
ಬೆಳಗ್ಗೆ ತಿಂಡಿ ಏನು ಮಾಡಬೇಕು ಅನ್ನೋದು ಬಹುತೇಕ ಎಲ್ಲಾ ಗೃಹಿಣಿಯರ ಮಿಲಿಯನ್ ಡಾಲರ್ ಪ್ರಶ್ನೆ. ಇಡ್ಲಿ, ದೋಸೆ ಅಂತಹ ತಿಂಡಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಅವಲಕ್ಕಿಯಾದ್ರೆ ತಣ್ಣಗಾದ ನಂತ್ರ ತಿನ್ನಲು ಆಗಲ್ಲ. ಉಪ್ಪಿಟ್ಟು ಅಂದ್ರೆ ಮಕ್ಕಳಿಂದ ಹಿಡಿದು ದೊಡ್ಡವರು ಸಹ ಮೂಗು ಮುರಿಯುತ್ತಾರೆ. ಇಂದು ನಾವು ನಿಮಗೆ ಕಡಿಮೆ ಸಮಯದಲ್ಲಿ ರುಚಿಯಾದ ನ್ಯೂಸ ವರ್ಷನ್ ಉಪ್ಪಿಟ್ಟು ತಯಾರಿಸೋದು ಹೇಗೆ ಅಂತ ಹೇಳುತ್ತಿದ್ದೇವೆ. ಹೀಗೆ ಮಾಡೋದರಿಂದ ಉಪ್ಪಿಟ್ಟು ಹೊಸ ರುಚಿಯನ್ನು ಪಡೆಯುತ್ತದೆ. ನ್ಯೂ ವರ್ಷನ್ ಉಪ್ಪಿಟ್ಟು ಮಾಡೋದು ಹೇಗೆ ಎಂದು ನೋಡೋಣ ಬನ್ನಿ.
ರವೆ: 200 ಗ್ರಾಂ (ಬನ್ಸಿ/ದಪ್ಪ ರವೆ)
ಮೊಳಕೆಯೊಡೆದ ಹುರುಳಿ ಕಾಳು: 50 ಗ್ರಾಂ
ಸಬ್ಬಿಸಿಗೆ ಸೊಪ್ಪು: ಒಂದು ಹಿಡಿಯಷ್ಟು
ಟೊಮೆಟೋ: ಎರಡು (ಚಿಕ್ಕದು)
ನಿಂಬೆಹಣ್ಣಿನ ಗಾತ್ರದಷ್ಟು ಹುಣಸೆ ಹಣ್ಣು
ಕಡಲೆಬೇಳೆ: 1 ಟೀ ಸ್ಪೂನ್
ಉದ್ದಿನಬೇಳೆ: 1 ಟೀ ಸ್ಪೂನ್
ಸಾಸವೆ-ಜೀರಿಗೆ: 1 ಟೀ ಸ್ಪೂನ್
ಈರುಳ್ಳಿ: ಒಂದು (ದೊಡ್ಡ ಗಾತ್ರದ್ದು)
ಹಸಿಮೆಣಸಿನಕಾಯಿ: ನಾಲ್ಕರಿಂದ ಐದು
ಕೋತಂಬರಿ ಸೊಪ್ಪು
ಕರೀಬೇವು: 10 ರಿಂದ 12 ಎಲೆ
ಅಡುಗೆಎಣ್ಣೆ: 4 ರಿಂದ 5 ಟೀ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ಮೊದಲಿಗೆ ಈರುಳ್ಳಿ, ಟೊಮೆಟೋ, ಕೋತಂಬರಿ ಸೊಪ್ಪು ಮತ್ತು ಹಸಿಮೆಣಸಿನಕಾಯಿಯನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ನಂತರ ರವೆಯನ್ನು ಮಧ್ಯಮ ಉರಿಯಲ್ಲಿ ಐದರಿಂದ ಆರು ನಿಮಿಷ ಹುರಿದುಕೊಂಡು ಎತ್ತಿಟ್ಟುಕೊಳ್ಳಿ.
ನಂತರ ಒಲೆ ಆನ್ ಮಾಡಿಕೊಂಡು ಪಾತ್ರೆಯನ್ನಿಟ್ಟುಕೊಂಡು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಸಾಸಿವೆ-ಜೀರಿಗೆ ಸೇರಿಸಿಕೊಳ್ಳಿ. ನಂತರ ಕಡಲೆಬೇಳೆ, ಉದ್ದಿನಬೇಳೆ ಸೇರಿಸಿಕೊಳ್ಳಿ. ಈಗ ಕತ್ತರಿಸಿಕೊಂಡಿರುವ ಟೊಮೆಟೋ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿಕೊಂಡು ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ. ತದನಂತರ ಇದಕ್ಕೆ ಕರಿಬೇವು ಹಾಕಿಕೊಳ್ಳಿ.
ಈಗ ಇದಕ್ಕೆ ಮೊಳಕೆ ಹುರುಳಿ ಕಾಳು ಮತ್ತು ಸಬ್ಬಿಸಿಗೆ ಸೊಪ್ಪು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮೂರರಿಂದ ನಾಲ್ಕು ನಿಮಿಷ ಬೇಯಿಸಿಕೊಳ್ಳಿ. ಈಗ ಒಂದು ಲೋಟದಷ್ಟು ನೀರು ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕತ್ತರಿಸಿದ ಕೋತಂಬರಿ ಸೊಪ್ಪು ಸೇರಿಸಿಕೊಳ್ಳಿ. ನೀರು ಕುದಿಯಲು ಆರಂಭಿಸಿದಾಗ ಉರಿಯನ್ನು ಕಡಿಮೆ ಮಾಡಿಕೊಂಡು ರವೆ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಐದು ನಿಮಿಷ ಬೇಯಿಸಿದ್ರೆ ರುಚಿಯಾದ ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.