
ಉತ್ತರ ಕರ್ನಾಟಕದ ಫೇಮಸ್ ಅಡುಗೆಯಲ್ಲಿ ಪುಂಡಿ ಪಲ್ಯಕ್ಕೆ ಅಗ್ರಸ್ಥಾನ. ಖಡಕ್ ಜೋಳ ಅಥವಾ ಸಜ್ಜೆ ರೊಟ್ಟಿ ಜೊತೆಯಲ್ಲಿ ಪುಂಡಿ ಪಲ್ಯ ಇದ್ರೆ ತಿನ್ನೋರು ಎರಡು ತುತ್ತು ಹೆಚ್ಚು ತಿನ್ನುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಪುಂಡಿಯನ್ನು ಮಾಡೋದನ್ನು ಜನರು ಮರೆತಿದ್ದಾರೆ. ಎಲ್ಲಾ ಪಲ್ಯಗಳಂತೆ ಒಗ್ಗರಣೆ ಹಾಕಿ, ಅಸಲಿ ರುಚಿಯನ್ನೇ ಹದಗೆಡಿಸುತ್ತಾರೆ. ಇಂದು ನಾವು ನಿಮಗೆ ಅಪ್ಪಟ ಉತ್ತರ ಕರ್ನಾಟಕ ಶೈಲಿಯಲ್ಲಿ ಪುಂಡಿ ಪಲ್ಯ ಮಾಡೋದು ಹೇಗೆ ಎಂದು ಹೇಳುತ್ತಿದ್ದೇವೆ.
ಪುಂಡಿ ಪಲ್ಯ: ಒಂದು ಕಟ್ (ಗೊಂಗುರು ಸೊಪ್ಪು)
ಬೆಳ್ಳುಳ್ಳಿ: 6 ರಿಂದ 8 ಎಸಳು
ಜೀರಿಗೆ: 1/2 ಟೀ ಸ್ಪೂನ್
ಹಸಿಮೆಣಸಿನಕಾಯಿ: 6 ರಿಂದ 8
ಕಡಲೆಬೀಜ: 4 ರಿಂದ 5 ಕಾಳು
ಅಡುಗೆಎಣ್ಣೆ: 1 ಟೀ ಸ್ಪೂನ್
ಉಪ್ಪು: ರುಚಿಗೆ ತಕ್ಕಷ್ಟು
ಚಿರೋಟಿ ರವೆ: 1 ಟೀ ಸ್ಪೂನ್
ಮೊದಲಿಗೆ ಮಾರುಕಟ್ಟೆಯಿಂದ ಪುಂಡಿ ಸೊಪ್ಪನ್ನು ಬಿಡಿಸಿಕೊಂಡು ಅಗಲವಾದ ಪಾತ್ರೆಗೆ ಹಾಕಿಕೊಳ್ಳಿ. ಇದರ ಜೊತೆಯಲ್ಲಿ ಹಸಿಮೆಣಸಿನಕಾಯಿ ಸೇರಿಸಿಕೊಳ್ಳಬೇಕು. ನಂತರ ಈ ಪಾತ್ರೆಯನ್ನು ಒಲೆ ಮೇಲಿಟ್ಟು ಒಂದು ಗ್ಲಾಸ್ ನೀರು ಸೇರಿಸಿ 10 ರಿಂದ 15 ನಿಮಿಷ ಕುದಿಸಿಕೊಳ್ಳಿ. ಇಲ್ಲವಾದ್ರೆ ಕುಕ್ಕರ್‌ನಲ್ಲಿ ಪುಂಡಿ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ ಎರಡು ವಿಷಲ್ ಕೂಗಿಸಿಕೊಳ್ಳಬಹುದು.
ತದನಂತರ ಪುಂಡಿ ಸೊಪ್ಪಿನಲ್ಲಿ ಹೆಚ್ಚುವರಿಯಾಗಿರುವ ನೀರನ್ನು ಬೇರ್ಪಡಿಸಿಕೊಳ್ಳಿ. ಈಗ ಪಾತ್ರೆಯನ್ನು ಒಲೆ ಮೇಲಿಟ್ಟುಕೊಂಡು ಇದಕ್ಕೆ ಬೆಳ್ಳುಳ್ಳಿ, ಜೀರಿಗೆ, ರವೆ, ಅಡುಗೆಎಣ್ಣೆ, ಚಿರೋಟಿ ರವೆ, ಫ್ರೈ ಮಾಡಿಕೊಂಡು ತರಿತರಿಯಾಗಿ ಜಜ್ಜಿಕೊಂಡಿರುವ ಶೇಂಗಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ. ನಂತರ ಅರ್ಧ ಕಪ್‌ನಷ್ಟು ನೀರು ಸೇರಿಸಿ ಕಡಿಮೆ ಉರಿಯಲ್ಲಿ ನಾಲ್ಕರಿಂದ ಐದು ನಿಮಿಷ ಬೇಯಿಸಿಕೊಳ್ಳಬೇಕು.
ಪುಂಡಿಸೊಪ್ಪನ್ನು ಬೇಯಿಸಿಕೊಳ್ಳುವಾಗ ನಿರಂತರವಾಗಿ ಮಿಕ್ಸ್ ಮಾಡಿಕೊಳ್ಳುತ್ತಿರಬೇಕು. ಇಲ್ಲವಾದ್ರೆ ನೀವು ಮಾಡುತ್ತಿರುವ ಪಲ್ಯ ತಳ ಹಿಡಿಯೋ ಸಾಧ್ಯತೆ ಹೆಚ್ಚಿರುತ್ತದೆ. ಸೊಪ್ಪಿನೊಂದಿಗೆ ರವೆ ಚೆನ್ನಾಗಿ ಮಿಕ್ಸ್ ಆಗಿ ಸಾಫ್ಟ್ ಆದ್ರೆ ರುಚಿಯಾದ ಪುಂಡಿಪಲ್ಯ ಸವಿಯಲು ಸಿದ್ಧವಾಗುತ್ತದೆ. ಈ ಸಮಯದಲ್ಲಿ ಪರಿಮಳಕ್ಕಾಗಿ ಸಣ್ಣದಾಗಿ ಕೊಚ್ಚಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿಕೊಳ್ಳಬಹುದು.
ಗಮನಿಸಿ:
(ಪುಂಡಿಪಲ್ಯ ಮಾಡುವಾಗ ಕೆಲವರು ನಾಲ್ಕರಿಂದ ಐದು ಚವಳೆಕಾಯಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಒಂದಿಷ್ಟು ಜನರು ಬೇಯಿಸಿಕೊಂಡಿರುವ ಹೆಸರುಕಾಳು ಸಹ ಸೇರಿಸಿಕೊಳ್ಳುತ್ತಾರೆ. ಚಿರೋಟಿ ರವೆ, ಚವಳೆಕಾಯಿ, ಹೆಸರುಕಾಳು ಈ ಮೂರು ಪದಾರ್ಥ ಪುಂಡಿಪಲ್ಯಗೆ ಸರಿಯಾಗಿ ಅಡ್ಜಸ್ಟ್ ಆಗುತ್ತದೆ. ಬೇಕಿದ್ರೆ ತುಂಡು ಬೆಲ್ಲ ಸೇರಿಸಿಕೊಳ್ಳಬಹುದು)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.