ಅಬ್ಬಾ, ಈರುಳ್ಳಿ ಹೆಚ್ಚೋದು ಅಂದ್ರೆ ದೊಡ್ಡ ತಲೆ ನೋವು. ಕೆಲವರಿಗಂತೂ ಇದನ್ನು ಹೆಚ್ಚುವಾಗ ಗಂಗೆಯೇ ಹರಿದಿರುತ್ತಾಳೆ. ಕಣ್ಣೀರು ಬಾರದಂತೆ ಏನೇನೋ ಕಸರತ್ತೂ ಮಾಡುತ್ತಾರೆ ಮತ್ತೆ ಕೆಲವರು. ಇಲ್ಲೊಂದು ಈರುಳ್ಳಿ ಇದೆ. ಕಣ್ಣಲ್ಲಿ ನೀರು ತರಿಸೋಲ್ಲ. ಆದರೆ, ಖಾರವೂ ಇರೋಲ್ಲ. ಅಷ್ಟೇ ಅಲ್ಲ, ಸಿರಿ ಇರುತ್ತೆ. ಆದರೆ....
ನೀರುಳ್ಳಿ ಅಥವಾ ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರುವುದು ಸಹಜ. ಆದರೆ ಈ ನೀರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರೇ ಬರುವುದಿಲ್ಲ. ಏಕೆಂದರೆ ಇದು ಸಿಹಿ ನೀರುಳ್ಳಿ. ಈ ಸಿಹಿಯೇ ಇದರ ವಿಶೇಷತೆ.
ಹೌದು. ಇದು ಕಮಟಾ ನೀರುಳ್ಳಿ.
ಸಲಾಡ್ ನೀರುಳ್ಳಿ ಅಥವಾ ಸಿಹಿ ನೀರುಳ್ಳಿ ಎಂದು ಕರೆಯಲ್ಪಡುವ ಈ ನೀರುಳ್ಳಿ ಕುಮಟಾದ ಹೆಗ್ಗುರುತು. ಹೆಚ್ಚಾಗಿ ಸಲಾಡ್ ಮಾಡಲು ಬಳಸುವ ಇದು ತಿಳಿ ಗುಲಾಬಿ ಬಣ್ಣ ಹಾಗೂ ಚಿಕ್ಕ ಗಾತ್ರದಿಂದ ಗ್ರಾಹಕರನ್ನು ಸೆಳೆಯುತ್ತದೆ.
ರಾಷ್ಟ್ರೀಯ ಹೆದ್ದಾರಿ 66ರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆದ್ದಾರಿಯ ಗುಂಟ ಸಿಗುವ ಊರುಗಳಾದ ಹಂದಿಗೋಣು, ಅಳ್ವೇಕೋಡಿ, ಕುಮಟಾ ವನಳ್ಳಿ, ಗೋಕರ್ಣ ಪರಿಸರದಲ್ಲಿ ಮಾತ್ರ ಬೆಳೆಯುವ ಸಿಹಿ ನೀರುಳ್ಳಿ ಇಲ್ಲಿಯ ವಿಶೇಷತೆಗಳಲ್ಲೊಂದು.
ಈರುಳ್ಳಿ ಹೆಚ್ಚುವಾಗ ಈ ಟ್ರಿಕ್ ಮಾಡಿದರೆ ಕಣ್ಣಲ್ಲಿ ನೀರು ಬರೋಲ್ಲ
ಇಲ್ಲಿಂದ ಗೋವಾ, ಕೇರಳ, ಬೆಂಗಳೂರು, ಮುಂಬಯಿ, ಮಂಗಳೂರುವರೆಗೂ ರಫ್ತಾಗುತ್ತವೆ. ಈ ನೀರುಳ್ಳಿಯ ಸೀಸನ್ ಮಾರ್ಚ್, ಏಪ್ರಿಲ್, ಮೇ ತಿಂಗಳು. ರಸ್ತೆ ಬದಿಯ ಅಂಗಡಿಗಳಲ್ಲೇ ಗ್ರಾಹಕರನ್ನು ಸೆಳೆಯುತ್ತಾ, ಅಲ್ಲೇ ಹೆಚ್ಚು ಮಾರಾಟವೂ ಆಗುತ್ತವೆ.
ಇದರ ಇನ್ನೊಂದು ವಿಶೇಷತೆಯೆಂದರೆ ಸರಿಯಾಗಿ ಒಣಗಿಸಿಟ್ಟರೆ, ವರ್ಷಗಟ್ಟಲೆ ಇಟ್ಟರೂ ಕೆಡುವುದೂ ಇಲ್ಲ. ಮೊದಲೆಲ್ಲ ಅಂಕಣದ ಮನೆಗಳಲ್ಲಿ ಹೊಗೆ ತಾಗುವ ಜಾಗದಲ್ಲಿ ಇಡುತ್ತಿದ್ದರು, ಹಾಗಾಗಿ ವರ್ಷಗಟ್ಟಲೇ ಇಟ್ಟರೂ ಕೆಡುತ್ತಿರಲಿಲ್ಲ.
ಈ ವರ್ಷ ಬೆಳೆಗೆ ರೋಗ ತಗಲಿದ್ದು, ಉತ್ಪಾದನೆ ಕಡಿಮೆಯಾಗಿದೆ ಎಂಬುದು ರೈತರ ಅಭಿಪ್ರಾಯ. ಆದರೆ, ಬೇಡಿಕೆ ಹೆಚ್ಚಿದೆ ಎಂಬುವುದು ರೈತರ ಅಭಿಪ್ರಾಯ. ಕಿಲೋಗೆ 80 ರಿಂದ 90 ರುಪಾಯಿ ದರ ನಿಗದಿಯಾಗಿದೆ.
ಈ ಪ್ರದೇಶ ಬಿಟ್ಟು ಬೇರೆಡೆಗೆ ಇದನ್ನು ಬೆಳೆಯಲು ಪ್ರಯತ್ನ ನಡೆದಿತ್ತಾದರೂ ಯಶಸ್ಸು ಸಿಕ್ಕಿಲ್ಲ. ಇಲ್ಲಿನ ಮಣ್ಣಿನಲ್ಲಿ ಮಾತ್ರ ಬೆಳೆಯುವ ಈ ನೀರುಳ್ಳಿ ನಾಲ್ಕು ತಿಂಗಳಿನ ಬೆಳೆ. ಬೀಜ ಬಿತ್ತನೆ ಮಾಡಿ, ಗಿಡ ನಾಟಿ ಮಾಡಿದ ಬಳಿಕ ಎರಡೂವರೆ ತಿಂಗಳ ನಂತರ ಕಟಾವು ಮಾಡುತ್ತಾರೆ. ನೀರುಳ್ಳಿಯ ಎಲೆ ಒಣಗಿದ ಬಳಿಕ ಅದೇ ಒಣಗಿದ ಎಲೆಬಳಸಿ ಜಡೆಯಂತೆ ನೇಯ್ದು ಪೊತ್ತೆ (ಬಂಚ್) ಕಟ್ಟುತ್ತಾರೆ. ಔಷಧೀಯ ಗುಣಗಳ ಈ ಅಪರೂಪದ ನೀರುಳ್ಳಿಯನ್ನು ಸಂರಕ್ಷಿಸಬೇಕಿದೆ.
ಈರುಳ್ಳಿ ನೈಲ್ ಆರ್ಟ್, ವೀಡಿಯೋ ವೈರಲ್
ನೀರುಳ್ಳಿ ಬೆಲೆ ಹಾಗೂ ಇನ್ನಿತರ ಮಾಹಿತಿಗಾಗಿ ಬೆಳೆಗಾರ ನಾರಾಯಣ ಮುಕ್ರಿ (7760915278) ಹಾಗೂ ಮಾರಾಟಗಾರರಾದ ದಿನಕರ ಪಟಗಾರ ಅವರನ್ನು (9008473455) ಸಂಪರ್ಕಿಸಬಹುದು.