
ತುಪ್ಪದ ಬೆಲೆ ಸಮಾಜಕ್ಕೆ ತಿಳಿದಿಲ್ಲ. ಪುರಾಣ ಘೃತ, ಮಹಾಘೃತಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇವುಗಳ ಮೌಲ್ಯ ಸಮಾಜಕ್ಕೆ ಗೊತ್ತಾದರೆ ಬಹುಶಃ ಇವುಗಳಿಗೆ ಬಿಗಿ ಭದ್ರತೆಯನ್ನು ಒದಗಿಸುವ ಸಂದರ್ಭ ಬರಬಹುದು ಎಂದು ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.
ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಹತ್ತು ವರ್ಷ ಹಳೆಯದಾದ ತುಪ್ಪವನ್ನು ಪುರಾಣ ಘೃತ, ಹತ್ತು ವರ್ಷದ ನಂತರದ ತುಪ್ಪವನ್ನು ಪ್ರಪುರಾಣ ಘೃತ, ನೂರು ವರ್ಷದ ತುಪ್ಪವನ್ನು ಕುಂಭ ಸರ್ಪಿ, ಮಹಾಘೃತ ಎಂದು ಕರೆಯಲಾಗಿದ್ದು, ಇವುಗಳು ಮಹೌಷಧವಾಗಿ ಕಾರ್ಯ ನಿರ್ವಹಿಸುತ್ತವೆ. ಯೋಗರತ್ನಾಕರವು ಮಹಾಘೃತದ ಕುರಿತಾಗಿ ಹೇಳುತ್ತಾ ಇದಕ್ಕೆ ಭೂತೋಚ್ಚಾಟನೆ ಮಾಡುವ ದೈವೀಶಕ್ತಿಯೂ ಇದೆ ಎಂಬುದನ್ನು ಉಲ್ಲೇಖಿಸಿದೆ. ತುಪ್ಪದ ಗುಣಗಳನ್ನು ಹೇಳಿ ಮುಗಿಯುವುದಲ್ಲ ಎಂದರು.
ಕ್ಷೀರ ಕುಟುಂಬದ ವಿವಿಧ ಪದಾರ್ಥಗಳ ಆಯಸ್ಸು ಸಂಸ್ಕಾರವಾದಂತೆ ಹೆಚ್ಚುತ್ತಾ ಹೋಗುತ್ತದೆ. ಹಾಲು, ಮೊಸರು, ಬೆಣ್ಣೆಗಳ ಆಯಸ್ಸು ಸೀಮಿತ ಅವಧಿಯಾದರೆ, ತುಪ್ಪದ ಆಯಸ್ಸು ಅದು ಮುಗಿಯದ ಆಯಸ್ಸು. ತುಪ್ಪಕ್ಕೆ ಅವಧಿ ಮುಕ್ತಾಯ ಎಂಬುದೇ ಇಲ್ಲ. ಹಳತಾದಂತೆ ಅದರ ಗುಣ ಹೆಚ್ಚುತ್ತಾ ಹೋಗುತ್ತದೆ. ಹಾಲೇ ತುಪ್ಪದ ಮೂಲವಾದರೂ, ಹಾಲಿಗಿಂತ ಎಷ್ಟೋ ಪಾಲು ಗುಣದ ವೃದ್ಧಿಯನ್ನು ತುಪ್ಪದಲ್ಲಿ ಕಾಣಬಹುದು. ಹಾಗಾಗಿ ತುಪ್ಪ ಹಾಲಿನ ಕುಟುಂಬದ ಚಕ್ರವರ್ತಿ ಎಂದು ಅಭಿಪ್ರಾಯಪಟ್ಟರು.
ಪನ್ನೀರಿಗೆ ಆಯುರ್ವೇದದಲ್ಲಿ ಕಿಲಾಟ ಎನ್ನಲಾಗಿದೆ. ಪನ್ನೀರು ಇಂದಿನ ಜಗತ್ತಿನಲ್ಲಿ ಬಹುಜನಪ್ರಿಯವಾಗಿದ್ದು, ಇದನ್ನು ಯಥೇಚ್ಛವಾಗಿ ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಬಳಕೆಗೆ ಸೂಕ್ತವಲ್ಲ. ಇದು ಇಂದಿನ ಜಗತ್ತಿಗೆ ಪ್ರಿಯ ಆಹಾರ. ಆದರೆ ಇದು ಹಿತ ಆಹಾರವಲ್ಲ ಎಂದರು.
ದೇಹದಲ್ಲಿನ ಹಳೆಯ ಕೊಬ್ಬನ್ನು ತೆಗೆಯುವ ಸಾಮರ್ಥ್ಯ ತುಪ್ಪಕ್ಕಿದೆ. ಆಧುನಿಕರು ತುಪ್ಪದ ಬಗ್ಗೆ ಯಾವ ಅಭಿಪ್ರಾಯವನ್ನು ಹೊಂದಿದ್ದಾರೋ ಅದಕ್ಕೆ ತದ್ವಿರುದ್ಧವಾದ ಸ್ವಭಾವವನ್ನು ನಿಜವಾದ ತುಪ್ಪ ಹೊಂದಿದೆ. ತುಪ್ಪ ಕೊಲೆಸ್ಟ್ರಾಲ್ ಆಗಿ ದೇಹಕ್ಕೆ ಬಾಧಿಸುವುದಿಲ್ಲ. ಆದರೆ ದೇಹದಲ್ಲಿರುವ ಬೇಡದ ಕೊಬ್ಬನ್ನು ತುಪ್ಪ ತೆಗೆಯುತ್ತದೆ ಎಂದು ವಿವರಿಸಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.