್ಕೆ ಮನಸೋಲುತ್ತದಂತೆ. ಇದರ ಅನ್ವಯ ಶ್ವಾಸಕೋಶ ಖಾರಕ್ಕೆ ಮನಸೋಲುತ್ತದೆ. ಖಾರದಲ್ಲಿನ ಬಿಸಿಯೇರಿಸುವ ಅಂಶ ಶ್ವಾಸಕೋಶವನ್ನು ಆಕರ್ಷಿಸುತ್ತದೆ ಎನ್ನುತ್ತದೆ ಚೀನೀ ವೈದ್ಯಶಾಸ್ತ್ರ.

ಬಿಸಿಯೇರಿಸುವ ಖಾರ: ಚಳಿಯಿರುವ ವಾತಾವರಣದಲ್ಲಿ ಖಾರವನ್ನು ಸೇವಿಸಿದ ತಕ್ಷಣ ದೇಹದ ಉಷ್ಣತೆ ಹೆಚ್ಚುತ್ತದೆ. ಇದು ದೇಹದಲ್ಲಿ ಶಕ್ತಿ ಹಾಗೂ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಜೊತೆಗೆ ತೂಕ ಕಳೆದುಕೊಳ್ಳಲು ಕೂಡ ನೆರವು ನೀಡುತ್ತದೆ. 

ಬಾಣಂತಿಯರನ್ನು ಬೆಚ್ಚಗಿರಿಸುವ ಖಾರ: ಬಾಣಂತಿಗೆ ಶೀತವಾದರೆ ಅದರ ಪರಿಣಾಮ ಮಗುವಿನ ಮೇಲೂ ಆಗುತ್ತದೆ. ಇದೇ ಕಾರಣಕ್ಕೆ ಬಾಣಂತಿಯರನ್ನು ಮನೆಯ ಹೊರಗಡೆ ಹೋಗಲು ಬಿಡದೆ ಕೋಣೆಯೊಳಗೆ ಇರುವಂತೆ ಹಿರಿಯರು ಸಲಹೆ ನೀಡುತ್ತಾರೆ. ಹಳೆಯ ಕಾಲದ ಮನೆಗಳಲ್ಲಿ ಬಾಣಂತಿ ಕೋಣೆ ಎಂದೇ ಕರೆಯಲ್ಪಡುವ ಒಂದು ಬೆಚ್ಚಗಿನ ರೂಮ್ ಇರುತ್ತಿತ್ತು. ದೇಹಕ್ಕೆ ಹೊರಗಿನಿಂದ ಬೆಚ್ಚಗಿನ ಅನುಭವ ನೀಡಲು ಬಾಣಂತಿಯರು ಸ್ವೆಟರ್, ಸ್ಕಾರ್ಪ್‍ಗಳನ್ನು ಧರಿಸುತ್ತಾರೆ. ಬಾಣಂತಿಯರಿಗೆ ಶುಂಠಿ, ಕರಿಮೆಣಸು, ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲುಕಾರಣ ಈ ಪದಾರ್ಥಗಳಲ್ಲಿರುವ ಖಾರದ ಗುಣ. ಇವುಗಳನ್ನು ನೀಡುವುದರಿಂದ ದೇಹ ಒಳಗಿನಿಂದ ಬೆಚ್ಚಗಿರುತ್ತದೆ. ಅಲ್ಲದೆ, ಶೀತ ಹಾಗೂ ಕೆಮ್ಮು ಕಾಡುವುದಿಲ್ಲ. 

ಬೆಚ್ಚಗಿರಿಸುವ ಪದಾರ್ಥಗಳು: ಖಾರವಾಗಿರುವ ಪದಾರ್ಥಗಳೆಲ್ಲವೂ ದೇಹಕ್ಕೆ ಉತ್ತಮವಲ್ಲ. ಕೆಲವೊಂದು ಪದಾರ್ಥಗಳು ಮಾತ್ರ ದೇಹದ ಆರೋಗ್ಯವನ್ನು ಕಾಪಾಡಬಲ್ಲವು. ಶುಂಠಿ, ಬೆಳ್ಳುಳ್ಳಿ, ಕರಿಮೆಣಸು ರುಚಿಯಲ್ಲಿ ಖಾರವಾಗಿರುವ ಜೊತೆಗೆ ದೇಹಕ್ಕೂ ಹಿತಕರವಾಗಿವೆ. ಇವುಗಳಲ್ಲಿ ಶೀತದ ವಿರುದ್ಧ ಹೋರಾಡುವ ಗುಣಗಳು ಕೂಡ ಅಡಗಿರುವುದು ವಿಶೇಷ.
ಎಲ್ಲರಿಗೂ ಹಿಡಿಸಲ್ಲ: ಕೆಲವರಿಗೆ ಖಾರ ಪದಾರ್ಥಗಳು ಹಿಡಿಸುವುದಿಲ್ಲ. ಉಷ್ಣ ಪ್ರಕೃತಿಯ ಶರೀರ ಹೊಂದಿರುವವರಿಗೆ ಸ್ವಲ್ಪ ಖಾರ ತಿಂದರೂ ಅದರಿಂದ ದುಷ್ಪರಿಣಾಮಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದಕಾರಣ ನಿಮಗೆ ಖಾರ ತಿಂದರೆ ಏನೂ ಆಗುವುದಿಲ್ಲ ಎಂದಾದರೆ ಮಾತ್ರ ಸೇವಿಸಿ.

ಖಾರ ಹೃದಯದ ಮಿತ್ರ: ಖಾರ ಹೆಚ್ಚಿರುವ ಖಾದ್ಯಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯ ಕಾಪಾಡುತ್ತವೆ. ಖಾರ ಪದಾರ್ಥ ಸೇವಿಸಿದಾಗ ದೇಹದ ಉಷ್ಣತೆ ಹೆಚ್ಚುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಕರಗಲು ಕಾರಣವಾಗುತ್ತದೆ. 

ಮಾನಸಿಕ ಆರೋಗ್ಯಕ್ಕೂ ಹಿತಕರ: ಖಾರ ಪದಾರ್ಥಗಳು ಶರೀರದಲ್ಲಿ ಸೆರೊಟೊನಿನ್ ಹಾರ್ಮೋನ್‍ಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತವೆ. ಆ ಮೂಲಕ ಒತ್ತಡ, ಉದ್ವೇಗ ಹಾಗೂ ಕೋಪವನ್ನು ಕಡಿಮೆ ಮಾಡುತ್ತವೆ.  

ಸಕ್ಕರೆ ಮೇಲೆ ಅಕ್ಕರೆ ಹೆಚ್ಚಿದ್ರೆ ಖಿನ್ನತೆ ಕಾಡಿತು ಜೋಕೆ!

click me!