
ಬೆಂಗಳೂರು: ಜಿಲೇಬಿ ಎಂದಾಕ್ಷಣ ಸಕ್ಕರೆಯಲ್ಲಿ ಮುಳುಗಿದ ಸಿಹಿಯಾದ, ಬಾಯಲ್ಲಿ ಕರಗುವ ಜಿಲೇಬಿ ನೆನಪಾಗುತ್ತದೆ. ಸಾಮಾನ್ಯವಾಗಿ ಜಿಲೇಬಿ ತಯಾರಿಸಲು ಮೈದಾ ಅಥವಾ ಇತರ ಹಿಟ್ಟನ್ನು ಬಳಸುತ್ತಾರೆ. ಆದರೆ ಮೈದಾ, ಗೋಧಿಹಿಟ್ಟು, ಸಕ್ಕರೆ ಹಾಗೂ ಫುಡ್ ಕಲರ್ ಬಳಸದೇ ರುಚಿಯಾದ ಜಿಲೇಬಿ ತಯಾರಿಸಬಹುದು ಎಂದರೆ ನಂಬುತ್ತೀರಾ? ಹೌದು, ಮನೆಯಲ್ಲೇ ಸುಲಭವಾಗಿ ಸಿಗುವ ರವೆ ಮತ್ತು ಬೆಲ್ಲ ಬಳಸಿ ರುಚಿಯಾದ ರವೆ ಜಿಲೇಬಿ ಮಾಡಬಹುದು. ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆ ಟೀ ಜೊತೆ ಸಿಹಿ ತಿನ್ನಬೇಕು ಎನ್ನಿಸಿದಾಗ ಈ ಜಿಲೇಬಿ ಟ್ರೈ ಮಾಡಬಹುದು.
ರವೆ ಜಿಲೇಬಿಗೆ ಬೇಕಾಗುವ ಸಾಮಗ್ರಿಗಳು
ರವೆ – 1 ಕಪ್
ಮೊಸರು – ½ ಕಪ್
ಬೆಲ್ಲ – 1¼ ಕಪ್
ಅರಿಶಿನ ಪುಡಿ – ¼ ಟೀಸ್ಪೂನ್
ಏಲಕ್ಕಿ ಪುಡಿ – ¼ ಟೀಸ್ಪೂನ್
ನಿಂಬೆರಸ – 2 ಟೀಸ್ಪೂನ್
ಬೇಕಿಂಗ್ ಸೋಡಾ – ½ ಟೀಸ್ಪೂನ್
ರವೆ ಜಿಲೇಬಿ ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ 1 ಕಪ್ ರವೆ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಜಿಲೇಬಿಗೆ ಬೇಕಾದ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟನ್ನು ಸ್ವಲ್ಪ ಸಮಯ ನೆನೆಯಲು ಬಿಡಿ. ಬಳಿಕ ಅದಕ್ಕೆ ಅರಿಶಿನ ಪುಡಿ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಜಿಲೇಬಿ ಹಿಟ್ಟಿಗೆ ಕೊನೆಯಲ್ಲಿ ಬೇಕಿಂಗ್ ಸೋಡಾ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿಕೊಳ್ಳಿ. ಇನ್ನೊಂದೆಡೆ ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಸ್ವಲ್ಪ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ಬಳಿಕ ಪಾಕವನ್ನು ತಯಾರಿಸಿಕೊಳ್ಳಿ. ಇದಕ್ಕೆ ನಿಂಬೆರಸ ಸೇರಿಸುವುದರಿಂದ ಪಾಕವು ಗಟ್ಟಿಯಾಗುವುದನ್ನು ತಪ್ಪಿಸಬಹುದು.
ನಂತರ ತಯಾರಿಸಿದ ರವೆ ಹಿಟ್ಟನ್ನು ಜಿಲೇಬಿ ಮಾಡುವ ಕೋನ್ ಅಥವಾ ಸ್ಕ್ವೀಝ್ ಬಾಟಲಿಗೆ ಹಾಕಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಹಿಟ್ಟನ್ನು ವೃತ್ತಾಕಾರವಾಗಿ ಹಾಕಿ ಜಿಲೇಬಿಯ ಆಕಾರದಲ್ಲಿ ಕರಿಯಿರಿ. ಎರಡೂ ಬದಿಗಳು ಚೆನ್ನಾಗಿ ಬೇಯಿ ಗರಿಗರಿಯಾದ ಬಳಿಕ ಜಿಲೇಬಿಯನ್ನು ತೆಗೆದು ಬಿಸಿ ಬೆಲ್ಲದ ಪಾಕಕ್ಕೆ ಹಾಕಿ. ಕೆಲವು ನಿಮಿಷ ಪಾಕದಲ್ಲಿ ನೆನೆಸಿದ ಬಳಿಕ ಹೊರತೆಗೆದರೆ ರುಚಿಯಾದ ರವೆ ಜಿಲೇಬಿ ಸವಿಯಲು ಸಿದ್ಧ.
ಸಕ್ಕರೆ ಬದಲು ಬೆಲ್ಲದ ಬಳಕೆ
ಈ ರೆಸಿಪಿಯ ವಿಶೇಷತೆ ಎಂದರೆ ಸಕ್ಕರೆಯ ಬದಲು ಬೆಲ್ಲವನ್ನು ಬಳಸಿರುವುದು. ಹಾಗೆಯೇ ಜಿಲೇಬಿಗೆ ಬಣ್ಣ ತರಲು ಪ್ರತ್ಯೇಕ ಫುಡ್ ಕಲರ್ ಬಳಸುವ ಬದಲು ಸ್ವಲ್ಪ ಅರಿಶಿನ ಪುಡಿ ಬಳಸಲಾಗಿದೆ.ಮನೆಯಲ್ಲಿರುವ ಸರಳ ಸಾಮಗ್ರಿಗಳಲ್ಲೇ ವಿಭಿನ್ನ ರೀತಿಯ ಜಿಲೇಬಿ ತಯಾರಿಸಬೇಕೆಂದಿದ್ದರೆ ಈ ರವೆ ಜಿಲೇಬಿ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.