ಬಹುತೇಕರ ಮನೆಯಲ್ಲಿ ಇಡ್ಲಿ ಮಾಡಿದಾಗ "ಇಡ್ಲಿ ಕಲ್ಲಿನಂತಾಗಿದೆ", "ಬಣ್ಣ ಸರಿಯಾಗಿಲ್ಲ", "ಮುರಿದು ಹೋಗುತ್ತಿದೆ" ಎಂಬ ದೂರುಗಳು ಸಾಮಾನ್ಯ. ಸಾಫ್ಟ್ ಆಗಿ ಬರಲಿ ಎಂದು ಹಲವರು ಅಡುಗೆ ಸೋಡಾ ಬಳಸುತ್ತಾರೆ. ಆದರೆ, ಯಾವುದೇ ಸೋಡಾ ಬಳಸದೆ ಹೋಟೆಲ್ ಶೈಲಿಯ ಬೆಳ್ಳನೆಯ, ಮೃದುವಾದ ಇಡ್ಲಿ ಮಾಡಲು ಹಿಟ್ಟು ರುಬ್ಬುವುದರಿಂದ ಹಿಡಿದು ಬೇಯಿಸುವವರೆಗೂ ಈ 10 ಸೀಕ್ರೆಟ್ ನಿಯಮಗಳನ್ನು ಪಾಲಿಸಿ..
ಉದ್ದಿನಬೇಳೆ: 1 ಕಪ್
ಇಡ್ಲಿ ಅಕ್ಕಿ ಅಥವಾ ರೇಷನ್ ದಪ್ಪ ಅಕ್ಕಿ : 4 ಕಪ್ (ಅಳತೆ 1:4 ಇರಬೇಕು. ಅಂದರೆ 1 ಕಪ್ ಉದ್ದಿನಬೇಳೆಗೆ 3.5 ರಿಂದ 4 ಕಪ್ಗಿಂತ ಹೆಚ್ಚು ಅಥವಾ ಕಡಿಮೆ ಅಕ್ಕಿ ಹಾಕಬಾರದು).
ಸೋಡಾ ಬಳಸಬೇಡಿ
ಇಡ್ಲಿಗೆ ಸೋಡಾ ಹಾಕಲೇಬಾರದು. ಸೋಡಾ ಹಾಕಿದರೆ ಇಡ್ಲಿ ಹಳದಿಯಾಗುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದಲ್ಲ. ಸರಿಯಾಗಿ ಹಿಟ್ಟು ರುಬ್ಬಿದರೆ ಸೋಡಾ ಇಲ್ಲದೆಯೇ ಇಡ್ಲಿ ಹೂವಿನಂತೆ ಬರುತ್ತದೆ.
ನೆನೆಸುವ ಸಮಯ (2 ರಿಂದ 3 ಗಂಟೆ ಮಾತ್ರ)
ಅಕ್ಕಿ ಮತ್ತು ಉದ್ದಿನಬೇಳೆಯನ್ನು ಕೇವಲ 2 ರಿಂದ 3 ಗಂಟೆಗಳ ಕಾಲ ಮಾತ್ರ ನೆನೆಸಬೇಕು. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಸಮಯ ನೆನೆಸಬಾರದು.
ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ, ಮೊದಲು ರುಬ್ಬಿ
ಅಕ್ಕಿ ಮತ್ತು ಉದ್ದಿನಬೇಳೆಯನ್ನು ಒಟ್ಟಿಗೆ ರುಬ್ಬಬಾರದು. ಯಾವಾಗಲೂ ಗ್ರೈಂಡರ್ಗೆ ಮೊದಲು ಉದ್ದಿನಬೇಳೆಯನ್ನೇ ಹಾಕಿ ರುಬ್ಬಬೇಕು.
ಉದ್ದಿನಬೇಳೆಗೆ ಒಟ್ಟಿಗೆ ನೀರು ಹಾಕಬೇಡಿ
ಉದ್ದಿನಬೇಳೆ ರುಬ್ಬುವಾಗ ಆರಂಭದ 5 ನಿಮಿಷ ನೀರು ಹಾಕದೆ ರುಬ್ಬಿ. ನಂತರ ಪ್ರತಿ 5 ನಿಮಿಷಕ್ಕೊಮ್ಮೆ 2-3 ಚಮಚದಂತೆ ಸ್ವಲ್ಪ ಸ್ವಲ್ಪವೇ ನೀರು ಚಿಮುಕಿಸುತ್ತಾ ಬರೋಬ್ಬರಿ 20-25 ನಿಮಿಷ ರುಬ್ಬಿ. ಅದು ಕೇಕ್ ಕ್ರೀಮ್ನಂತೆ ಉಬ್ಬಿ (Fluffy) ಹಗುರವಾಗಬೇಕು.
ಅಕ್ಕಿ ರವೆಯ ಹದದಲ್ಲಿರಲಿ
ಉದ್ದಿನಬೇಳೆ ತೆಗೆದ ನಂತರ ಅಕ್ಕಿ ರುಬ್ಬಿ. ಅಕ್ಕಿಯನ್ನು ನುಣ್ಣಗೆ ಪೇಸ್ಟ್ ಮಾಡಬಾರದು. ಸಣ್ಣ ರವೆಯ ಹದದಲ್ಲಿ (Grainy) ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿದರೆ ಇಡ್ಲಿ ಜಿಗುಟಾಗುತ್ತದೆ.
ಕೈಯಿಂದಲೇ ಕಲಸಿ
ಅಕ್ಕಿ ಮತ್ತು ಉದ್ದಿನ ಹಿಟ್ಟನ್ನು ಪಾತ್ರೆಗೆ ಹಾಕಿ ಉಪ್ಪು ಸೇರಿಸಿ ಕೈಯಿಂದಲೇ ಚೆನ್ನಾಗಿ ಮಿಕ್ಸ್ ಮಾಡಿ. ಕೈಯಲ್ಲಿರುವ ನೈಸರ್ಗಿಕ ಉಷ್ಣತೆಯು ಹಿಟ್ಟು ಬೇಗ ಹುದುಗು ಬರಲು (Fermentation) ಸಹಾಯ ಮಾಡುತ್ತದೆ.
8 ಗಂಟೆಗಳ ಹುದುಗುವಿಕೆ
ಹಿಟ್ಟನ್ನು ಮುಚ್ಚಿಟ್ಟು ಕನಿಷ್ಠ 8 ಗಂಟೆಗಳ ಕಾಲ ಹುದುಗಲು (ಹುಳಿ ಬರಲು) ಬಿಡಿ. ಹಿಟ್ಟು 30% ರಿಂದ 40% ಉಬ್ಬಿ ಹಗುರವಾಗಿರಬೇಕು.
ಇಡ್ಲಿ ತಟ್ಟೆಗೆ ಎಣ್ಣೆ ಅಥವಾ ಬಟ್ಟೆ
ಇಡ್ಲಿ ತಟ್ಟೆಗೆ ಹತ್ತಿ ಬಟ್ಟೆ (Idli Cloth) ಹಾಕಿ ಹಿಟ್ಟು ಹಾಕಿದರೆ ಇಡ್ಲಿ ಅಂಚುಗಳು ಮುರಿಯದೆ ಸುಂದರವಾಗಿ ಬರುತ್ತವೆ. ಬಟ್ಟೆ ಇಲ್ಲದಿದ್ದರೆ ಲಘುವಾಗಿ ಎಣ್ಣೆ ಸವರಿ.
ನೀರು ಕುದಿಯುವಾಗ ಮಾತ್ರ ಇಡ್ಲಿ ಪಾತ್ರೆ ಇಡಿ
ಇಡ್ಲಿ ಪಾತ್ರೆಯಲ್ಲಿ ನೀರು ಚೆನ್ನಾಗಿ ಕುದಿಯಲು ಆರಂಭಿಸಿದ ನಂತರವಷ್ಟೇ ಇಡ್ಲಿ ತಟ್ಟೆಗಳನ್ನು ಒಳಗೆ ಇಡಬೇಕು.
ಬೇಯಿಸುವ ಸಮಯ (ಕೇವಲ 3 ರಿಂದ 4 ನಿಮಿಷ)
ಇಡ್ಲಿಯನ್ನು ಅತಿಯಾಗಿ ಬೇಯಿಸಬೇಡಿ. ಹಿಟ್ಟು ಸರಿಯಾಗಿದ್ದರೆ ಇಡ್ಲಿ ಕೇವಲ 3 ರಿಂದ 4 ನಿಮಿಷದಲ್ಲಿ ಬೆಂದುಬಿಡುತ್ತದೆ. 5 ನಿಮಿಷಕ್ಕಿಂತ ಹೆಚ್ಚು ಬೇಯಿಸಿದರೆ ಇಡ್ಲಿ ಗಟ್ಟಿಯಾಗಿ ಕಲ್ಲಿನಂತಾಗುತ್ತದೆ.
ಇಡ್ಲಿ ಬೆಂದಿದೆಯೇ ಎಂದು ಪರೀಕ್ಷಿಸುವುದು ಹೇಗೆ?
ಬೆರಳಿಗೆ ಸ್ವಲ್ಪ ನೀರು ಸವರಿಕೊಂಡು ಇಡ್ಲಿಯನ್ನು ಮುಟ್ಟಿ ನೋಡಿ. ಹಿಟ್ಟು ಕೈಗೆ ಅಂಟಿಕೊಳ್ಳದಿದ್ದರೆ ಇಡ್ಲಿ ಪರ್ಫೆಕ್ಟ್ ಆಗಿ ಬೆಂದಿದೆ ಎಂದರ್ಥ. ತಕ್ಷಣ ಒಲೆಯಿಂದ ಕೆಳಗಿಳಿಸಿ, ಚಮಚದಿಂದ ತೆಗೆದರೆ ಮಲ್ಲಿಗೆ ಹೂವಿನಂತಹ ಸಾಫ್ಟ್ ಇಡ್ಲಿ ಸವಿಯಲು ಸಿದ್ಧ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.