ಹೋಟೆಲ್‌ನಲ್ಲಿ ಕುಷ್ಕ ಕೇಳಬೇಡಿ: ಮನೇಲೆ 10 ನಿಮಿಷದಲ್ಲಿ ಘಮಘಮಿಸುವ ಸಿಂಪಲ್ ವೆಜ್ ಕುಷ್ಕ! ರೆಸಿಪಿ ಇಲ್ಲಿದೆ

Published : Nov 15, 2026, 09:21 PM IST
Hotel style Veg Kuska

ಸಾರಾಂಶ

ಬಿರಿಯಾನಿಗಿಂತಲೂ ಸರಳವಾದ ಕುಷ್ಕವನ್ನು ಮನೆಯಲ್ಲೇ ಕುಕ್ಕರ್‌ನಲ್ಲಿ ಕೇವಲ 15 ನಿಮಿಷದಲ್ಲಿ ತಯಾರಿಸುವ ಸುಲಭ ವಿಧಾನ ಇಲ್ಲಿದೆ. ಇದಕ್ಕೆ ಬೇಕಾಗುವ ಪದಾರ್ಥಗಳು ಮತ್ತು ಮಾಡುವ ಸರಳ ವಿಧಾನದ ಸಂಪೂರ್ಣ ವಿವರ ಇಲ್ಲಿದೆ.

ಸಾಮಾನ್ಯವಾಗಿ ಮಿಲಿಟರಿ ಹೋಟೆಲ್ ಅಥವಾ ಬಿರಿಯಾನಿ ಅಂಗಡಿಗಳಿಗೆ ಹೋದಾಗ "ಯಜಮಾನರೇ ಒಂದು ಪ್ಲೇಟ್ ಕುಷ್ಕ ಕೊಡಿ" ಎಂದು ಕೇಳುವುದು ಪ್ರತಿಯೊಬ್ಬರ ಅಭ್ಯಾಸ. ಬಿರಿಯಾನಿಗಿಂತಲೂ ಸರಳವಾಗಿದ್ದರೂ, ಕುಷ್ಕ ಅನ್ನದ ಘಮ ಮತ್ತು ರುಚಿಯೇ ಬೇರೆ. ಆದರೆ ಇದೇ ಹೋಟೆಲ್ ಶೈಲಿಯ ಸಖತ್ ಟೇಸ್ಟಿ ಕುಷ್ಕವನ್ನು ಮನೆಯಲ್ಲೇ ಕುಕ್ಕರ್‌ನಲ್ಲಿ ಕೇವಲ 10 ರಿಂದ 15 ನಿಮಿಷದಲ್ಲಿ ತಯಾರಿಸಬಹುದು ಎಂದರೆ ನೀವು ನಂಬಲೇಬೇಕು!

ಮಾಂಸಾಹಾರಿಗಳಷ್ಟೇ ಅಲ್ಲದೆ ಸಸ್ಯಾಹಾರಿಗಳಿಗೂ ಇಷ್ಟವಾಗುವ, ಜೊತೆಯಲ್ಲಿ ಮೊಟ್ಟೆ ಅಥವಾ ರೈತಾದೊಂದಿಗೆ ಸವಿಯಬಹುದಾದ ಸಿಂಪಲ್ ‘ವೆಜ್ ಕುಷ್ಕ’ (Veg Kuska) ಮಾಡುವ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

  • ಅಕ್ಕಿ (ಜೀರಾ ಸಾಂಬಾ ಅಥವಾ ಸೋನಾ ಮಸೂರಿ): 1 ಕಪ್
  • ನೀರು: 2 ಕಪ್ (ಅಕ್ಕಿಯ ಎರಡರಷ್ಟು)
  • ತುಪ್ಪ: 1 ರಿಂದ 2 ಚಮಚ
  • ಅಡುಗೆ ಎಣ್ಣೆ: 2 ಚಮಚ
  • ಚಕ್ಕೆ, ಲವಂಗ, ಏಲಕ್ಕಿ: ತಲಾ 2-3
  • ಈರುಳ್ಳಿ: 1 (ಉದ್ದಕ್ಕೆ ಹೆಚ್ಚಿದ್ದು)
  • ಟೊಮೆಟೊ: 1 (ಉದ್ದಕ್ಕೆ ಹೆಚ್ಚಿದ್ದು)
  • ಹಸಿಮೆಣಸಿನಕಾಯಿ: 2 (ಸೀಳಿದ್ದು)
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಚಮಚ
  • ತಾಜಾ ಮೊಸರು: 1 ಸಣ್ಣ ಕಪ್
  • ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್: 1 ಚಮಚ (ಉತ್ತಮ ಬಣ್ಣಕ್ಕಾಗಿ)
  • ಮನೆಯ ಖಾರದ ಪುಡಿ: ಅರ್ಧ ಚಮಚ
  • ಅರಿಶಿನ ಪುಡಿ: ಚಿಟಿಕೆ
  • ಪುದೀನಾ ಮತ್ತು ಕೊತ್ತಂಬರಿ ಸೊಪ್ಪು: ಸಣ್ಣಗೆ ಹೆಚ್ಚಿದ್ದು (ಅರ್ಧ ಕಪ್)
  • ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ಸರಳ ವಿಧಾನ (Step-by-Step):

ಮಸಾಲೆ ಒಗ್ಗರಣೆ: ಮೊದಲು ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಬಿಸಿ ಮಾಡಿ. ಅದಕ್ಕೆ 1 ಚಮಚ ತುಪ್ಪ ಮತ್ತು 2 ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಚಕ್ಕೆ, ಲವಂಗ ಮತ್ತು ಏಲಕ್ಕಿ ಹಾಕಿ ಲಘುವಾಗಿ ಹುರಿಯಿರಿ.

ಈರುಳ್ಳಿ ಮತ್ತು ಮಸಾಲೆ ಫ್ರೈ ಮಾಡಿ:

ಈಗ ಸ್ಲೈಸ್ ಆಗಿ ಕಟ್ ಮಾಡಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಉತ್ತಮ ಬಣ್ಣ ಬರಲು ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್, ಸೀಳಿದ ಹಸಿಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಹಾಗೂ ಪುದೀನಾ ಸೊಪ್ಪು ಸೇರಿಸಿ. ಜೊತೆಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹಸಿವಾಸನೆ ಹೋಗುವವರೆಗೆ ಚೆನ್ನಾಗಿ ಬಾಡಿಸಿ.

ಮೊಸರು ಮತ್ತು ಟೊಮೆಟೊ ಸೇರಿಸಿ: ಮಸಾಲೆ ಚೆನ್ನಾಗಿ ಬೆಂದ ನಂತರ 1 ಕಪ್ ಮೊಸರು, ಚಿಟಿಕೆ ಅರಿಶಿನ, ಮನೆಯಲ್ಲೇ ತಯಾರಿಸಿದ ಖಾರದ ಪುಡಿ ಹಾಗೂ ಉದ್ದಕ್ಕೆ ಕತ್ತರಿಸಿದ ಟೊಮೆಟೊ ಹಾಕಿ ಎಣ್ಣೆ ಬಿಡುವವರೆಗೆ ಮತ್ತೊಮ್ಮೆ ಫ್ರೈ ಮಾಡಿಕೊಳ್ಳಿ.

ನೀರು ಮತ್ತು ಅಕ್ಕಿ ಸೇರಿಸಿ: ನೀವು ಎಷ್ಟು ಕಪ್ ಅಕ್ಕಿ ತೆಗೆದುಕೊಳ್ಳುತ್ತೀರೋ ಅದರ ಎರಡರಷ್ಟು (1:2 ಅನುಪಾತ) ನೀರನ್ನು ಕುಕ್ಕರ್‌ಗೆ ಸೇರಿಸಿ ಕುದಿಯಲು ಬಿಡಿ. ನೀರು ಚೆನ್ನಾಗಿ ಕುದಿ ಬಂದ ತಕ್ಷಣ, ತೊಳೆದಿಟ್ಟ ಅಕ್ಕಿಯನ್ನು ಹಾಕಿ ಒಮ್ಮೆ ತಿರುವಿ.

1 ವಿಸಿಲ್ ಕೂಗಿಸಿ: ಕೊನೆಯದಾಗಿ ಮೇಲೆ ಒಂದು ಚಮಚ ತುಪ್ಪವನ್ನು ಬಿಟ್ಟು, ಕುಕ್ಕರ್ ಮುಚ್ಚಳ ಮುಚ್ಚಿ ಕೇವಲ ಒಂದು ವಿಸಿಲ್ (1 Whistle) ಕೂಗಿಸಿಕೊಳ್ಳಿ.

ಪ್ರೆಷರ್ ಸಂಪೂರ್ಣವಾಗಿ ಇಳಿದ ನಂತರ ಕುಕ್ಕರ್ ಮುಚ್ಚಳ ತೆರೆದರೆ, ಘಮಘಮಿಸುವ ಹೋಟೆಲ್ ಶೈಲಿಯ ಸೂಪರ್ ಟೇಸ್ಟಿ ‘ವೆಜ್ ಕುಷ್ಕ’ ಸವಿಯಲು ಸಿದ್ಧ!

ಸರ್ವಿಂಗ್ ಟಿಪ್ಸ್:

ಈ ಘಮಘಮಿಸುವ ಕುಷ್ಕವನ್ನು ಈರುಳ್ಳಿ-ಸೌತೆಕಾಯಿ ರೈತಾ, ವೆಜ್ ಕುರ್ಮಾ ಅಥವಾ ಬೇಯಿಸಿದ ಮೊಟ್ಟೆಯೊಂದಿಗೆ ಸವಿದರೆ ರುಚಿ ದುಪ್ಪಟ್ಟಾಗುತ್ತದೆ.

ವಾರಾಂತ್ಯದ ಮಧ್ಯಾಹ್ನದ ಊಟಕ್ಕೆ ಅಥವಾ ಮಕ್ಕಳಿಗೆ ಲಂಚ್ ಬಾಕ್ಸ್‌ಗೆ ಇದು ಅತ್ಯುತ್ತಮ ಮತ್ತು ತ್ವರಿತ ಅಡುಗೆಯಾಗಿದೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿಕ್ಕ ಏಲಕ್ಕಿಯ ದೊಡ್ಡ ಮಹಿಮೆ, ಪ್ರತಿ ದಿನ ತಿಂದರೆ ನಿಮ್ಮ ಆರೋಗ್ಯಕ್ಕೆ 7 ಸೂಪರ್ ಪವರ್!
ನೆಲದ ಮೇಲೆ ಕುಳಿತು ಮಟನ್ ಊಟ ಮಾಡಿದ ವಿಶ್ವಕಪ್ ಗೆದ್ದುಕೊಟ್ಟ ನಾಯಕ..! ಸೂರ್ಯಕುಮಾರ್ ಯಾದವ್ ಸರಳತೆಗೆ ಮನಸೋತ ಫ್ಯಾನ್ಸ್