ಕಡಿಮೆ ಪದಾರ್ಥ, ಕಡಿಮೆ ಖರ್ಚು.. ಹೋಟೆಲ್ ಸ್ಟೈಲ್‌ನಲ್ಲಿ ಮನೆಯಲ್ಲೇ ಮಾಡಿ ಮೈಸೂರು ಮಟನ್ ಪಲಾವ್

Published : May 23, 2026, 08:19 PM IST
Mysore Mutton Pulao Recipe

ಸಾರಾಂಶ

Mysore Mutton Pulao Recipe: ಮೈಸೂರು ಅಂದ ಕೂಡಲೇ ನೆನಪಾಗುವುದು ಅಲ್ಲಿನ ಅರಮನೆ ಮತ್ತು ಅದ್ಭುತ ಅಡುಗೆಗಳು ಅಲ್ಲವೇ, ಅದೇ ಸಾಲಿಗೆ ಸೇರುತ್ತೆ ಈ 'ಮೈಸೂರು ಮಟನ್ ಪಲಾವ್'. ಇದರ ಮಸಾಲೆ ಘಮ ಇಡೀ ಮನೆಯನ್ನು ತುಂಬುವುದಲ್ಲದೆ, ನಾಲಿಗೆಯಲ್ಲಿ ನೀರೂರಿಸುತ್ತೆ. ಹಾಗಾದರೆ ಈ ಸ್ವಾದಿಷ್ಟ ಪಲಾವ್ ರೆಸಿಪಿ ಮಾಡೋದು ಹೇಗೆ ನೋಡೋಣ ಬನ್ನಿ... 

ಯಾವಾಗಲೂ ತಿನ್ನುವ ರೆಗ್ಯುಲರ್ ದಮ್ ಬಿರಿಯಾನಿ ತಿಂದು ಬೋರ್ ಆಗಿದೆಯೇ? ಹಾಗಾದರೆ ನಿಮ್ಮ ನಾಲಿಗೆಗೆ ಹೊಸ ರುಚಿಯನ್ನು ಕೊಡುವ, ಸ್ವಲ್ಪ ವಿಭಿನ್ನ ಮತ್ತು ಅತ್ಯಂತ ರುಚಿಕರವಾಗಿರುವ 'ಮೈಸೂರು ಮಟನ್ ಪಲಾವ್' ಟ್ರೈ ಮಾಡಿ. ಹಸಿರು ಮಸಾಲೆಯೊಂದಿಗೆ ತಯಾರಾಗುವ ಈ ಪಲಾವ್‌ನ ಘಮವು ನಿಮ್ಮ ಇಡೀ ಮನೆ ಪಸರಿಸುವುದಲ್ಲದೆ, ಇದರ ಅದ್ಭುತ ರುಚಿ ನೋಡಿದ ನಂತರ ನಿಮ್ಮ ಕುಟುಂಬದ ಸದಸ್ಯರು ಫಿದಾ ಆಗ್ತಾರೆ. ಹಾಗಾದರೆ ಟೇಸ್ಟಿ ಮೈಸೂರು ಮಟನ್ ಪಲಾವ್ ಹೇಗೆ ತಯಾರಿಸುವುದು ಎಂಬುದು ಇಲ್ಲಿದೆ ನೋಡಿ.

ಮೈಸೂರು ಮಟನ್ ಪಲಾವ್ ತಯಾರಿಸಲು ಬೇಕಾಗುವ ಪದಾರ್ಥಗಳು

ಕೊತ್ತಂಬರಿ ಸೊಪ್ಪು - ಅರ್ಧ ಕಟ್ಟು
ಹಸಿಮೆಣಸಿನಕಾಯಿ - 10
ಶುಂಠಿ - 100 ಗ್ರಾಂ
ಬೆಳ್ಳುಳ್ಳಿ - 50 ಗ್ರಾಂ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಸ್ವಲ್ಪ
ಏಲಕ್ಕಿ - 18
ಲವಂಗ - 15
ದಾಲ್ಚಿನ್ನಿ - 4 ಇಂಚಿನ ತುಂಡು
ಅರಿಶಿನ - ಚಿಟಿಕೆ
ಸೋನಾ ಮಸೂರಿ ಅಕ್ಕಿ - 2 ಕಪ್
ಬಾಸ್ಮತಿ ಅಕ್ಕಿ - 1 ಕಪ್
ಮಟನ್ - 1 ಕಿಲೋ
ತುಪ್ಪ ಮತ್ತು ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
ಈರುಳ್ಳಿ - 2 ದೊಡ್ಡದು
ಟೊಮೆಟೊ - 2

ತಯಾರಿಸುವ ವಿಧಾನ

*ಮೊದಲು ಸ್ಟವ್ ಹಚ್ಚಿ ಪಾತ್ರೆ ಅಥವಾ ಕುಕ್ಕರ್ ಇಡಿ. ಅದರಲ್ಲಿ ಅಗತ್ಯವಿರುವಷ್ಟು ತುಪ್ಪ ಮತ್ತು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಿರಿ. ಆನಂತರ ಟೊಮೆಟೊ ಚೂರುಗಳನ್ನು ಹಾಕಿ ಮೆತ್ತಗಾಗುವವರೆಗೆ ಬೇಯಿಸಿ.
*ಈ ಮಧ್ಯೆ ಮಿಕ್ಸಿ ಜಾರ್‌ನಲ್ಲಿ ಏಲಕ್ಕಿ, ಲವಂಗ, ದಾಲ್ಚಿನ್ನಿ, ಸ್ವಲ್ಪ ಉಪ್ಪು ಮತ್ತು ಅರಿಶಿನ ಹಾಕಿ ನುಣ್ಣಗೆ ಪುಡಿ ಮಾಡಿ ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.
*ಪಾತ್ರೆಯಲ್ಲಿ ಟೊಮೆಟೊ ಮೆತ್ತಗಾದ ನಂತರ, ಅದಕ್ಕೆ ಶುಚಿಗೊಳಿಸಿದ 1 ಕಿಲೋ ಮಟನ್ ಹಾಕಿ ಚೆನ್ನಾಗಿ ಬೆರೆಸಿ. ಇದರೊಂದಿಗೆ ನಾವು ಮೊದಲೇ ಸಿದ್ಧಪಡಿಸಿದ ಮಸಾಲೆ ಪುಡಿಯನ್ನು ಹಾಕಿ ಮಟನ್ ತುಂಡುಗಳಿಗೆ ಹಿಡಿಯುವಂತೆ ಚೆನ್ನಾಗಿ ಕಲಸಿ. ಮಟನ್ ಬೇಯಲು ಅಗತ್ಯವಿರುವಷ್ಟು ನೀರು ಹಾಕಿ ಸುಮಾರು 40 ನಿಮಿಷಗಳ ಕಾಲ ಬೇಯಿಸಿ. ಕುಕ್ಕರ್ ಬಳಸುವುದಾದರೆ ಮಟನ್ ಎಳೆತನಕ್ಕೆ ತಕ್ಕಂತೆ 5-6 ವಿಷಲ್ ಬರಿಸಬೇಕು.
*ಈ ಸಮಯದಲ್ಲಿ ಮಿಕ್ಸಿ ಜಾರ್‌ಗೆ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಉಪ್ಪು ಮತ್ತು ಸ್ವಲ್ಪ ಎಣ್ಣೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಟ್ಟುಕೊಳ್ಳಿ.
*ಮಟನ್ ಚೆನ್ನಾಗಿ ಬೆಂದ ನಂತರ, ಅದಕ್ಕೆ ರುಬ್ಬಿಕೊಂಡ ಕೊತ್ತಂಬರಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಸ್ವಲ್ಪ ಹೊತ್ತು ಬೇಯಿಸಿ.
*ಈಗ ಅಕ್ಕಿಗೆ ಸರಿಯಾಗುವಷ್ಟು ನೀರು ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನು ಪರೀಕ್ಷಿಸಿಕೊಳ್ಳಿ. ನೀರು ಕುದಿಯುತ್ತಿರುವಾಗ ಒಂದು ಗಂಟೆ ನೆನೆಸಿಟ್ಟ ಸೋನಾ ಮಸೂರಿ ಮತ್ತು ಬಾಸ್ಮತಿ ಅಕ್ಕಿಯ ಮಿಶ್ರಣವನ್ನು ಅದಕ್ಕೆ ಹಾಕಿ ಮೆಲ್ಲಗೆ ಕಲಸಿ.
*ಅಕ್ಕಿ ಅರ್ಧದಷ್ಟು ಬೆಂದು, ನೀರು ಕಡಿಮೆಯಾಗುತ್ತಿರುವಾಗ ಉರಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ (ಸಿಮ್). ಗಾಳಿ ಹೊರಹೋಗದಂತೆ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ 20 ನಿಮಿಷಗಳ ಕಾಲ ದಮ್ ಮಾಡಿ.
*20 ನಿಮಿಷಗಳ ನಂತರ ಸ್ಟವ್ ಆಫ್ ಮಾಡಿ. ತಕ್ಷಣ ಮುಚ್ಚಳ ತೆಗೆಯದೆ, ಸುಮಾರು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಆಗಲೇ ಮಸಾಲೆಯ ಪರಿಮಳವೆಲ್ಲಾ ಅನ್ನಕ್ಕೆ ಹಿಡಿದು ಪಲಾವ್ ಬಿಡಿಬಿಡಿಯಾಗಿ, ಅದ್ಭುತವಾಗಿ ಬರುತ್ತದೆ.

ಅಷ್ಟೇ.. ಘಮಘಮಿಸುವ, ಬಾಯಲ್ಲಿ ನೀರೂರಿಸುವ ಅಪ್ಪಟ ಮೈಸೂರು ಮಟನ್ ಪಲಾವ್ ರೆಡಿ! ಇದನ್ನು ಈರುಳ್ಳಿ ರೈತಾದೊಂದಿಗೆ ಬಿಸಿಬಿಸಿಯಾಗಿ ಬಡಿಸಿದರೆ ಆ ರುಚಿಗೆ ಯಾರಾದರೂ ಸಲಾಮ್ ಹೊಡೆಯಲೇಬೇಕು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಉಗುರುಗಳ ಬಣ್ಣ, ಆಕಾರವೇ ಹೇಳುತ್ತೆ ನಿಮ್ಮ ಆರೋಗ್ಯದ ಗುಟ್ಟು: ಶಾಕಿಂಗ್ ಸಂಗತಿ ಹೇಳಿದ ತಜ್ಞರು!
Diabetes Fruits: ಸಕ್ಕರೆ ಕಾಯಿಲೆ ಕಂಟ್ರೋಲ್‌ ಮಾಡುವ 9 ಹಣ್ಣುಗಳಿವು!