
ಮುಂಬೈ: ಖ್ಯಾತ ಕ್ವಿಕ್ ಕಾಮರ್ಸ್ ಕಂಪನಿ 'ಬ್ಲಿಂಕಿಟ್' (Blinkit) ಮೇಲೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ದಾಳಿ ನಡೆಸಿದ್ದು ಗಂಭೀರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮಳಿಗೆಯ ಪರವಾನಗಿಯನ್ನು (License) ಅಮಾನತುಗೊಳಿಸಿದೆ.
ಮಹಾರಾಷ್ಟ್ರದಲ್ಲಿ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ ನೇತೃತ್ವದಲ್ಲಿ ಅಶುಚಿಯಾದ ಮತ್ತು ಅಸುರಕ್ಷಿತ ಆಹಾರ ಪದಾರ್ಥಗಳ ವಿರುದ್ಧ ಸಮರ ಸಾರಲಾಗಿದೆ. ಇದರ ಭಾಗವಾಗಿ ಮುಂಬೈನ ಮಲಾಡ್ (ಪಶ್ಚಿಮ) ಭಾಗದಲ್ಲಿರುವ ಬ್ಲಿಂಕ್ ಕಾಮರ್ಸ್ ಪ್ರೈವೇಟ್ ಲಿಮಿಟೆಡ್ (Blink Commerce Pvt Ltd) ಮಳಿಗೆಯ ಮೇಲೆ ಎಫ್‌ಡಿಎ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿನ ಭೀಕರ ಪರಿಸ್ಥಿತಿ ಕಂಡು ಅಧಿಕಾರಿಗಳೇ ದಸ್ತೇಬಾಜಾಗಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರ ಅಡಿಯಲ್ಲಿ ಬ್ಲಿಂಕಿಟ್‌ನ ಈ ಮಳಿಗೆಯ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ಕೇಂದ್ರದಿಂದ ಯಾವುದೇ ರೀತಿಯ ಆಹಾರ ಪದಾರ್ಥಗಳ ಮಾರಾಟ ಅಥವಾ ವಿತರಣೆ ಮಾಡುವಂತಿಲ್ಲ ಎಂದು ಎಫ್‌ಡಿಎ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಒಂದು ವೇಳೆ ಅಮಾನತು ಅವಧಿಯಲ್ಲಿ ವ್ಯಾಪಾರ ಮುಂದುವರಿಸಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಮುಂಬೈ ಮತ್ತು ಮಹಾರಾಷ್ಟ್ರದಾದ್ಯಂತ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಎಫ್‌ಡಿಎ ತಿಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.